ಉದ್ಯಮಿಗಳು, ರೈತರಿಂದ ಅಡಿಗಡಿಗೆ ಅಹವಾಲು

7
ವಸಂತನರಸಾಪುರ ಕೈಗಾರಿಕಾ ಪ್ರದೇಶಕ್ಕೆ ಬೃಹತ್ ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್ ಭೇಟಿ

ಉದ್ಯಮಿಗಳು, ರೈತರಿಂದ ಅಡಿಗಡಿಗೆ ಅಹವಾಲು

Published:
Updated:

ತುಮಕೂರು: ವಸಂತನರಸಾಪುರ ಕೈಗಾರಿಕಾ ಪ್ರದೇಶಕ್ಕೆ ಬುಧವಾರ ಭೇಟಿ ನೀಡಿದ ಬೃಹತ್ ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್ ಅವರಿಗೆ ಉದ್ಯಮಿಗಳು, ಕೈಗಾರಿಕೆಗಳಿಗೆ ಭೂಮಿ ಕಳೆದುಕೊಂಡ ರೈತರ ಕುಟುಂಬ ವರ್ಗದವರು, ಸ್ಥಳೀಯರು ಹತ್ತಾರು ಅಹವಾಲುಗಳನ್ನು ಹೇಳಿಕೊಂಡರು.

ಫುಡ್‌ಪಾರ್ಕ್ ಇಂಡಿಯಾ ಘಟಕಕ್ಕೆ 110 ಎಕರೆ ಜಮೀನು, ಕೇಂದ್ರ ಸರ್ಕಾರದಿಂದ ₹ 50 ಕೋಟಿ ಸಹಾಯಧನ ಕೊಡಲಾಗಿದೆ. ಭೂಮಿ ಕೊಟ್ಟ ರೈತರಿಗೆ, ಸ್ಥಳೀಯರಿಗೆ ಉದ್ಯೋಗ, ಸ್ಥಳೀಯ ರೈತರು ಬೆಳೆದ ಉತ್ಪನ್ನಗಳನ್ನು ಖರೀದಿಸುವುದಾಗಿ ಭರವಸೆ ನೀಡಲಾಗಿತ್ತು. ಕಂಪನಿ ಆರಂಭದ ಬಳಿಕ ಇದ್ಯಾವುದನ್ನೂ ಮಾಡಿಲ್ಲ. ಕಾರ್ಮಿಕರಿಗೆ ಇಎಸ್‌ಐ, ಪಿಎಫ್ ಯಾವುದೂ ಇಲ್ಲ ಎಂದು ರೈತ ಮುಖಂಡರಾದ ಲೋಕೇಶ್, ಆರ್.ಕಾಮರಾಜ್ ಇತರರು ದೂರಿದರು.

ಸಾಕಷ್ಟು ಭರವಸೆ ಇಟ್ಟು ಇಲ್ಲಿ ಬಂದು ಕೈಗಾರಿಕೆ ಸ್ಥಾಪನೆ ಮಾಡಿದ್ದೇವೆ. ಆದರೆ, ಮೂಲಸೌಕರ್ಯಗಳೇ ಸಮರ್ಪಕವಾಗಿ ಲಭಿಸುತ್ತಿಲ್ಲ. ವಿದ್ಯುತ್, ನೀರಿಗೆ ಪರದಾಡಬೇಕಾಗಿದೆ. ಪೊಲೀಸ್ ಠಾಣೆ, ಆಸ್ಪತ್ರೆ, ಬಸ್ ಸಂಚಾರ ಯಾವುದೂ ಇಲ್ಲ. 15 ಸಾವಿರಕ್ಕೂ ಹೆಚ್ಚು ನೌಕರರು ಇರುವ ಪ್ರದೇಶ ಸೌಕರ್ಯಗಳಿಂದ ವಂಚಿತವಾಗಿದೆ ವಸಂತನರಸಾಪುರ ಇಂಡಸ್ಟ್ರೀಸ್ ಅಸೋಸಿಯೇಷನ್ ಅಧ್ಯಕ್ಷ ಶಿವಕುಮಾರ್ ವಿವರಿಸಿದರು.

ಕೊಳವೆ ಬಾವಿಗಳನ್ನು ಕೊರೆಯಲು ಟ್ಯಾಂಕರ್ ಲಾಬಿ ಅವಕಾಶ ಕೊಡುತ್ತಿಲ್ಲ. ಸಾವಿರ ಅಡಿ ಕೊರೆದರೂ ಒಂದೂವರೆ ಇಂಚು ನೀರು ಬರುತ್ತಿಲ್ಲ. ಹೀಗಾಗಿ ಹೇಮಾವತಿ ನೀರನ್ನು ಕೆಸ್ತೂರು ಕೆರೆಗೆ ಭರ್ತಿ ಮಾಡಿ ವಸಂತನರಸಾಪುರ ಕೈಗಾರಿಕಾ ಪ್ರದೇಶಕ್ಕೆ ಪೂರೈಸುವ ವ್ಯವಸ್ಥೆ ಮಾಡಿದರೆ ಸಮಸ್ಯೆ ಪರಿಹಾರವಾಗುತ್ತದೆ ಎಂದು ಮನವಿ ಮಾಡಿದರು.

ಎಚ್ಚರಿಕೆಯಿಂದ ಕೆಲಸ ಮಾಡಿ: ಜಪಾನ್ ಮೂಲದ ಟಿಎಂಇಐಸಿ ಯಂತ್ರ ತಯಾರಿಕಾ ಘಟಕಕ್ಕೆ ಸಚಿವರು ಭೇಟಿ ನೀಡಿದಾಗ ಕಂಪನಿ ಅಧಿಕಾರಿಗಳು ವಿದ್ಯುತ್ ಸಮಸ್ಯೆ ಬಗ್ಗೆ ಹೇಳಿಕೊಂಡರು.

‘ನೀವು ಸ್ಥಳೀಯ ಕೈಗಾರಿಕೆಗಳಿಗೆ ಸೌಕರ್ಯ ಕಲ್ಪಿಸುವಲ್ಲಿ ಉಪೇಕ್ಷೆ ಮಾಡಿದ ಹಾಗೆಯೇ ಬೇರೆ ದೇಶದ ಕಂಪನಿಗಳ ಬಗ್ಗೆಯೂ ಅಲಕ್ಷ್ಯ ಮಾಡಿದರೆ ಹೇಗೆ? ಎಚ್ಚರಿಕೆಯಿಂದ ಕೆಲಸ ಮಾಡಿ. ಒಂದು ವಾರದೊಳಗಡೆಯೇ ಸಮಸ್ಯೆ ಪರಿಹರಿಸಬೇಕು. ನಿರಂತರ ವಿದ್ಯುತ್ ಪೂರೈಕೆ ಮಾಡಬೇಕು’ ಎಂದು ಬೆಸ್ಕಾಂ ಅಧಿಕಾರಿಗಳಿಗೆ ಸಚಿವ ಜಾರ್ಜ್ ಸೂಚಿಸಿದರು.

ಹೆಣ ಹೂಳಲು ಜಾಗ ಕೊಡಿ: ಮಷಿನ್ ಟೂಲ್ ಪಾರ್ಕ್‌ಗೆ ನಮ್ಮೂರು ಮತ್ತು ಸುತ್ತಮುತ್ತಲಿನ ಜಮೀನು ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ಈಗ ನಮ್ಮೂರಲ್ಲಿ ಯಾರಾದರೂ ಸತ್ತರೆ ಹೂಳಲೂ ಜಾಗ ಇಲ್ಲ ಎಂದು ತಿಪ್ಪೇದಾಸರಹಳ್ಳಿ ಗ್ರಾಮದ ಗಿರೀಶ್ ಸಚಿವರಿಗೆ ಅಳಲು ತೋಡಿಕೊಂಡರು.

ಮಷಿನ್ ಟೂಲ್ ಪಾರ್ಕ್‌ ಭೂ ಸ್ವಾಧೀನದಿಂದ ನಮ್ಮೂರನ್ನು ಕೈ ಬಿಡಬೇಕು. ಭೂಮಿ ಸ್ವಾಧೀನ ಪಡಿಸಿಕೊಳ್ಳುವುದು ಬೇಡ ಎಂದು ಮನವಿ ಮಾಡಿದರು.

‘ನಿಮ್ಮ ಸಮಸ್ಯೆ ನನಗೆ ಅರ್ಥವಾಗುತ್ತದೆ. ಮತ್ತೆ ಡಿನೋಟಿಫಿಕೇಶನ್ ಮಾಡಬೇಕಾಗುತ್ತದೆ. ಪರಿಶೀಲನೆ ನಡೆಸಲಾಗುವುದು. ನಿಯಮಾವಳಿ ಪ್ರಕಾರ ಅವಕಾಶವಿದ್ದರೆ ಬೇಡಿಕೆ ಈಡೇರಿಸಲಾಗುವುದು’ ಎಂದು ಸಚಿವರು ಹೇಳಿದರು.

ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ, ಆಯುಕ್ತ ದರ್ಪಣ್‌ ಜೈನ್, ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಶಂಕರ್, ಜಿಲ್ಲಾ ಕೈಗಾರಿಕಾ ಜಂಟಿ ನಿರ್ದೇಶಕ ನಾಗರಾಜ್ ಇದ್ದರು

 

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !