ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಬಣ್ಣ ಬಯಲು ಮಾಡಿ

ಜೆಡಿಎಸ್– ಕಾಂಗ್ರೆಸ್ ತುಮಕೂರು ನಗರ ಘಟಕದ ಕಾರ್ಯಕರ್ತರ ಸಭೆಯಲ್ಲಿ ಉಪಮುಖ್ಯಮಂತ್ರಿ ಡಾ.ಪರಮೇಶ್ವರ ಕರೆ
Last Updated 4 ಜೂನ್ 2019, 20:23 IST
ಅಕ್ಷರ ಗಾತ್ರ

ತುಮಕೂರು: ‘ಸುಳ್ಳು ಹೇಳಿಕೊಂಡೇ ಬಂದ ಪ್ರಧಾನಿ ನರೇಂದ್ರ ಮೋದಿ ಅವರ ಬಣ್ಣವನ್ನು ಬಯಲು ಮಾಡಿ’ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಹೇಳಿದರು.

ಲೋಕಸಭಾ ಚುನಾವಣೆ ಪ್ರಯುಕ್ತ ನಗರದಲ್ಲಿ ಮಂಗಳವಾರ ನಡೆದ ಜೆಡಿಎಸ್– ಕಾಂಗ್ರೆಸ್ ತುಮಕೂರು ನಗರ ಘಟಕದ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದರು.

‘ನಮಗೆ ಬಿಜಿಪಿ ಅಭ್ಯರ್ಥಿ ಜಿ.ಎಸ್. ಬಸವರಾಜ್ ಸೋಲಿಸುವುದಷ್ಟೇ ಮುಖ್ಯವಲ್ಲ. ಕೇಂದ್ರದಲ್ಲಿ ಮತ್ತೆ ನರೇಂದ್ರ ಮೋದಿ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದನ್ನು ತಡೆಯುವುದೇ ಮುಖ್ಯ ಗುರಿ’ ಎಂದು ಹೇಳಿದರು.

‘ನರೇಂದ್ರ ಮೋದಿ ಅವರು ಕಳೆದ ಬಾರಿ ಲೋಕಸಭಾ ಚುನಾವಣೆಗೆ ಮೊದಲು ಹೇಳಿದ ಮಾತುಗಳನ್ನು ನಂಬಿ ದೇಶದ ಜನರು, ಯುವಕರು ಬೆಂಬಲಿಸಿದರು. ಮೋದಿಯವರು ಅಚ್ಚೆ ದಿನ್, ಇಂಡಿಯಾ ಶೈನಿಂಗ್ ಅಂದ್ರು. ದೇಶದ ಜನರೂ ಅದನ್ನು ನಂಬಿದರು. ಮಾಧ್ಯಮಗಳು ಪ್ರಚಾರ ಮಾಡಿದವು. ಆದರೆ, ಐದು ವರ್ಷದಲ್ಲಿ ಏನನ್ನೂ ಮಾಡಲಿಲ್ಲ’ ಎಂದು ವಾಗ್ದಾಳಿ ನಡೆಸಿದರು.

‘ಪೆಟ್ರೋಲ್ ಬೆಲೆ ಹೆಚ್ಚಾದರೂ, ದೇಶದಲ್ಲಿ ಶಾಂತಿಗೆ ಭಂಗ ತರುವ ಕೃತ್ಯ ನಡೆದರೂ ಎಚ್ಷೆತ್ತುಕೊಳ್ಳಲಿಲ್ಲ. ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ನಡೆದರೂ ಗಮನಹರಿಸಲಿಲ್ಲ’ ಎಂದು ಟೀಕಿಸಿದರು.

‘ಮತ್ತೆ ಈಗ ಮೋದಿ ಹೇಳುತ್ತಿದ್ದಾರೆ. ದೊಡ್ಡ ಬದಲಾವಣೆ ಮಾಡಿ ಬಿಡುತ್ತೇವೆ. ಚಂದ್ರಲೋಕಕ್ಕೆ ಕರೆದುಕೊಂಡು ಹೋಗುವುದಾಗಿ ಹೇಳುತ್ತಿದ್ದಾರೆ. ಇದನ್ನು ಯಾರೂ ನಂಬಬೇಡಿ’ ಎಂದರು.

ಸಣ್ಣ ಕೈಗಾರಿಕಾ ಸಚಿವ ಎಸ್.ಆರ್.ಶ್ರೀನಿವಾಸ್ ಮಾತನಾಡಿ,‘ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ನಾಲ್ಕು ಬಾರಿ ಸಂಸದರಾಗಿ ಈಗ ಮತ್ತೆ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜ್ ಅವರ ಕೊಡುಗೆ ಶೂನ್ಯ. ಒಂದೇ ಒಂದು ಅಭಿವೃದ್ಧಿ ಕೆಲಸ ತೋರಿಸಲಿ’ ಎಂದು ಸವಾಲು ಹಾಕಿದರು.

’ನೇತ್ರಾವತಿ ತಿರುವ ಯೋಜನೆ ಹೆಸರು ಹೇಳಿಕೊಂಡು 20 ವರ್ಷಗಳ ಕಾಲ ಜನರ ಕಣ್ಣಿಗೆ ಮಣ್ಣೆರಚಿದ್ದಾರೆ. ನೀರಿನ ವಿಷಯದಲ್ಲಿ ಅವಾಸ್ತವಿಕ ಅಂಶಗಳನ್ನು ಜನರಿಗೆ ಹೇಳಿಕೊಂಡು ಅವರ ಕಿವಿಗೆ ಹೂವು ಇಟ್ಟುಕೊಂಡು ಬಂದಿದ್ದಾರೆ. ಚುನಾವಣೆ ಬರುತ್ತಲೇ ಅವರಿಗೆ ಹೇಮಾವತಿ ನೀರಿನ ವಿಚಾರ ನೆನಪಾಗುತ್ತದೆ’ ಎಂದು ಟೀಕಿಸಿದರು.

ವಿಧಾನಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು ಮಾತನಾಡಿ, ‘ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಎಚ್.ಡಿ.ದೇವೇಗೌಡ ಅವರು ಸಾಂಕೇತಿಕ ಅಭ್ಯರ್ಥಿ. ಕಾರ್ಯಕರ್ತರು ಪ್ರತಿಯೊಬ್ಬರೂ ದೇವೇಗೌಡರಾಗಿ ಆಯ್ಕೆಗೆ ಶ್ರಮಿಸಬೇಕು. ಬೇರೆ ಅಭ್ಯರ್ಥಿ ಹೇಗೆ ಸೋಲಿಸಬೇಕು ಎಂಬುದಕ್ಕಿಂತ ನಾವು ಹೇಗೆ ಗೆಲ್ಲಬೇಕು ಎಂಬುವ ದಿಶೆಯಲ್ಲಿ ಕಾರ್ಯಪ್ರವೃತ್ತರಾಗಬೇಕು’ ಎಂದು ತಿಳಿಸಿದರು.

ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಗೋವಿಂದರಾಜ್, ಮಾಜಿ ಶಾಸಕ ಡಾ.ರಫೀಕ್ ಅಹಮ್ಮದ್ ಮಾತನಾಡಿದರು. ಮಾಜಿ ಶಾಸಕ ಷಫಿ ಅಹಮ್ಮದ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ, ಮೇಯರ್ ಲಲಿತಾ ರವೀಶ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಲತಾ ರವಿಕುಮಾರ್, ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಕೆ.ಇ.ರಾಧಾಕೃಷ್ಣ, ವಿಧಾನ ಪರಿಷತ್ ಸದಸ್ಯರಾದ ಬೆಮೆಲ್ ಕಾಂತರಾಜ್, ಎಂ.ಸಿ.ವೇಣುಗೋಪಾಲ್, ಚೌಡರೆಡ್ಡಿ ತೂಪಲ್ಲಿ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT