ಗುರುವಾರ , ನವೆಂಬರ್ 21, 2019
26 °C
ಶಾಸಕ ಡಿ.ಸಿ.ಗೌರಿಶಂಕರ್ ಹೇಳಿಕೆ

ನಾಗವಲ್ಲಿ, ಹೊನ್ನುಡಿಕೆ ಕೆರೆಗಳಿಗೆ ಶೇ 80ರಷ್ಟು ನೀರು

Published:
Updated:
Prajavani

ತುಮಕೂರು: ಏನೇ ಕಷ್ಟ ಎದುರಾದರೂ ನಾಗವಲ್ಲಿ ಹಾಗೂ ಹೊನ್ನುಡಿಕೆ ಕೆರೆಗಳಿಗೆ ಶೇ 80ರಷ್ಟು ನೀರು ತುಂಬಿಸಲಾಗುವುದು ಎಂದು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಭರವಸೆ ನೀಡಿದರು.

ಗ್ರಾಮಾಂತರ ಕ್ಷೇತ್ರದ ವಿವಿಧ ಕಡೆಗಳಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಅವರು ಸುದ್ದಿಗಾರರ ಜೊತೆ ಮಾತನಾಡಿದರು.

ಗ್ರಾಮಾಂತರ ಕ್ಷೇತ್ರದ ಏತ ನೀರಾವರಿ ವ್ಯಾಪ್ತಿಗೆ ಒಳಪಡುವ ಕೆರೆಗಳನ್ನು ತುಂಬಿಸಲು 300 ಎಂಸಿಎಫ್‌ಟಿ ನೀರು ನಿಗದಿ ಮಾಡಲಾಗಿದೆ. ಇದು ಸಂಪೂರ್ಣ ಅವೈಜ್ಞಾನಿಕ. ನಾಗವಲ್ಲಿ ಕೆರೆ ತುಂಬಿಸಲು 300 ಎಂಸಿಎಫ್‌ಟಿ ನೀರು ಬೇಕು. ಏತನೀರಾವರಿ ಯೋಜನೆ ವ್ಯಾಪ್ತಿಯ ಎಲ್ಲ ಕೆರೆ ತುಂಬಿಸಲು ಒಂದು ಟಿಎಂಸಿ ಅಡಿಗೂ ಅಧಿಕ ನೀರು ಬೇಕು ಎಂದರು.

ಈ ನೀರಿನ ಮಿತಿಯನ್ನು ಒಂದು ಟಿಎಂಸಿ ಅಡಿಗೆ ಹೆಚ್ಚಿಸಬೇಕು ಎಂದು ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ಪ್ರಸ್ತಾವ ಸಲ್ಲಿಸಲಾಗಿತ್ತು. ಇದರ ದಾಖಲೆಯನ್ನು ಕ್ಷೇತ್ರದ ಜನರ ಮುಂದಿಡಲಾಗುವುದು ಎಂದು ತಿಳಿಸಿದರು.

‘ಚಿಕ್ಕಣ್ಣ ಸ್ವಾಮಿ ಮೇಲೆ ಆಣೆ ಮಾಡಿ ಹೇಳುತ್ತೇನೆ. ನಾಗವಲ್ಲಿ ಕೆರೆಗೆ ನೀರು ಬಿಡಬೇಡಿ, ಬೇರೆ ಕೆರೆಗೆ ನೀರು ಹರಿಸಿ ಎಂದು ಹೇಳಿಲ್ಲ. ನೀರಿನ ವಿಚಾರದಲ್ಲಿ ಕೀಳುಮಟ್ಟದ ರಾಜಕಾರಣ ಮಾಡುವ ವ್ಯಕ್ತಿತ್ವ ನನ್ನದಲ್ಲ. ವಿರೋಧಿಗಳು ನನ್ನ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ’ ಎಂದು ಕಿಡಿಕಾರಿದರು.

ರಾಜಕಾರಣ ದಿನೇ ದಿನೇ ಹದಗೆಡುತ್ತಿದೆ. ಯುವ ಸಮುದಾಯ ರಾಜಕಾರಣ ಎಂದರೆ ಅಸಹ್ಯ ಪಡುವ ಸ್ಥಿತಿ ಇದೆ. ರಾಜಕಾರಣಿಗಳು ತಮ್ಮ ವೈಯಕ್ತಿಕ ಹಿತಾಸಕ್ತಿ ಬದಿಗೊತ್ತಿ ಯುವ ಸಮುದಾಯವನ್ನು ವಿಶ್ವಾಸಕ್ಕೆ ಪಡೆಯಬೇಕು. ಆಗ ಸದೃಢ ದೇಶ ನಿರ್ಮಾಣ ಸಾಧ್ಯ ಎಂದರು.

ಗ್ರಾಮಾಂತರ ಜೆಡಿಎಸ್ ಘಟಕದ ಅಧ್ಯಕ್ಷ ಹಾಲನೂರು ಅನಂತಕುಮಾರ್, ಗೂಳೂರು ಹೋಬಳಿ ಜೆಡಿಎಸ್ ಘಟಕದ ಅಧ್ಯಕ್ಷ ಪಾಲನೇತ್ರಯ್ಯ, ತಾಲ್ಲೂಕು ಪಂಚಾಯಿತಿ ಸದಸ್ಯ ಪ್ರದೀಪ್, ವಿಜಯ್ ಕುಮಾರ್, ನರುಗನಹಳ್ಳಿ ಮಂಜುನಾಥ್, ನಾಗವಲ್ಲಿ ಶಶಿ ಇದ್ದರು.

ಪ್ರತಿಕ್ರಿಯಿಸಿ (+)