ತುರುವೇಕೆರೆ: ತಾಲ್ಲೂಕಿನ ರಂಗನಹಟ್ಟಿಯಲ್ಲಿ ಈಚೆಗೆ ಗಣೇಶ ವಿಸರ್ಜನೆ ವೇಳೆ ನೀರಿನಲ್ಲಿ ಮುಳುಗಿ ಮೃತಪಟ್ಟ ಮೂವರ ಮನೆಗೆ ಶಾಸಕ ಎಂ.ಟಿ.ಕೃಷ್ಣಪ್ಪ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಮೃತ ದಯಾನಂದ್ ಅವರ ಮನೆಗೆ ಭೇಟಿ ನೀಡಿ ವೈಯಕ್ತಿಕವಾಗಿ ₹25 ಸಾವಿರ ನೀಡಿದರು. ದಯಾನಂದ್ ಪತ್ನಿ ಪದವೀಧರಳಾಗಿದ್ದು, ಆಕೆಗೆ ಗುತ್ತಿಗೆ ಆಧಾರದಲ್ಲಿ ಹೇಮಾವತಿ ಇಲಾಖೆಯಲ್ಲಿ ಕೆಲಸ ಕೊಡಿಸುವ ಭರವಸೆ ನೀಡಿದರು.
ಅದೇ ಗ್ರಾಮದ ರೇವಣ್ಣ ಮತ್ತು ಶರತ್ ಮನೆಗೆ ಭೇಟಿ ನೀಡಿದ ಶಾಸಕರು ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ವೈಯಕ್ತಿಕವಾಗಿ ₹25 ಸಾವಿರ ನೀಡಿದರು. ಎರಡೂ ಕುಟುಂಬದ ಸದಸ್ಯರಿಗೆ ಸರ್ಕಾರದಿಂದ ಪರಿಹಾರ ಕೊಡಿಸುವ ಭರವಸೆಯನ್ನು ನೀಡಿದರು.
ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಸಾದರಹಳ್ಳಿ ದೊಡ್ಡೇಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಲೀಲಾವತಿ ಗಿಡ್ಡಯ್ಯ, ಅಮ್ಮಸಂದ್ರ ಸಿದ್ದೇಗೌಡ, ಮಾರಸಂದ್ರ ಯೋಗೀಶ್, ಗ್ರಾಮ ಪಂಚಾಯಿತಿ ಸದಸ್ಯ ರಾಮಚಂದ್ರು ಉಪಸ್ಥಿತರಿದ್ದರು.