ಬುಧವಾರ, ಜುಲೈ 28, 2021
21 °C
ತುಮಕೂರಿನಲ್ಲಿ ಅಕ್ಕಿಯ ಗುಣಮಟ್ಟ ಪರಿಶೀಲಿಸಿದ ಸಚಿವರಾದ ಗೋಪಾಲಯ್ಯ, ಆನಂದ್‌ ಸಿಂಗ್

ರೈತರು, ಅಕ್ಕಿ ಗಿರಣಿ ಮಾಲೀಕರ ಸಮಸ್ಯೆ ಬಗೆಹರಿಸಲು ಯತ್ನ: ಸಚಿವ ಗೋಪಾಲಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ರೈತರು ಮತ್ತು ಅಕ್ಕಿ ಗಿರಣಿ ಮಾಲೀಕರ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು. ಆ ಮೂಲಕ ರೈತರು ಹಾಗೂ ಉದ್ಯಮಿಗಳ ಹಿತ ಕಾಯಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಗೋಪಾಲಯ್ಯ ಹೇಳಿದರು.

ಅಂತರಸನಹಳ್ಳಿ ಕೈಗಾರಿಕಾ ವಲಯದಲ್ಲಿರುವ ಸಪ್ತಗಿರಿ ಆಗ್ರೊ ಇಂಡಸ್ಟ್ರೀಸ್‌ಗೆ ಸರ್ಕಾರವು ನೀಡಿರುವ 100 ಕ್ವಿಂಟಲ್ ಭತ್ತದಲ್ಲಿ ಎಷ್ಟು ಪ್ರಮಾಣದ ಅಕ್ಕಿ ದೊರೆಯಲಿದೆ ಎಂಬುದನ್ನು ಪರಿಶೀಲಿಸಲು ಬಂದ ವೇಳೆ ಅವರು ಮಾತನಾಡಿದರು.

ಸಪ್ತಗಿರಿ ಆಗ್ರೊ ಇಂಡಸ್ಟ್ರೀಸ್‌ ಏಷ್ಯಾದಲ್ಲೇ ಮೊದಲ ಸ್ಥಾನದಲ್ಲಿ ಇದೆ. ಇಲ್ಲಿ ಅಕ್ಕಿಯ ಗುಣಮಟ್ಟ ಪರಿಶೀಲಿಸಿದ್ದೇವೆ. ಮುಂದಿನ ದಿನಗಳಲ್ಲಿ ಭತ್ತವನ್ನು ಇಲ್ಲಿಯೇ ಮಿಲ್‌ ಮಾಡಿಸಬೇಕೊ ಬೇಡವೊ ಎಂಬುದನ್ನು ಮುಖ್ಯಮಂತ್ರಿ ಅವರ ಜತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಲಾಕ್‌ಡೌನ್‌ನಿಂದಾಗಿ ರೈತರು ಮಾತ್ರವಲ್ಲದೆ ಗಿರಣಿ ಮಾಲೀಕರು ಸಂಕಷ್ಟಕ್ಕೀಡಾಗಿದ್ದಾರೆ. ಅವರ ಸಮಸ್ಯೆಗಳ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸಿ ಅದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಅಕ್ಕಿ ಗಿರಣಿ ಮಾಲೀಕರ ಸಂಘದ ಅಧ್ಯಕ್ಷರೂ ಆಗಿರುವ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ, ರೈತರು ಮತ್ತು ಉದ್ದಿಮೆದಾರರಿಗೆ ತೊಂದರೆಗಳು ಆಗದಂತೆ ಕ್ರಮಗಳನ್ನು ಕೈಗೊಳ್ಳಲು ಆಹಾರ ಸಚಿವರು ರೈತರು ಹಾಗೂ ಉದ್ಯಮಿಗಳ ಜತೆ ಸಮಾಲೋಚಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದರು.

ಅರಣ್ಯ ಇಲಾಖೆ ಸಚಿವ ಆನಂದ್ ಸಿಂಗ್, ಸಿರಗುಪ್ಪ ಶಾಸಕ ಸೋಮಲಿಂಗಪ್ಪ, ಕರ್ನಾಟಕ ರಾಜ್ಯ ಆಹಾರ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎನ್.ವಿ.ಪ್ರಸಾದ್, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಆಯುಕ್ತೆ ಶ್ಯಾಮಲಾ ಇಕ್ಬಾಲ್, ಜಂಟಿ ನಿರ್ದೇಶಕ ಶ್ರೀನಿವಾಸಯ್ಯ, ಸಪ್ತಗಿರಿ ಆಗ್ರೊ ಇಂಡಸ್ಟ್ರೀಸ್ ಮಾಲೀಕ ಶ್ರೀಧರ್ ಬಾಬು, ಪ್ರಮುಖರಾದ ರಾಮೇಶ್ವರಪ್ಪ, ಗಿರೀಶ್, ವಿಶ್ವಾರಾಧ್ಯ, ಪ್ರಸಾದ್ ಇದ್ದರು.

ಬೆಂಬಲ ಬೆಲೆಯಲ್ಲಿ ಖರೀದಿ

ಸಪ್ತಗಿರಿ ಆಗ್ರೊ ಇಂಡಸ್ಟ್ರೀಸ್ ಮಾಲೀಕ ಶ್ರೀಧರ್ ಬಾಬು ಮಾತನಾಡಿ, ‘ಕೇಂದ್ರ ಸರ್ಕಾರ ಭತ್ತ ಖರೀದಿಗೆ ನಿಗದಿ ಮಾಡಿರುವ ಕನಿಷ್ಠ ಬೆಂಬಲ ಬೆಲೆ ದರದಲ್ಲೇ ನೇರವಾಗಿ ರೈತರಿಂದ ಭತ್ತ ಖರೀದಿಸಲು ಸಿದ್ದರಿದ್ದೇವೆ. ಸರ್ಕಾರ ಖರೀದಿ ಮಾಡಿರುವ 10 ಸಾವಿರ ಕ್ವಿಂಟಲ್‌ ಭತ್ತವನ್ನು 2 ದಿನದಲ್ಲಿ ನಮ್ಮ ರೈಸ್ ಮಿಲ್‌ನಲ್ಲಿ ಮಿಲ್ ಮಾಡಿಕೊಡಲಾಗುವುದು. ಭತ್ತ ಖರೀದಿಸಿದ 3 ದಿನದ ಒಳಗೆ ರೈತರಿಗೆ ಹಣ ಕೊಡಲು ಸಿದ್ಧರಿದ್ದೇವೆ’ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು