ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಮಾಹಿತಿ ಒಂದೇ ವೇದಿಕೆಯಲ್ಲಿ

ಇಲಾಖಾವಾರು ಸಂಪೂರ್ಣ ಮಾಹಿತಿ ಒದಗಿಸಲು ಸಿಇಒ ಶುಭಾ ಕಲ್ಯಾಣ್ ಸೂಚನೆ
Last Updated 5 ಡಿಸೆಂಬರ್ 2019, 9:11 IST
ಅಕ್ಷರ ಗಾತ್ರ

ತುಮಕೂರು: ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಯಕ್ರಮಗಳ ಜಿಲ್ಲಾ ಮಾಹಿತಿ ಒಂದೇ ವೇದಿಕೆಯಲ್ಲಿ ಸಿಗುವಂತೆ ಮಾಡಲು ಜಿಲ್ಲಾ ಪಂಚಾಯಿತಿ ಯೋಜನೆ ರೂಪಿಸಿದ್ದು, ಇಲಾಖಾವಾರು ಸಂಪೂರ್ಣ ಮಾಹಿತಿ ಒದಗಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ (ಸಿಇಒ) ಶುಭಾ ಕಲ್ಯಾಣ್ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಇಲಾಖಾ ಕಾರ್ಯಕ್ರಮಗಳ ಲೇಯರ್ಸ್‍ಗಳನ್ನು ಸಿದ್ಧಪಡಿಸುವ ಸಂಬಂಧ ತಾಂತ್ರಿಕ ತಜ್ಞರೊಂದಿಗೆ ನಡೆದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.

ಜಿಲ್ಲೆಯಲ್ಲಿರುವ ಕೊಳವೆಬಾವಿ, ನದಿ, ಕೆರೆ, ಕಟ್ಟೆ, ತೆರೆದ ಬಾವಿ, ಹಳ್ಳ, ಕಾಲುವೆ ಸೇರಿದಂತೆ ಎಲ್ಲ ಜಲಮೂಲಗಳ ಮಾಹಿತಿಯನ್ನು ನೀಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಜಿಲ್ಲೆಯಲ್ಲಿರುವ ಅಂಗನವಾಡಿ ಕೇಂದ್ರಗಳು, ಅಂಗನವಾಡಿಗೆ ಬರುವ ಮಕ್ಕಳ ಸಂಖ್ಯೆ ಮತ್ತು ಮಾತೃಪೂರ್ಣ ಯೋಜನೆ ಸೌಲಭ್ಯ ಪಡೆಯುತ್ತಿರುವ ಗರ್ಭಿಣಿಯರ ವಿವರಗಳ ಮಾಹಿತಿಯನ್ನು ನೀಡಬೇಕು. ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಬಾಡಿಗೆ, ಸ್ವಂತ ಕಟ್ಟಡದಲ್ಲಿರುವ ಹಾಸ್ಟೆಲ್‍ಗಳು ಹಾಗೂ ಸೌಲಭ್ಯ ಪಡೆದಿರುವ ವಿದ್ಯಾರ್ಥಿಗಳ ವಿವರಗಳನ್ನು ಒದಗಿಸಬೇಕು ಎಂದರು.

ಆರೋಗ್ಯ ಇಲಾಖೆಯು ಜಿಲ್ಲೆಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಪ್ರಯೋಗಾಲಯ, ಟ್ರಾಮಾಕೇರ್, ಆ್ಯಂಬುಲೆನ್ಸ್ ಇರುವ ಸ್ಥಳ, ಹೊರ, ಒಳ ರೋಗಿಗಳ ವಿವರ ಹಾಗೂ ಪ್ರವಾಸೋದ್ಯಮ ಇಲಾಖೆಯು ಪ್ರವಾಸಿ ತಾಣಗಳ ಛಾಯಾಚಿತ್ರಗಳನ್ನೊಳಗೊಂಡ ಮಾಹಿತಿ ನೀಡಬೇಕು. ಅಲ್ಲದೇ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆಯು ಜಿಲ್ಲೆಯಲ್ಲಿರುವ ಕೃಷಿ ಹೊಂಡ ಹಾಗೂ ಎಷ್ಟು ಹೆಕ್ಟೇರ್‌ಗಳಲ್ಲಿ ಬೆಳೆ ಬೆಳೆದಿದ್ದಾರೆ ಎಂಬ ಮಾಹಿತಿ ನೀಡಬೇಕು ಎಂದು ನಿರ್ದೇಶನ ನೀಡಿದರು.

ಪಶು ಸಂಗೋಪನೆ ಇಲಾಖೆಯು ಜಿಲ್ಲೆಯಲ್ಲಿರುವ ಪಶು ಆಸ್ಪತ್ರೆ, ಮೇವು ಕೇಂದ್ರಗಳು, ಜಾನುವಾರಗಳ ಸಂಖ್ಯೆಯ ವಿವರಗಳನ್ನು ನೀಡಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ದಿಶಾ ಸಮಿತಿ ಸದಸ್ಯ ಕುಂದರನಹಳ್ಳಿ ರಮೇಶ್, ಯೋಜನಾ ವಿಜ್ಞಾನಿ ಮೊಹಮ್ಮದ್ ಸಲೀಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್.ನಟರಾಜ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಚಂದ್ರಿಕಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

ಜಿಪಿಎಸ್ ಮ್ಯಾಪಿಂಗ್ ಯೋಜನೆ

ರಾಜ್ಯದಲ್ಲಿಯೇ ಮೊದಲ ಬಾರಿಗೆ ಜಿಪಿಎಸ್ ಮ್ಯಾಪಿಂಗ್ ಯೋಜನೆಯನ್ನು ತುಮಕೂರು ಜಿಲ್ಲೆಯಲ್ಲಿ ಪ್ರಾರಂಭಿಸಿದ್ದು, ಜಿಲ್ಲೆಯ ಇಲಾಖೆಗಳಡಿ ಕೈಗೊಂಡಿರುವ ಯೋಜನೆಗಳು, ಕಾಮಗಾರಿಗಳ ವಿವರಗಳನ್ನು ಡಿ. 19ರಂದು ನಡೆಯುವ ಸಭೆಯೊಳಗಾಗಿ ಸಂಪೂರ್ಣ ಮಾಹಿತಿಯನ್ನು ನೀಡಿ ಸಹಕರಿಸಿ ಎಂದು ಸಿಇಒ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT