ಬುಧವಾರ, ನವೆಂಬರ್ 20, 2019
25 °C

ಮಿಂಟೊ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಆಗ್ರಹ

Published:
Updated:
Prajavani

ತುಮಕೂರು: ಬೆಂಗಳೂರಿನ ಮಿಂಟೊ ಕಣ್ಣಿನ ಆಸ್ಪತ್ರೆ ವೈದ್ಯರು 22 ಬಡ ರೋಗಿಗಳನ್ನು ಶಾಶ್ವತವಾಗಿ ಕುರುಡರನ್ನಾಗಿಸಿದ್ದಾರೆ. ವೈದ್ಯರು, ಸಿಬ್ಬಂದಿ, ಔಷಧಿ ಸರಬರಾಜುದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ ಅವರಿಗೆ ಮನವಿ ಸಲ್ಲಿಸಿದರು.

ಬಡ ರೋಗಿಗಳಿಗೆ ನ್ಯಾಯ ಕೊಡಿಸುವಂತೆ ವೇದಿಕೆಯನ್ನು ಕೋರಿದ್ದ ಕಾರಣ ಪದಾಧಿಕಾರಿಗಳು, ಕಾರ್ಯಕರ್ತರು ಆಸ್ಪತ್ರೆಯಲ್ಲಿ ಪ್ರತಿಭಟನೆ ನಡೆಸಿದರು. ಆದರೆ ಆಡಳಿತ ಮಂಡಳಿ ಮುಖ್ಯಸ್ಥರು ಸ್ಥಳಕ್ಕೆ ಬಾರದೆ ಜವಾಬ್ದಾರಿಯಿಂದ ನುಣಚಿಕೊಂಡರು. ಈ ಸಂದರ್ಭದಲ್ಲಿ ಕಿರಿಯ ವೈದ್ಯೆಯೊಬ್ಬರು ‘ನನಗೆ ಕನ್ನಡ ಗೊತ್ತಿದೆ. ಆದರೆ ಮಾತನಾಡುವುದಿಲ್ಲ. ಇದು ನನ್ನ ಆಯ್ಕೆ’ ಎಂದು ಹೇಳಿದ್ದು ಕಾರ್ಯಕರ್ತರನ್ನು ಕೆರಳಿಸುವಂತೆ ಮಾಡಿತು ಎಂದು ಪ್ರತಿಭಟನಾಕಾರರು ತಿಳಿಸಿದರು.

ಈ ಹೇಳಿಕೆ ವಿರುದ್ಧ ಕಾರ್ಯಕರ್ತರು ಪ್ರತಿಭಟಿಸಿದಾಗ ಆಕೆ ಕ್ಷಮೆಯನ್ನೂ ಕೋರಿದ್ದಾರೆ. ಆದರೆ ತಮ್ಮ ಮೇಲಿರುವ ಆರೋಪದಿಂದ ತಪ್ಪಿಸಿಕೊಳ್ಳಲು ಆಸ್ಪತ್ರೆ ಮುಖ್ಯಸ್ಥರು, ಕಣ್ಣು ಕಳೆದ ವೈದ್ಯರು ಷಡ್ಯಂತ್ರ ಹೂಡಿ ಕಿರಿಯ ವಿದ್ಯಾರ್ಥಿಗಳನ್ನು ಎತ್ತಿಕಟ್ಟಿದ್ದಾರೆ. ಧರಣಿಗೆ ಕೂರಿಸಿದ್ದಾರೆ. ಈ ಕುತಂತ್ರದ ಹೋರಾಟವನ್ನು ಎದುರಿಸುವ ಶಕ್ತಿ ವೇದಿಕೆಗೆ ಇದೆ ಎಂದರು.

ಕಣ್ಣು ಕಳೆದುಕೊಂಡವರಿಗೆ ಸರ್ಕಾರ ಕೊಡಲು ಉದ್ದೇಶಿಸಿರುವ ಪರಿಹಾರ ಕಡಿಮೆ ಆಗಿದೆ. ಕನಿಷ್ಠ ₹ 10 ಲಕ್ಷ ನೀಡಬೇಕು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ನಿವೃತ್ತ ನ್ಯಾಯಾಧೀಶರ ಮೂಲಕ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕಾರ್ಯಕರ್ತರು ಆಗ್ರಹಿಸಿದರು.

ಮುಖಂಡರಾದ ಮಂಜುನಾಥ್ ಗೌಡ, ಮಧುಸೂದನ್, ತನುಜಾ, ವೇಣುಗೋಪಾಲ್, ಸಾಧಿಕ್, ರಮೇಶ್ ಇದ್ದರು.

ಪ್ರತಿಕ್ರಿಯಿಸಿ (+)