ಶುಕ್ರವಾರ, ಏಪ್ರಿಲ್ 16, 2021
31 °C

ಶಾಸಕರು ದನ–ಕರು ರೀತಿ ಮಾರಾಟವಾಗುತ್ತಿರುವುದು ನಾಚಿಕೆಗೇಡು: ಶಾಸಕ ಬಿ.ಸತ್ಯನಾರಾಯಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಾ: ಹಣ ಮತ್ತು ಅಧಿಕಾರಕ್ಕಾಗಿ ರಾಜ್ಯದಲ್ಲಿ ಶಾಸಕರು ದನ ಕರುಗಳ ರೀತಿಯಲ್ಲಿ ಮಾರಾಟವಾಗುತ್ತಿರುವುದು ನಾಚಿಕೆಗೇಡಿನ ವಿಷಯವಾಗಿದೆ ಎಂದು ಶಾಸಕ ಬಿ.ಸತ್ಯನಾರಾಯಣ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಜನರ ಸೇವೆ ಮಾಡಲು ಶಾಸಕರಾಗಿದ್ದೇವೆ ಎನ್ನುವುದನ್ನು ಮರೆತು 15 ಶಾಸಕರು ಹಣಕ್ಕೆ ಮಾರಾಟವಾಗಿದ್ದಾರೆ. ಜನರು ಸೈಕಲ್‌ನಲ್ಲಿ ಓಡಾಡಲು ಕಷ್ಟ ಪಡುತ್ತಿರುವ ಸಮಯದಲ್ಲಿ ಮಾರಾಟವಾದ ಶಾಸಕರನ್ನು ವಿಶೇಷ ಖಾಸಗಿ ವಿಮಾನಗಳಲ್ಲಿ ಮುಂಬೈಗೆ ಕಳುಹಿಸುತ್ತಿದ್ದಾರೆ. ಇಂದು ಶಾಸಕರು ಭಯದ ವಾತಾವರಣದಲ್ಲಿದ್ದಾರೆ. ಮುಂಬೈನಲ್ಲಿ ಶಾಸಕರು ಒಂದು ರೀತಿಯಲ್ಲಿ ಕೂಡಿ ಹಾಕಿ ಬಂಧನದಲ್ಲಿರಿಸಿದ್ದಾರೆ. ರಾಜ್ಯದಿಂದ ಹೋಗಿದ್ದ ಪೊಲೀಸ್ ಉನ್ನತ ಅಧಿಕಾರಿ ಸಹ ಶಾಸಕರನ್ನು ಭೇಟಿ ಮಾಡಲು ಸಾಧ್ಯವಾಗಿಲ್ಲ ಎಂದರೆ ಪ್ರಜಾಪ್ರಭುತ್ವ ವ್ಯವಸ್ಥೆ ಇನ್ನು ಜೀವಂತವಾಗಿದೆ ಎನ್ನುವ ಅನುಮಾನ ಮೂಡುತ್ತಿದೆ ಎಂದರು.

ನನಗೂ ಅಮಿಷ

ಬಿಜೆಪಿ ಪಕ್ಷ ನನ್ನನ್ನು ಸಹ ಖರೀದಿ ಮಾಡಲು ನೋಡಿತು. 2 ದಿನಗಳ ಹಿಂದೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕರೆ ಮಾಡಿ ನೀವು ಹಿರಿಯ ನಾಯಕರು ಜೆಡಿಎಸ್ ಪಕ್ಷದಲ್ಲಿ ನಿಮಗೆ ಅನ್ಯಾಯವಾಗಿದೆ. ಪಕ್ಷ ಬಿಟ್ಟು ನಮ್ಮಲ್ಲಿ ಬನ್ನಿ ನಿಮ್ಮನ್ನು ಗೌರವಯುತವಾಗಿ ನಡೆಸಿಕೊಂಡು ಮಂತ್ರಿ ಸ್ಥಾನ ನೀಡುತ್ತೇವೆ. ಚುನಾವಣೆಗೆ ನಿಮಗೆ ಅಥವಾ ನಿಮ್ಮ ಮಗನಿಗೆ ಟಿಕೇಟು ನೀಡಿ ಎಲ್ಲಾ ಖರ್ಚು ಭರಿಸುವುದಾಗಿ ಅಮಿಷ ತೋರಿಸಿದರು. ಆದರೆ, ನಾನು ಯಾವುದೇ ಕಾರಣಕ್ಕೂ ಜೆಡಿಎಸ್ ಪಕ್ಷ ಬಿಡುವ ಪ್ರಶ್ನೆ ಇಲ್ಲ ಎಂದು ಹೇಳಿದೆ ಎಂದರು.

ಯಾವಾಗ ಬೇಕಾದರೂ ಚುನಾವಣೆ

ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡಲು ಬಿಜೆಪಿ ಪಕ್ಷದವರು ರಾಜ್ಯಪಾಲರನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ. ನಾನು ಎಷ್ಟು ದಿನ ಶಾಸಕನಾಗಿರುತ್ತೇನೆ ಎನ್ನುವುದು ತಿಳಿದಿಲ್ಲ. ರಾಜ್ಯಪಾಲರು ಈಗಾಗಲೇ ಕೇಂದ್ರ ಸರ್ಕಾರಕ್ಕೆ ವರದಿ ನೀಡಿದ್ದಾರೆ. ಅವರು ಯಾವುದೇ ಕ್ಷಣದಲ್ಲಿ ಬೇಕಾದರೂ ಕ್ರಮ ತೆಗೆದುಕೊಳ್ಳಬಹುದು ಎಂದರು.

ಇಂದು ನನ್ನ ಹುಟ್ಟು ಹಬ್ಬ ಇರುವುದರಿಂದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಅನುಮತಿ ಪಡೆದು ಬಂದಿದ್ದೇನೆ. ರಾಜ್ಯ ಸರ್ಕಾರ ಉಳಿಯಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಲಾಗುವುದು ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು