ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲಚಕ್ರದಲ್ಲಿ ಉರುಳಿ ಹೋದ ಕೃಷಿ ಪರಿಕರ ‘ಮೂಡೆ’

ಧಾನ್ಯ ಸಂಗ್ರಹಕ್ಕೆ ಬಳಕೆಯಾಗುತ್ತಿದ್ದ ಕೃಷಿ ಪರಿಕರ
Last Updated 10 ಫೆಬ್ರುವರಿ 2021, 3:35 IST
ಅಕ್ಷರ ಗಾತ್ರ

ಹುಳಿಯಾರು: ಹಿಂದಿನ ಕಾಲದ ರೈತರು ಕೃಷಿಯಲ್ಲಿ ಬಿತ್ತನೆಯಿಂದ ಹಿಡಿದು ಧಾನ್ಯ ಶೇಖರಣೆಯವರೆಗೆ ಹಲವಾರು ವಿಧಾನಗಳನ್ನು ಅನುಸರಿಸುತ್ತಿದ್ದರು. ಬಹು ಬೇಗ ಹುಳು ಬೀಳುವ ಧಾನ್ಯಗಳನ್ನು ಹಲವಾರು ವರ್ಷ ಶೇಖರಣೆ ಮಾಡಲು ಮೂಡೆಗಳಲ್ಲಿ ಇಟ್ಟು ಜೋಪಾನ ಮಾಡುತ್ತಿದ್ದರು. ಇಂದಿನ ರಾಸಾಯನಿಕ ಬಳಕೆಯ ಕಾಲಚಕ್ರದಲ್ಲಿ ಮೂಡೆಗಳು ಉರುಳಿ ಹೋಗಿ ಕಣ್ಮರೆಯಾಗುತ್ತಿವೆ.

ಸುಗ್ಗಿಯ ಕಾಲ ಮುಗಿದರೇ ಸಾಕು ಪ್ರತಿ ರೈತರು ಆಹಾರ ಧಾನ್ಯಗಳ ಸಂಗ್ರಹಣೆಗೆ ಹಲವಾರು ಕಲೆಗಳನ್ನು ಕಂಡುಕೊಂಡಿದ್ದರು. ರಾಗಿ, ನವಣೆ, ಸಾಮೆ, ಭತ್ತ ಸೇರಿದಂತೆ ಏಕದಳ ಧಾನ್ಯಗಳನ್ನು ಹಗೇವು (ನೆಲದಲ್ಲಿ ಗುಳಿತೋಡಿ), ಪಣತ, ವಾಡೆ, ಕೊಮೆ ಇವುಗಳಲ್ಲಿ ಶೇಖರಣೆ ಮಾಡುತ್ತಿದ್ದರು. ಇನ್ನೂ ಅಕ್ಕಡಿ ಸಾಲಿನಲ್ಲಿ ಬೆಳದ ದ್ವಿದಳ ಧಾನ್ಯಗಳಾದ ಹುರುಳಿ, ತೊಗರಿ, ಅಲಸಂದೆ, ಉದ್ದು, ಹೆಸರುಕಾಳುಗಳನ್ನು ಮೂಡೆಯಲ್ಲಿ ಸಂಗ್ರಹಿಸಿಡುತ್ತಿದ್ದರು.

ಮೂಡೆ ಕಟ್ಟುವ ವಿಧಾನ: ಮೂಡೆ ಕಟ್ಟುವ ವಿಧಾನ ತಲೆಮಾರುಗಳಿಂದ ನಡೆದು ಬಂದಿದೆ. ತಮ್ಮ ಜಮೀನುಗಳ ತಗ್ಗು ಪ್ರದೇಶದಲ್ಲಿ ಬೆಳೆಯುವ ಮೆದೆಹುಲ್ಲು (ಗಟ್ಟಿಯಾಗಿರುವ ಹುಲ್ಲು) ಕೊಯ್ಲು ಮಾಡಿ ತರುತ್ತಿದ್ದರು. ನೆರಳಲ್ಲಿ ಒಣಗಿಸಿ ಹಗ್ಗದ ರೂಪದಲ್ಲಿ ಹೆಣೆಯುತ್ತಿದ್ದರು. ಅದನ್ನು ವೃತ್ತದಾಕಾರದಲ್ಲಿ ಸುತ್ತಿ ಅದರಲ್ಲಿ ಕಾಳುಗಳನ್ನು ಹಾಕಿ ಹುಲ್ಲಿನ ಗೋಡೆಯ ಭತ್ತದ ಹುಲ್ಲನ್ನು ಹಾಕಿ ಅದರ ಜತೆ ಒಣ ಮೆಣಸಿನಕಾಯಿ ಹಾಗೂ ಚೌಳುಮಣ್ಣನ್ನು ಸೇರಿಸುತ್ತಿದ್ದರು. ನಂತರ ಧಾನ್ಯಗಳನ್ನು ತುಂಬುತ್ತಾ ಹೋಗಿ ದುಂಡಗೆ ಸುತ್ತಿ ಹಗ್ಗದಿಂದ ಕಟ್ಟಿ ಬಿಗಿಗೊಳಿಸುತ್ತಿದ್ದರು.

ಧಾನ್ಯ ತುಂಬಿದ ಮೂಡೆಗಳನ್ನು ತೇವಾಂಶ ಇಲ್ಲದ ಕಡೆ ಕಲ್ಲಿನ ಮೇಲೆ ಇಡುತ್ತಿದ್ದರು. ಹೀಗೆ ಶೇಖರಣೆ ಮಾಡಿದ ಧಾನ್ಯಗಳು ವರ್ಷಾನುಗಟ್ಟಲೇ ಹಾಳಾಗದಂತೆ ನಳನಳಿಸುತ್ತಿದ್ದವು. ಅಲ್ಲದೆ ಇಲಿ ಮತ್ತು ಹೆಗ್ಗಣಗಳಿಂದ ಧಾನ್ಯಗಳನ್ನು ಉಳಿಸಿಕೊಳ್ಳಲು ಸಹಕಾರಿಯಾಗಿತ್ತು. ಮುಂದಿನ ವರ್ಷದ ಕೃಷಿ ಚಟುವಟಿಕೆಗಳಿಗೆ ಬೇಕಾಗುವ ಬಿತ್ತನೆ ಬೀಜಗಳನ್ನು ಸಹ ಇದೇ ಮೂಡೆಗಳಲ್ಲಿ ಸಂಗ್ರಹಿಸುತ್ತಿದ್ದುದು ವಿಶೇಷವಾಗಿತ್ತು.

ರಾಸಾಯನಿಕ ಮುಕ್ತ ಸಂಗ್ರಹಣೆ: ಇಂದು ಧಾನ್ಯಗಳನ್ನು ಚೀಲಗಳಲ್ಲಿ ಸಂಗ್ರಹಿಸಿಡುತ್ತಾರೆ. ಚೀಲಗಳಲ್ಲಿ ರಾಸಾಯನಿಕ ವಸ್ತುಗಳನ್ನು ಇಡುತ್ತಾರೆ. ಕೆಲ ಕಡೆ ಚೀಲಗಳಿಗೆ ರಾಸಾಯನಿಕ ಔಷಧಿ ಸಿಂಪಡಣೆ ಮಾಡುವುದು ಪರಿಪಾಠವಾಗಿದೆ. ಆದರೆ ಹಿಂದಿನ ಕಾಲದಲ್ಲಿ ಸಾಂಪ್ರದಾಯಿಕವಾಗಿ ಮೂಡೆಗಳನ್ನು ಬಳಸುತ್ತಿದ್ದರು. ಇದರಿಂದ ರಾಸಾಯನಿಕ ಮುಕ್ತ ಹೆಚ್ಚು ಜೀವಸತ್ವವಿರುವ ಆಹಾರ ಪಡೆದು ಬಳಸುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT