ಸೋಮವಾರ, ಜುಲೈ 4, 2022
22 °C

ವಿದ್ಯಾರ್ಥಿಗಳೊಂದಿಗೆ ಊಟ ಸವಿದ ಸಚಿವರು- ಬಿಸಿಯೂಟ ಕಾರ್ಯಕ್ರಮಕ್ಕೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತಿಪಟೂರು: ರಾಜ್ಯದ ಎಲ್ಲ ಶಾಲೆಗಳಲ್ಲಿ 25ರಿಂದ ಪ್ರಾಥಮಿಕ ಹಂತದಿಂದಲೇ ಭೌತಿಕ ತರಗತಿಗಳು ಆರಂಭವಾಗುತ್ತಿದ್ದು, ಶಿಕ್ಷಕರು ಹೆಚ್ಚಿನ ಜವಾಬ್ದಾರಿ ವಹಿಸಿಕೊಂಡು ಈ ವರ್ಷದ ಪಠ್ಯವನ್ನು ಸಂಪೂರ್ಣವಾಗಿ ಬೋಧಿಸಬೇಕು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.

ನಗರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆಗೆ ಗುರುವಾರ ದಿಢೀರ್ ಭೇಟಿ ನೀಡಿ ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಶಾಲೆಗಳಲ್ಲಿ ಸಾಧ್ಯವಾದರೆ ಹೆಚ್ಚುವರಿ ತರಗತಿಗಳನ್ನು ತೆಗೆದುಕೊಂಡು ಪಠ್ಯವನ್ನು ಮುಗಿಸುವುದಾಗಿ ಹಲವು ಶಿಕ್ಷಕರು ತಿಳಿಸಿದ್ದಾರೆ. ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಇಲಾಖೆಯಿಂದ ಸೂಚಿಸಲಾಗಿದೆ ಎಂದರು.

ಬಿಸಿಯೂಟ ತಯಾರಿಸುವ ಸಿಬ್ಬಂದಿಗೆ ನೀಡುವ ಗೌರವಧನವನ್ನು ನೇರವಾಗಿ ಅವರ ಖಾತೆಗೆ ಜಮಾವಣೆ ಮಾಡಲಾಗುತ್ತಿದೆ. ಕೆಲವರು ನೀಡಿರುವ ಬ್ಯಾಂಕ್ ಖಾತೆಗಳ ಮಾಹಿತಿ ತಪ್ಪಿರುವುದರಿಂದ ಹಣ ಸಂದಾಯ ಮಾಡಲು ಸಾಧ್ಯವಾಗಿಲ್ಲ. ಶೀಘ್ರ ಅಂತಹವರಿಂದ ಮಾಹಿತಿ ಪಡೆದು ಖಾತೆಗೆ ಗೌರವಧನ ಜಮಾವಣೆ ಮಾಡಲಾಗುವುದು ಎಂದು ತಿಳಿಸಿದರು.

ವಿದ್ಯಾರ್ಥಿಗಳೊಂದಿಗೆ ಊಟ ಮಾಡಿದ ಸಚಿವರು: ನಗರದ ಬಾಲಕಿರ ಪ್ರೌಢಶಾಲೆಯಲ್ಲಿ ಸಚಿವರೇ ವಿದ್ಯಾರ್ಥಿನಿಯರಿಗೆ ಸಿಹಿ ಬಡಿಸಿದರು. ನಂತರವಿದ್ಯಾರ್ಥಿಗಳೊಂದಿಗೆ ಊಟ ಮಾಡಿದರು. ಪಠ್ಯ, ಬಸ್‌ ಸೌಕರ್ಯ, ಬಿಸಿಯೂಟದ ಗುಣಮಟ್ಟ, ಶಾಲಾ ವಾತಾವರಣದ ಬಗ್ಗೆ ವಿದ್ಯಾರ್ಥಿಗಳಿಂದ ಮಾಹಿತಿ ಪಡೆದರು.

ನಗರದ ವಿದ್ಯಾಪೀಠದ ಎಸ್‌ವಿಪಿ ಪ್ರೌಢಶಾಲೆಗೆ ಭೇಟಿ ನೀಡಿದ ಸಚಿವ ಬಿ.ಸಿ.ನಾಗೇಶ್ ತಮ್ಮ ಶಾಲಾ ದಿನಗಳನ್ನು ನೆನಪಿಸಿಕೊಂಡರು. ಬಿಸಿಯೂಟದ ನಿರ್ವಹಣೆ ಬಗ್ಗೆ ಮಾಹಿತಿ ಪಡೆದರು. ಶಿಕ್ಷಕರೊಂದಿಗೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿ, ಪಠ್ಯಕ್ರಮ, ಬೋಧನೆಗೆ ಆದ್ಯತೆ ನೀಡುವಂತೆ ಸೂಚಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಜೆ.ಪ್ರಭುಸ್ವಾಮಿ, ಬಾಲಕಿಯ ಪದವಿಪೂರ್ವ ಕಾಲೇಜಿನ ಉಪಪ್ರಾಂಶುಪಾಲ ಎಂ.ಎಸ್.ಚನ್ನೇಗೌಡ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಟಿ.ಎಸ್.ಸುರೇಶ್, ಶಿಕ್ಷಕರಾದ ಎಲ್.ಆರ್.ಕುಮಾರಸ್ವಾಮಿ, ಸಂತೋಷ್ ಕುಮಾರ್ ಎಸ್.ಜೆ., ಚಂದ್ರಶೇಖರ್ ಬಿ., ಮಧುಚಂದ್ರ, ಜಗದೀಶ್, ಮುರುಳೀಧರ್, ಮಧುಕುಮಾರ್, ಆನಂದ್, ವಸಂತ ಕುಮಾರ್, ಪಾರ್ವತಮ್ಮ ಜಿ, ನೂರ್‌ಅಸಿನಾ ಯಾಸಿನ್, ಶೀಲಾ ಬಿ, ಸುಧಾರಾಣಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು