ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾನಗರ ಪಾಲಿಕೆ ಅಂದ್ರೆ ಕಸದ ತಿಪ್ಪೆ

ಎಜೆಂಟರು, ಗುತ್ತಿಗೆದಾರರ ಹಾವಳಿಗೆ ಸಿಡಿಮಿಡಿ, ತುಮಕೂರು ಮಹಾನಗರ ಪಾಲಿಕೆ ತುರ್ತು ಸಭೆಯಲ್ಲಿ ಸಂಸದ ಜಿ.ಎಸ್. ಬಸವರಾಜ್ ಆಕ್ರೋಶ
Last Updated 15 ಜೂನ್ 2019, 16:12 IST
ಅಕ್ಷರ ಗಾತ್ರ

ತುಮಕೂರು: ‘ತುಮಕೂರು ಮಹಾನಗರ ಪಾಲಿಕೆ ಎಂದರೆ ಕಸ ತುಂಬಿದ ತಿಪ್ಪೆಯಂತಾಗಿದೆ. ಎಲ್ಲ ಕೆಲಸಕ್ಕೂ ದುಡ್ಡು. ಏಜೆಂಟರುಗಳು ತುಂಬಿದ್ದಾರೆ. ಏಜೆಂಟರ ಕಡೆಯಿಂದ ಬಂದರೆ ಮಾತ್ರ ಕೆಲಸ. ಇಲ್ಲದೇ ಇದ್ದರೆ ಕೆಲಸವೇ ಆಗುವುದಿಲ್ಲ. ಸಾರ್ವಜನಿಕರು ರೋಸಿ ಹೋಗಿದ್ದಾರೆ’

ಶನಿವಾರ ಮಹಾನಗರ ಪಾಲಿಕೆಯಲ್ಲಿ ಕುಡಿಯುವ ನೀರಿನ ಸಮಸ್ಯೆ, ಸ್ವಚ್ಛತೆ, ಕಂದಾಯ, ಕಟ್ಟಡ ನಿರ್ಮಾಣಕ್ಕೆ ಪರವಾನಗಿ ನೀಡುವ ನಾಲ್ಕು ವಿಷಯಕ್ಕೆ ಸಂಬಂಧಿಸಿದಂತೆ ಮೇಯರ್ ಲಲಿತಾ ರವೀಶ್ ಅಧ್ಯಕ್ಷತೆಯಲ್ಲಿ ನಡೆದ ತುರ್ತು ಸಭೆಯಲ್ಲಿ ಸಂಸದ ಜಿ.ಎಸ್.ಬಸವರಾಜ್ ವ್ಯಕ್ತಪಡಿಸಿದ ಆಕ್ರೋಶವಿದು.

‘ಏಜೆಂಟರಿಗೆ ಕಡಿವಾಣ ಹಾಕಬೇಕು. ಪಾಲಿಕೆ ಅಧಿಕಾರಿಗಳು, ಸಿಬ್ಬಂದಿ ಏಜೆಂಟರು ಬಂದರೆ ಯಾವ ಕೆಲಸವನ್ನೂ ಮಾಡಿಕೊಡಬಾರದು. ಪಾಲಿಕೆ ಸದಸ್ಯರೂ ಅಷ್ಟೇ. ನಿಯಮಬಾಹಿರ ಕೆಲಸ ಮಾಡಲು ಒತ್ತಡ ಹೇರಬಾರದು. ಮೇಯರ್, ಆಯುಕ್ತರು, ಸದಸ್ಯರು, ಅಧಿಕಾರಿಗಳು ಸೇರಿ ತುಮಕೂರು ಮಹಾನಗರ ಪಾಲಿಕೆಯನ್ನು ಸುಧಾರಿಸುವ ಕೆಲಸ ಮಾಡಿ. ಒಳ್ಳೆಯ ಕೆಲಸ ಮಾಡಿ ಹೆಸರು ಗಳಿಸಿ’ ಎಂದು ಕಿವಿಮಾತು ಹೇಳಿದರು.

ಸಂಸದರ ಮಾತಿಗೆ ಪ್ರತಿಕ್ರಿಯಿಸಿದ ಆಯುಕ್ತ ಟಿ.ಭೂಬಾಲನ್, ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಈಗಾಗಲೇ ಒಬ್ಬ ಏಜೆಂಟರ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ ಎಂದು ಹೇಳಿದರು.

ನೀರಿನ ಸಮಸ್ಯೆ ನಗರದಲ್ಲಿ ತಾಂಡವವಾಡುತ್ತಿದೆ. ನಗರದ ಜನರಿಗೆ ಕುಡಿಯಲು ನೀರು ಸಮರ್ಪಕವಾಗಿ ಕೊಡಲು ಆಗದೇ ಇದ್ದರೆ ಹೇಗೆ? ವಾರ್ಡಿನಲ್ಲಿ ಸದಸ್ಯರಿಗೆ ಜನರು ಉಗಿಯುತ್ತಿದ್ದಾರೆ. ನಿಮ್ಮನ್ನು ಆಯ್ಕೆ ಮಾಡಿ ಏನು ಪ್ರಯೋಜನ ಎಂದು ಪ್ರಶ್ನೆ ಮಾಡುತ್ತಿದ್ದಾರೆ ಎಂದು 11ನೇ ವಾರ್ಡಿನ ಸದಸ್ಯ ಮನು ಸಮಸ್ಯೆ ವಿವರಿಸುತ್ತಿದ್ದಂತೆಯೇ ಇತರ ಸದಸ್ಯರೂ ದನಿಗೂಡಿಸಿದರು.

ಬೇಸಿಗೆ ಕಾಲದಲ್ಲಿ ನೀರಿನ ಸಮಸ್ಯೆ ಆಗುತ್ತದೆ ಎಂಬುದು ಗೊತ್ತಿದ್ದರೂ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿಲ್ಲ. ಕ್ರಮ ಕೈಗೊಂಡಿದ್ದರೆ ನೀರಿಗೆ ಗೋಳಾಡುವ ಸ್ಥಿತಿ ಬರುತ್ತಿರಲಿಲ್ಲ. ಇನ್ನಾದರೂ ಈ ದಿಶೆಯಲ್ಲಿ ಅಧಿಕಾರಿಗಳು ಸಮರ್ಪಕ ನೀರು ಪೂರೈಕೆಗೆ ಗಮನಹರಿಸಲಿ. ನೀರಿನ ಸಮಸ್ಯೆ ಇರುವ ವಾರ್ಡುಗಳಲ್ಲಿ ಕೊಳವೆ ಬಾವಿ ಕೊರೆಸಿ ಸಮಸ್ಯೆ ಪರಿಹರಿಸುವ ಪ್ರಯತ್ನ ಮಾಡಬೇಕು ಎಂದು ಒತ್ತಾಯ ಮಾಡಿದರು.

ನೀರು ಪೂರೈಕೆ ವಿಭಾಗದ ಎಂಜಿನಿಯರ್ ವಸಂತ್ ಮಾತನಾಡಿ,‘ ನಗರಕ್ಕೆ ಸಮಗ್ರ ನೀರು ಪೂರೈಕೆಗೆ 878 ಎಂಸಿಎಫ್‌ಟಿ ಡಿ ನೀರು ಬೇಕು. ಆದರೆ, ನೀರು ಸಂಗ್ರಹಕ್ಕೆ ಯೋಗ್ಯವಾದ ದೊಡ್ಡ ಕೆರೆ ಎಂದರೆ ಬುಗುಡನಹಳ್ಳಿ ಕೆರೆ. ಈ ಕೆರೆಯಲ್ಲಿ 363 ಎಂಸಿಎಫ್‌ಟಿ, ಮೈದಾಳ ಕೆರೆಗೆ 192 ಎಂಸಿಎಫ್‌ಟಿ, ಅಮಾನಿಕೆರೆ 152 ಎಂಸಿಎಫ್‌ಟಿ ನೀರು ಸಂಗ್ರಹ ಸಾಮರ್ಥ್ಯವಿದೆ. ಇದರಲ್ಲಿ ಈ ವರ್ಷ ಮುನ್ನೆಚ್ಚರಿಕೆ ಕ್ರಮವಾಗಿ ಬುಗುಡನಹಳ್ಳಿ ಕೆರೆ ಭರ್ತಿ ಮಾಡಿಕೊಂಡಿದ್ದರಿಂದ, ಮೈದಾಳ ಕೆರೆಯ ನೀರನ್ನು 7–8 ವಾರ್ಡುಗಳಿಗೆ ಮುನ್ನೆಚ್ಚರಿಕೆ ವಹಿಸಿ ಪೂರೈಸಿದ್ದರಿಂದ ಈ ತಿಂಗಳವರೆಗೂ ನೀರು ಪೂರೈಕೆ ಮಾಡಲು ಸಾಧ್ಯವಾಗಿದೆ. ಜನವರಿ ತಿಂಗಳಲ್ಲಿಯೇ ಮುನ್ನೆಚ್ಚರಿಕೆ ಕ್ರಮವಹಿಸಲಾಗಿತ್ತು’ ಎಂದು ವಿವರಿಸಿದರು.

ನೀವು ಹೀಗೆ ಮಾಹಿತಿ ಕೊಡುತ್ತೀರಿ. ಆದರೆ, ವಾರ್ಡಿನಲ್ಲಿ ನೀರಿನ ಸಮಸ್ಯೆ ಇದೆಯಲ್ಲ. ಸಮರ್ಪಕವಾಗಿ ನೀರು ಸಿಗುತ್ತಿಲ್ಲ. ಮೊದಲು ಕೊಳವೆ ಬಾವಿ ಕೊರೆಸುವ ವ್ಯವಸ್ಥೆ ಮಾಡಿ ಎಂದು ಸದಸ್ಯರು ಮೇಯರ್ ಅವರಿಗೆ ಒತ್ತಾಯ ಮಾಡಿದರು.

ಲಲಿತಾ ರವೀಶ್ ಮಾತನಾಡಿ, ‘ಲೋಕಸಭೆ ಚುನಾವಣೆ ನೀತಿ ಸಂಹಿತೆ ಕಾರಣಕ್ಕೆ ನಾನು ಆಡಳಿತಕ್ಕೆ ಏನು ಹೇಳುವ ಸ್ಥಿತಿಯಲ್ಲಿ ಇರಲಿಲ್ಲ. ಆದಾಗ್ಯೂ ಪಾಲಿಕೆಗೆ ಬಂದು ಆಯುಕ್ತರಿಗೆ ಬಂದು ಮನವಿ ಮಾಡಿದ್ದೆ. ಕೊಳವೆ ಬಾವಿ ಕೊರೆಸಲು ಕೋರಿದ್ದೆ. ಏನೂ ಆಗಿಲ್ಲ. ಆಯುಕ್ತರೇ ಇದಕ್ಕೆ ಉತ್ತರಿಸಬೇಕು ಎಂದು ಸೂಚಿಸಿದರು.

ಆಯುಕ್ತ ಟಿ.ಭೂಬಾಲನ್ ಮಾತನಾಡಿ,‘ ಬಜೆಟ್ ಒಪ್ಪಿಗೆಯನ್ನೇ ನೀಡದೇ ಕೊಳವೆ ಬಾವಿ ಕೊರೆಸಲು ನಿಯಮಾವಳಿ ಪ್ರಕಾರ ಅವಕಾಶವಿಲ್ಲ. ನಾನು ಮೂರು ಬಾರಿ ಗಮನಕ್ಕೆ ತಂದರೂ ಬಜೆಟ್ ಒಪ್ಪಿಗೆ ಕೊಟ್ಟಿಲ್ಲ. ಹೇಗೆ ಕೊಳವೆ ಬಾವಿ ಕೊರೆಸಲು ಬರುತ್ತದೆ. ಯಾರು ಕೊಳವೆ ಬಾವಿ ಕೊರೆಯಲು ಮುಂದೆ ಬರುತ್ತಾರೆ’ ಎಂದು ಪ್ರಶ್ನಿಸಿದರು.

ಚರ್ಚೆ ದೀರ್ಘಕ್ಕೆ ಹೋಗುವಷ್ಟರಲ್ಲಿ ಸಂಸದರು ಮಧ್ಯೆಪ್ರವೇಶಿಸಿ ಸಮಾಧಾನ ಪಡಿಸಿದರು.


80 ಕೊಳವೆ ಬಾವಿ ಕೊರೆಸಿ

ಸಂಸದರ ಸಲಹೆ: ‘ಎಲ್ಲೆಲ್ಲಿ ತೀರಾ ನೀರಿನ ಸಮಸ್ಯೆ ಇದೆಯೊ ಆ ವಾರ್ಡುಗಳನ್ನು ಗುರುತಿಸಿ 70–80 ಕೊಳವೆ ಬಾವಿ ಕೊರೆಸಿ ನೀರಿನ ವ್ಯವಸ್ಥೆ ಮಾಡಿ. ನೀರಿನ ಸಮಸ್ಯೆ ಪರಿಹರಿಸುವುದಕ್ಕಾಗಿಯೇ ಜಿಲ್ಲಾಧಿಕಾರಿಗಳ ಬಳಿ ಸರ್ಕಾರದ ಹಣ ಇದೆ. ಅದನ್ನು ಬಳಸಿಕೊಳ್ಳಿ’ ಎಂದು ಸಂಸದರು ಸಲಹೆ ನೀಡಿದರು.

ಸದಸ್ಯ ನಯಾಜ್ ಅಹಮ್ಮದ್ ಮಾತನಾಡಿ, ‘ನಗರದ ಯಾವುದೇ ವಾರ್ಡಿನಲ್ಲಿ ಕಟ್ಟಡ ನಿರ್ಮಾಣಕ್ಕೆ ಪರವಾನಗಿ ಸಿಗುತ್ತಿಲ್ಲ. 400 ಕಡತಗಳು ಬಾಕಿ ಇವೆ. ನಾನಾ ಕಾರಣ ನೀಡಿ ಪರವಾನಗಿ ಕೊಡುತ್ತಿಲ್ಲ. ಒಂದು ನಲ್ಲಿ ಸಂಪರ್ಕ ತೆಗೆದುಕೊಳ್ಳಲು ಆಗುತ್ತಿಲ್ಲ. ಹಲವು ವರ್ಷಗಳ ಹಿಂದೆ ಮನೆ ಕಟ್ಟಿಸಿಕೊಂಡವರು ಮನೆ ಮೇಲೆ ಮತ್ತೊಂಡು ಕಟ್ಟಡ ಕಟ್ಟಲು ಪರವಾನಗಿ ಸಿಗುತ್ತಿಲ್ಲ. ಬಡವರಿಗೆ, ಮಧ್ಯಮ ವರ್ಗದವರಿಗೆ ಸಮಸ್ಯೆ ಆಗಿದೆ. ಇದನ್ನು ಸಡಿಲಗೊಳಿಸಿ ಸ್ಪಂದಿಸಬೇಕು’ ಎಂದು ಮನವಿ ಮಾಡಿದರು.

ನಾವು ಹೇಳಿಲ್ಲ: ಸಭೆಗೆ ಮಾಧ್ಯಮದವರ ಪ್ರವೇಶಕ್ಕೆ ಅವಕಾಶ ಕೊಡಬಾರದು ಎಂದು ಯಾವ ಸದಸ್ಯರು ಹೇಳಿಲ್ಲ. ಕೆಲ ಪತ್ರಿಕೆಗಳಲ್ಲಿ ಸದಸ್ಯರ ಆಕ್ಷೇಪ ಎಂಬ ವಿಷಯ ಪ್ರಕಟವಾಗಿದೆ. ಇದರಿಂದ ನಮಗೆ ಮುಜುಗರಾಗಿದೆ. ಆಯುಕ್ತರು ಉತ್ತರಿಸಬೇಕು ಎಂದು ಸದಸ್ಯರು ಹೇಳಿದರು.

ಪತ್ರಿಕೆಯವರು ಬರೆದರೆ ನಾನು ಹೇಗೆ ಅದಕ್ಕೆ ಉತ್ತರಿಸಲಿ. ಅವರು ಹಲವಾರು ವಿಷಯ ಬರೆಯುತ್ತಾರೆ ಎಂದು ಆಯುಕ್ತರು ಪ್ರತಿಕ್ರಿಯಿಸಿದರು. ಇದನ್ಯಾಕ್ಕೆ ಗಂಭೀರವಾಗಿ ತೆಗೆದುಕೊಳ್ಳುತ್ತೀರಿ. ಇವನ್ನೆಲ್ಲ ಬಿಟ್ಟು ಸಮಸ್ಯೆಗಳ ಕುರಿತು ಚರ್ಚಿಸಿ ಎಂದು ಸಂಸದರು ಹೇಳಿದಾಗ ಚರ್ಚೆಗೆ ತೆರೆ ಬಿದ್ದಿತು.

ಉಪಮೇಯರ್ ಬಿ.ಎಸ್. ರೂಪಶ್ರೀ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT