ಸೋಮವಾರ, ಡಿಸೆಂಬರ್ 9, 2019
18 °C
ವಿವಿಧ ಇಲಾಖೆ ಅಧಿಕಾರಿಗಳ ಸಭೆ

ಹಣ ಪೋಲಾಗದಂತೆ ಎಚ್ಚರವಹಿಸಿ: ಶಾಸಕ ಜ್ಯೋತಿ ಗಣೇಶ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಕಾಮಗಾರಿಗಳಿಗೆ ಹಣ ಪೋಲಾಗದಂತೆ ಎಚ್ಚರವಹಿಸಿ ಗುಣಮಟ್ಟದ ಕಾಮಗಾರಿ ನಡೆಸಬೇಕು ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಶಾಸಕರ ಕಚೇರಿಯಲ್ಲಿ ಶನಿವಾರ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.

ಸ್ಮಾರ್ಟ್ ಸಿಟಿ ಕಾಮಗಾರಿಗಳಲ್ಲಿ ಸುಖಾಸುಮ್ಮನೆ ಹಣ ಪೋಲು ಮಾಡುವುದು ಸರಿಯಲ್ಲ. ಸ್ಮಾರ್ಟ್ ಸಿಟಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾಮಗಾರಿಗಳನ್ನು ನಿರ್ದಿಷ್ಟ ಸಮಯದಲ್ಲಿ ಪೂರ್ಣಗೊಳಿಸಬೇಕು. ಜನಸಾಮಾನ್ಯರಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ಸ್ಮಾರ್ಟ್ ಸಿಟಿ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಶಾಸಕರು, ಚೇಂಬರ್ ಕಾಮಗಾರಿಗಳನ್ನು ನಿಲ್ಲಿಸುವಂತೆ ಸೂಚಿಸಿದರು. ಚೇಂಬರ್‌ಗಳಲ್ಲಿ ಅಳವಡಿಸಬೇಕಾದ ಕೇಬಲ್‌ಗಳನ್ನು ಜೋಡಿಸಿ ನಂತರ ಅವುಗಳನ್ನು ಮುಚ್ಚಬೇಕು. ಮತ್ತೆ ಎಲ್ಲಿಯೂ ರಸ್ತೆಯನ್ನು ಅಗೆಯುವ ಪ್ರಮೇಯ ಬರಬಾರದು ಎಂದು ತಿಳಿಸಿದರು.

ನಗರದಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ಕಾಮಗಾರಿಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಸಭೆ ಮಾಡಲಾಗಿದೆ. ಸ್ಮಾರ್ಟ್ ಸಿಟಿ ಕಂಪನಿಯವರು ಜನಪ್ರತಿನಿಧಿಗಳ ಸಲಹೆಗಳನ್ನು ಪಡೆಯದೆ ಮಾಡುತ್ತಿರುವ ಕಾಮಗಾರಿಗಳಿಂದ ಜನರಿಗೆ ಸಮಸ್ಯೆಗಳು ಎದುರಾಗುತ್ತಿವೆ. ಅವುಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕಿದೆ ಎಂದರು.

ಈಗ ಮಾಡುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿಯು ಗೊಂದಲಮಯವಾಗಿದೆ. ಅಗೆದಿರುವ ಗುಂಡಿಗಳು, ರೂಪಿಸಲಾದ ಯೋಜನೆಯು ಸಫಲವಾಗುತ್ತದೆಯೋ ಇಲ್ಲವೋ ಎಂಬುದು ತಿಳಿಯದಾಗಿದೆ. ಈ ನಿಟ್ಟಿನಲ್ಲಿ ಸೋಮವಾರ (ನ.11) ಸ್ಮಾರ್ಟ್ ಸಿಟಿ ಅಧಿಕಾರಿಗಳು, ಬೆಸ್ಕಾಂ ಅಧಿಕಾರಿಗಳು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಕೂಲಂಕಷವಾಗಿ ಚರ್ಚೆ ಮಾಡುತ್ತೇವೆ. ಚರ್ಚೆ ನಡೆಸಿ ಯಾವ ಕಾಮಗಾರಿಗಳನ್ನು ಯಾವ ರೀತಿಯಲ್ಲಿ ಮಾಡಿದರೆ ಅನುಕೂಲವಾಗುತ್ತದೆ ಎಂಬುದನ್ನು ಸ್ಮಾರ್ಟ್ ಸಿಟಿಯವರಿಗೆ ಮನವರಿಕೆ ಮಾಡಿಕೊಡುತ್ತೇವೆ ಎಂದರು.

ಮಹಾನಗರ ಪಾಲಿಕೆಯ ಪ್ರಭಾರ ಆಯುಕ್ತ ಸಿ.ಎಲ್.ಶಿವಕುಮಾರ್, ಮೇಯರ್ ಲಲಿತಾ ರವೀಶ್, ಉಪ ಮೇಯರ್ ರೂಪಶ್ರೀ ಶೆಟ್ಟಾಳಯ್ಯ, ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರಾದ ಗಿರಿಜಾ ಧನಿಯಾಕುಮಾರ್, ನರಸಿಂಹರಾಜು, ಸಿ.ಎನ್.ರಮೇಶ್, ನಯಾಜ್ ಅಹಮ್ಮದ್, ಮಂಜುಳಾ ಆದರ್ಶ್, ಸ್ಮಾರ್ಟ್ ಸಿಟಿ ಯೋಜನಾ ಮುಖ್ಯಸ್ಥ ಪವನ್‌ಕುಮಾರ್ ಸೈನಿ, ಕಾರ್ಯಪಾಲಕ ಎಂಜಿನಿಯರ್ ಬಸವರಾಜುಗೌಡ, ಪಾಲಿಕೆ ಎಂಜಿನಿಯರ್ ಆಶಾ ಹಾಗೂ ಅಧಿಕಾರಿಗಳು ಇದ್ದರು.

ಪ್ರತಿಕ್ರಿಯಿಸಿ (+)