ತುಮಕೂರು: ‘ಸಾಹಿತಿ ಎಂ.ಎಂ.ಕಲಬುರ್ಗಿ ಅವರು ಬಸವಣ್ಣನವರ ವಚನ ಸಾಹಿತ್ಯ ಹುಡುಕಿ ಜಗತ್ತಿಗೆ ಸತ್ಯಾಂಶ ತಿಳಿಸಿದ್ದರು. ಇದನ್ನು ಸಹಿಸದ ಮೂಲಭೂತವಾದಿಗಳು ಅವರನ್ನು ಗುಂಡಿಕ್ಕಿ ಕೊಂದರು’ ಎಂದು ಜಾಗತಿಕ ಲಿಂಗಾಯತ ಮಹಾಸಭಾ ಯುವ ಘಟಕದ ರಾಜ್ಯ ಸಂಚಾಲಕ ರಾಯಸಂದ್ರ ರವಿಕುಮಾರ್ ಹೇಳಿದರು.
ನಗರದಲ್ಲಿ ಶುಕ್ರವಾರ ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ಭಾರತೀಯ ಶರಣ ಸೇನೆಯಿಂದ ಹಮ್ಮಿಕೊಂಡಿದ್ದ ಸಂಶೋಧಕ ಎಂ.ಎಂ.ಕಲಬುರ್ಗಿ ಅವರ 9ನೇ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಸವಣ್ಣನವರು ಹಾಕಿಕೊಟ್ಟ ಹಾದಿಯಲ್ಲಿ ಕಲಬುರ್ಗಿಯವರು ಸಾಗುತ್ತಿದ್ದರು. ವ್ಯಕ್ತಿಯನ್ನು ಕೊಂದಿರಬಹುದೇ ಹೊರೆತು ಅವರ ವಿಚಾರಗಳನ್ನಲ್ಲ. ಅವರ ಚಿಂತನೆ, ವಿಚಾರ ಸದಾ ಪ್ರಸ್ತುತ. ಲಿಂಗಾಯತ ಎಂಬುದು ಜಾತಿಯಲ್ಲ ಅದೊಂದು ಸ್ವತಂತ್ರ, ಸಮಾನತೆಯ ಧರ್ಮ ಎಂದು ತಿಳಿಸಿದರು.
ಶರಣ ಸೇನೆ ಸಂಚಾಲಕ ಎಚ್.ಎಲ್.ಕುಮಾರಸ್ವಾಮಿ, ‘ಎಂ.ಎಂ.ಕಲಬುರ್ಗಿ ವಚನ ಸಾಹಿತ್ಯದ ನೈಜ ಅಂಶಗಳನ್ನು ಜಗತ್ತಿಗೆ ಪರಿಚಯಿಸಿದರು. ಅವರ ವಿಚಾರಗಳನ್ನು ಮುಂದಿನ ಪೀಳಿಗೆಗೆ ತಿಳಿಸುವುದು ನಮ್ಮೆಲ್ಲರ ಜವಾಬ್ದಾರಿ’ ಎಂದರು.
ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ನಾಗಭೂಷಣ್, ‘ಯುವಕರು ಲಿಂಗಾಯತ ಧರ್ಮದ ವಿಚಾರಧಾರೆಗಳನ್ನು ಅಧ್ಯಯನ ಮಾಡಬೇಕು. ಲಿಂಗಾಯತ ಧರ್ಮ ಉಳಿಸಲು ಮುಂದಿನ ದಿನಗಳಲ್ಲಿ ನಡೆಯುವ ಜಾತಿ ಜನ ಗಣತಿಯಲ್ಲಿ ಧರ್ಮ ಅಥವಾ ಜಾತಿಯ ವಿಭಾಗದಲ್ಲಿ ಲಿಂಗಾಯತ ಎಂದು ನಮೂದಿಸಬೇಕು’ ಎಂದು ಒತ್ತಾಯಿಸಿದರು.
ತುಮಕೂರು ವಿ.ವಿ ಪ್ರಾಧ್ಯಾಪಕ ಬಸವಲಿಂಗಯ್ಯ, ಕೈಗಾರಿಕೋದ್ಯಮಿ ಡಿ.ಬಿ.ಶಿವಾನಂದ, ಶರಣಸೇನೆ ಪ್ರಮುಖರಾದ ರಾಜೇಶ್ವರಿ ಶಿವಾನಂದ, ಸಿದ್ದು ಬಿ.ಎಸ್.ಸೂರನಹಳ್ಳಿ, ಬಸವರಾಜು, ಕೆ.ದೇವರಾಜು, ಅಭಿಷೇಕ್ ಹಿರೇಮಠ್, ಗೋಪಾಲಕೃಷ್ಣ ಇತರರು ಹಾಜರಿದ್ದರು.