ಶನಿವಾರ, ಆಗಸ್ಟ್ 20, 2022
21 °C
ಒಕ್ಕೂಟದ ಸದಸ್ಯರಿಂದ ಕಾರ್ಯದರ್ಶಿ ವಿರುದ್ಧ ಆರೋಪ: ತನಿಖೆಗೆ ಒತ್ತಾಯ

ಡೇರಿಯಲ್ಲಿ ಹಣ ದುರುಪಯೋಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‌ಚಿಕ್ಕನಾಯಕನಹಳ್ಳಿ: ‘ತಾಲ್ಲೂಕಿನ ಬಾಚಿಹಳ್ಳಿಯ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಹೆಚ್ಚುವರಿ ಹಾಲಿನ ಹಣದ ದುರುಪಯೋಗವಾಗಿದೆ. ಸಹಕಾರ ನಿಯಮ 64ರ ಪ್ರಕಾರ ತನಿಖೆಯಾಗಲಿ’ ಎಂದು ಸಂಘದ ಸದಸ್ಯರು ಸಭೆಯಲ್ಲಿ ಒತ್ತಾಯಸಿದರು.

ತಾಲ್ಲೂಕಿನ ಬಾಚಿಹಳ್ಳಿ ಹಾಲಿನ ಡೇರಿಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಕಾರ್ಯದರ್ಶಿಯವರ ಅವ್ಯವಹಾರದ ಬಗ್ಗೆ ಸಹಕಾರ ಜಿಲ್ಲಾ ನಿಬಂಧಕರ ನೇತೃತ್ವದಲ್ಲಿ ಸಹಕಾರ ನಿಯಮ 64ರ ಪ್ರಕಾರ ತನಿಖೆಗೆ ಒತ್ತಾಯಿಸಿದರು.

‘ಡಿಸಿಸಿ ಬ್ಯಾಂಕ್ ಖಾತೆ ನಂ.74ಕ್ಕೆ ಜುಲೈ 4ರಂದು ₹1ಲಕ್ಷ ಜಮಾವಾಗಿದ್ದು, ಪುನಃ 13ರಂದು ₹90 ಸಾವಿರ ಜಮಾವಾಗಿದೆ. 21ರಂದು ₹1.1 ಲಕ್ಷ ಜಮಾವಾಗಿದೆ. ಈ ಬಗ್ಗೆ ಜಮೆಯ ಬಗ್ಗೆ ಸದಸ್ಯರಿಗೆ ಮಾಹಿತಿ ಇಲ್ಲ ಹಾಗೂ ಸಂಘದಲ್ಲಿರುವ ಕಂಪ್ಯೂಟರ್ ಕ್ಯಾಬಿನ್‌ಗೆ ಸಾಕಷ್ಟು ಹಣವನ್ನು ಬಳಸಿದ್ದಾರೆ. ಈ ಎಲ್ಲ ಹಣದ ಬಗ್ಗೆ ಮಾಹಿತಿ ನೀಡಬೇಕು’ ಎಂದು ಸದಸ್ಯರು ಸಭೆಯಲ್ಲಿ ಒತ್ತಾಯಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಹಾಲಿನ ಡೇರಿ ಅಧ್ಯಕ್ಷ ರಾಮಲಿಂಗಯ್ಯ, ಮುಂದಿನ ದಿನಗಳಲ್ಲಿ ಸಭೆ ಕರೆದು ಈ ಬಗ್ಗೆ ಕೂಲಂಕಷವಾಗಿ ಚರ್ಚಿಸಲಾಗುವುದು ಎಂದು ತಿಳಿಸಿದರು.

‘ಬಾಚಿಹಳ್ಳಿ ಹಾಲಿನ ಡೇರಿಯ ಕಾರ್ಯದರ್ಶಿ ಬಿ.ಆರ್.ರಾಜಶೇಖರ್, ಡೇರಿಯಲ್ಲಿ ಅವರು ಕರ್ತವ್ಯ ನಿರ್ವಹಿಸುವ ಬದಲು ಅವರ ಪತ್ನಿಯನ್ನು ಕೂರಿಸುತ್ತಾರೆ ಎಂದು ಷೇರುದಾರರು ಆರೋಪಿಸಿದರು. ನಮಗೆ ಕಾರ್ಯದರ್ಶಿಯನ್ನು ಬದಲಿಸಿಕೊಡಿ, ಇವರ ಬದಲಿಗೆ ಬೇರೆ ಯಾರನ್ನಾದರೂ ಈ ಸ್ಥಾನಕ್ಕೆ ಕೂರಿಸಿ’ ಎಂದು ಹೇಳಿದರು.

ಇದಕ್ಕೆ ಉತ್ತರಿಸಿದ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಸುನಿಲ್, ‘ಇನ್ನು ಮುಂದೆ ಈ ರೀತಿ ಆಗಬಾರದು. ನೀವೇ ಕುಳಿತು ಹಾಲನ್ನು ಪಡೆಯಬೇಕು’ ಎಂದು ಕಾರ್ಯದರ್ಶಿ ರಾಜಶೇಖರ್‌ಗೆ ತಿಳಿಸಿದರು.

‘ಹಾಲಿನ ಡೇರಿಗೆ ಕಾರ್ಯದರ್ಶಿ
ಯನ್ನು ನೇಮಕ ಮಾಡುವುದು ಸದಸ್ಯರುಗಳೇ. ಅವರು ತೋರಿಸಿದ ವ್ಯಕ್ತಿಯನ್ನೇ ನಾವು ಹಾಲಿನ ಡೇರಿಗೆ ನೇಮಕ ಮಾಡಿಕೊಳ್ಳುತ್ತೇವೆ’ ಎಂದರು.

ವಿಸ್ತರಣಾಧಿಕಾರಿ ಸಿ.ರಾಜು, ಹಾಲಿನ ಡೇರಿ ಉಪಾಧ್ಯಕ್ಷ ವಿ.ಎಸ್.ಬಸವರಾಜು, ನಿರ್ದೇಶಕರಾದ ಬಿ.ಎಸ್.ಜಯಣ್ಣ, ಬಸವಲಿಂಗಯ್ಯ, ಬಿ.ಎಸ್.ನಟರಾಜು, ಬಿ.ಪಿ.ಜಯಣ್ಣ, ರಾಮಯ್ಯ, ಶೈಲಜ, ಶಿವಗಂಗಮ್ಮ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.