ಸೋಮವಾರ, ಆಗಸ್ಟ್ 26, 2019
21 °C
ಕಲುಷಿತ ಆಹಾರ ಸೇವನೆ: ದೇವರಾಯಪಟ್ಟಣದ ಹಿಂದೂ ಸಾದರ ಮಹಿಳಾ ವಸತಿ ನಿಲಯದಲ್ಲಿ ನಡೆದ ಘಟನೆ

35ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥ

Published:
Updated:
Prajavani

ತುಮಕೂರು: ನಗರದ ದೇವರಾಯಪಟ್ಟಣದ ಹಿಂದೂ ಸಾದರ ಸಮಿತಿಯ ಮಹಿಳಾ ವಸತಿ ನಿಲಯದ 35ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಕಲುಷಿತ ಆಹಾರ ಸೇವಿಸಿ ಅಸ್ವಸ್ಥರಾಗಿದ್ದಾರೆ. ಬುಧವಾರ ನಗರದ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ.

ನಗರದ ಬಿ.ಎಚ್.ರಸ್ತೆ ಪಕ್ಕದ ವಿನಾಯಕ ಆಸ್ಪತ್ರೆ, ಆದರ್ಶ ನಗರದ ಆದರ್ಶ ಆಸ್ಪತ್ರೆಗಳಲ್ಲಿ ಕೆಲವರು ಚಿಕಿತ್ಸೆ ಪಡೆದು ತೆರಳಿದರೆ ಇನ್ನೂ ಕೆಲವರು ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಿಲಯದಲ್ಲಿ 60ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿದ್ದು, ಮಂಗಳವಾರ ರಾತ್ರಿ ಮಜ್ಜಿಗೆ, ಮುದ್ದೆ, ಅನ್ನ ಸಾಂಬಾರ ಊಟ ಮಾಡಿದ್ದರು. ಬೆಳಿಗ್ಗೆ ಒಬ್ಬೊಬ್ಬರಿಗೆ ವಾಂತಿ, ಹೊಟ್ಟೆ ನೋವು, ತಲೆ ಸುತ್ತು ಬಂದು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ. ಕೆಲವರು ತೀವ್ರ ಹೊಟ್ಟೆ ನೋವು, ಬೇಧಿ ಇದ್ದುದರಿಂದ ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಕ್ಕಳಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದ್ದನ್ನು ತಿಳಿದು ಕೆಲ ಪೋಷಕರು ಆಸ್ಪತ್ರೆಗೆ ಬಂದು ಚಿಕಿತ್ಸೆಗೆ ಮುತುವರ್ಜಿವಹಿಸಿದರು. ಕೆಲವರು ಬೇರೆ ಆಸ್ಪತ್ರೆಗಳಿಗೆ ಕರೆದುಕೊಂಡು ಹೋದರು.

ಜಿಲ್ಲಾ ಆರೋಗ್ಯಾಧಿಕಾರಿ ಭೇಟಿ

ವಿಷಯ ತಿಳಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಚಂದ್ರಿಕಾ ಅವರು ವಿನಾಯಕ ಆಸ್ಪತ್ರೆಗೆ ಬುಧವಾರ ರಾತ್ರಿ ಭೇಟಿ ನೀಡಿ ವಿದ್ಯಾರ್ಥಿನಿಯರ ಆರೋಗ್ಯ ವಿಚಾರಿಸಿದರು. 

‘30ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಕಲುಷಿತ ಆಹಾರ ಸೇವನೆಯಿಂದ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ಆದರ್ಶ ಆಸ್ಪತ್ರೆಯಲ್ಲಿ 12 ವಿದ್ಯಾರ್ಥಿನಿಯರು, ವಿನಾಯಕ ಆಸ್ಪತ್ರೆಯಲ್ಲಿ 25ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಚಿಕಿತ್ಸೆ ಪಡೆದಿದ್ದಾರೆ’ ಎಂದು ಹೇಳಿದರು.

ರಾತ್ರಿ ಅನ್ನ ಸಾಂಬಾರು, ಮುದ್ದೆ ಊಟ ಸಿದ್ಧಪಡಿಸಲಾಗಿತ್ತು. ಎಲ್ಲರೂ ಊಟ ಮಾಡಿದ್ದರು. ಕೆಲವರಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ಆರೋಗ್ಯ ಸಮಸ್ಯೆ ಕಂಡು ಬಂದ ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ವಸತಿ ನಿಲಯದ ವಾರ್ಡನ್ ಅನಸೂಯ ‘ ಪ್ರಜಾವಾಣಿ’ಗೆ ವಿವರಿಸಿದರು.

ಹಿಂದೂ ಸಾದರ ಸಮಿತಿಯ ಮುಖಂಡ ಪಿ. ಮೂರ್ತಿ, ಸಮಾಜದ ಕೇಂದ್ರ ಸಮಿತಿ ಸದಸ್ಯ ನಾಗರಾಜ್ ಅವರು ಸೇರಿದಂತೆ ಸಮುದಾಯದ ಮುಖಂಡರು, ಸಮಿತಿ ಸದಸ್ಯರು ಆಸ್ಪತ್ರೆಯಲ್ಲಿದ್ದರು.

Post Comments (+)