ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಗಿ ಖರೀದಿಗೆ ಚಾಲನೆ: ಕ್ವಿಂಟಲ್‌ಗೆ ₹3,377

ತಿಪಟೂರು, ಕುಣಿಗಲ್‌ನಲ್ಲಿ ಹೆಚ್ಚುವರಿ ಕೇಂದ್ರ ಸ್ಥಾಪನೆಗೆ ನಿರ್ಧಾರ
Last Updated 25 ಡಿಸೆಂಬರ್ 2021, 5:36 IST
ಅಕ್ಷರ ಗಾತ್ರ

ತುಮಕೂರು: ರೈತರಿಂದ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿ ಪ್ರಕ್ರಿಯೆ ಜ. 21ರಿಂದ ಪ್ರಾರಂಭವಾಗಲಿದೆ. ಪ್ರತಿ ಕ್ವಿಂಟಲ್‌ ₹3,377 ದರ ನಿಗದಿ ಪಡಿಸಲಾಗಿದೆ.

ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಮಾತನಾಡಿ, ‘ಮುಂಗಾರು ಋತುವಿನ ಅವಧಿಗೆ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಗೆ ಜ. 1ರಿಂದ 20ರ ವರೆಗೆ ನೋಂದಣಿ ಮಾಡಿಕೊಳ್ಳಲು ರೈತರಿಗೆ ಅವಕಾಶ ನೀಡಲಾಗಿದೆ’ ಎಂದು ಹೇಳಿದರು.

ರೈತರಿಂದ ಪ್ರತಿ ಎಕರೆಗೆ 10 ಕ್ವಿಂಟಲ್‍ನಂತೆ ಗರಿಷ್ಠ 20 ಕ್ವಿಂಟಲ್‍ವರೆಗೆ ಮಾತ್ರ ಖರೀದಿಸಲಾಗುವುದು. ಸರ್ಕಾರ ನಿಗದಿಪಡಿಸಿದ ಪ್ರಮಾಣವನ್ನು ಮೀರಿ ಹೆಚ್ಚುವರಿಯಾಗಿ ರಾಗಿಯನ್ನು ಖರೀದಿಸುವಂತಿಲ್ಲ.
ಬೆಂಬಲ ಬೆಲೆಯಲ್ಲಿ ರಾಗಿ ಖರೀದಿ ಹಾಗೂ ನೋಂದಣಿ ಪ್ರಕ್ರಿಯೆಯಲ್ಲಿ ಬೋಗಸ್ ಗ್ರೇಡಿಂಗ್, ಮತ್ತಿತರ ಲೋಪವೆಸಗುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ರೈತರು ಆಯಾ ಖರೀದಿ ಕೇಂದ್ರಗಳಲ್ಲಿ ಆನ್‍ಲೈನ್ ಮೂಲಕ ಕೃಷಿ ಇಲಾಖೆ ನೀಡಿರುವ ‘ಫ್ರೂಟ್ಸ್ ಐಡಿ’ಯನ್ನು ಹಾಜರುಪಡಿಸಿ ನೋಂದಣಿ ಮಾಡಿಕೊಳ್ಳಬಹುದು. ಸರ್ಕಾರ ನಿಗದಿಪಡಿಸಿರುವ ಮಾನದಂಡವನ್ನು ಅನುಸರಿಸಿ ಎಫ್ಎಕ್ಯೂ ಗುಣಮಟ್ಟದ ರಾಗಿಯನ್ನು ಮಾತ್ರ ಖರೀದಿ ಮಾಡಬೇಕು. ಕಳಪೆ ಗುಣಮಟ್ಟದ ರಾಗಿ ಖರೀದಿಯಾದರೆ ಸಂಬಂಧಿಸಿದ ಖರೀದಿ ಅಧಿಕಾರಿ ಮತ್ತು ಕೃಷಿ ಇಲಾಖೆಯ ಗ್ರೇಡರ್‌ಗಳನ್ನೇ ಜವಾಬ್ದಾರಿ ಮಾಡಲಾಗುವುದು ಎಂದು ತಿಳಿಸಿದರು.

ತಿಪಟೂರು ಹಾಗೂ ಕುಣಿಗಲ್ ತಾಲ್ಲೂಕುಗಳಲ್ಲಿ ಖರೀದಿ ಪ್ರಮಾಣ ಹೆಚ್ಚಾಗುವ ಸಂಭವವಿರುವುದರಿಂದ ಹೆಚ್ಚುವರಿ ಸಿಬ್ಬಂದಿ ಹಾಗೂ ನುರಿತ ಗ್ರೇಡರ್‌ಗಳನ್ನು ನೇಮಿಸಬೇಕು. ಖರೀದಿ ಪ್ರಕ್ರಿಯೆಗೆ
ನಿಯೋಜಿಸುವ ಗ್ರೇಡರ್‌ಗಳಿಗೆ ಅಗತ್ಯ ತರಬೇತಿ ನೀಡಬೇಕು. ಖರೀದಿ ಪ್ರಕ್ರಿಯೆಯು ಮಾರ್ಚ್ 31ರವರೆಗೆ ನಡೆಯಲಿದ್ದು, ರೈತರಿಗೆ ಸಮಸ್ಯೆಯಾಗದಂತೆ ಯಾವುದೇ ದೂರು ಬಾರದಂತೆ ಖರೀದಿ ಪ್ರಕ್ರಿಯೆಯನ್ನು ವ್ಯವಸ್ಥಿತವಾಗಿ ನಡೆಸುವಂತೆ ಸೂಚಿಸಿದರು.

ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ 83,292 ಮೆಟ್ರಿಕ್ ಟನ್ ರಾಗಿ ಖರೀದಿಯಾಗಿದ್ದು, ಈ ಸಾಲಿನಲ್ಲಿಯೂ ಕೂಡ ಹೆಚ್ಚಿನ ಪ್ರಮಾಣದಲ್ಲಿ ರಾಗಿ ಬರಬಹುದೆಂದು ಅಂದಾಜಿಸಲಾಗಿದೆ. ರಾಗಿ ಖರೀದಿ ಕೇಂದ್ರಗಳನ್ನು ಎಪಿಎಂಸಿ ಆವರಣಗಳಲ್ಲಿ ತೆರೆಯಬೇಕು. ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ ತೆರೆಯಲಾಗಿದ್ದ ಖರೀದಿ ಕೇಂದ್ರಗಳ ಜತೆ ತಿಪಟೂರು ಹಾಗೂ ಕುಣಿಗಲ್ ತಾಲ್ಲೂಕಿನಲ್ಲಿ ಹೆಚ್ಚುವರಿಯಾಗಿ ತಲಾ 1 ಖರೀದಿ ಕೇಂದ್ರ ತೆರೆಯಬೇಕು ಎಂದು ತಿಳಿಸಿದರು.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸಯ್ಯ, ಕೃಷಿ ಇಲಾಖೆಯ ಅಶೋಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT