ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಪಟೂರು| ನಫೆಡ್: ರೈತರಿಂದ ಹಣ ಸುಲಿಗೆ

ತಿಪಟೂರು: ಕೊಬ್ಬರಿ ಬೆಳೆಗಾರರ ಆರೋಪ
Last Updated 7 ಮಾರ್ಚ್ 2023, 9:54 IST
ಅಕ್ಷರ ಗಾತ್ರ

ತಿಪಟೂರು: ನಗರದ ಎಪಿಎಂಸಿ ಆವರಣದಲ್ಲಿ ಇರುವ ನಫೆಡ್ ಕೇಂದ್ರದಲ್ಲಿ ರೈತರು ಕೊಬ್ಬರಿ ಮಾರಾಟ ಮಾಡಲು ಅಧಿಕಾರಿಗಳಿಗೆ ಲಂಚ ನೀಡಬೇಕಿದೆ. ಇಲ್ಲದಿದ್ದರೆ ಮಾರಾಟಕ್ಕೆ ತಂದಿರುವ ಕೊಬ್ಬರಿಯನ್ನು ಹಿಂದಕ್ಕೆ ತೆಗೆದುಕೊಂಡು ಹೋಗುವ ಪರಿಸ್ಥಿತಿ ಸೃಷ್ಟಿಯಾಗಿದೆ ಎಂದು ರೈತರು ದೂರಿದ್ದಾರೆ.

ಕೊಬ್ಬರಿ ಬೆಲೆಯು ಈಗಾಗಲೇ ಪಾತಾಳ ಹಿಡಿದು ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು ಜೀವನ ನಡೆಸುವುದು ಕಷ್ಟಕರವಾಗಿದೆ. ಇಂತಹ ಸಂದರ್ಭದಲ್ಲಿ ರೈತರಿಗೆ ಅನುಕೂಲವಾಗುವಂತೆ ಸರ್ಕಾರ ನಫೆಡ್ ಕೇಂದ್ರ ತೆರೆದಿದೆ. ಒಂದು ಕ್ವಿಂಟಲ್‍ಗೆ ₹ 11,750 ನಿಗದಿಪಡಿಸಿ ರೈತರಿಗೆ ನೆರವಾಗಲು ಮುಂದಾಗಿದೆ. ಆದರೆ, ಕೊಬ್ಬರಿ ಬೆಳೆಗಾರರ ನೆರವಿಗೆ ಅಧಿಕಾರಿಗಳು ಬಾರದೆ ಹಣಕ್ಕೆ ಪೀಡಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ರೈತ ಕೊಬ್ಬರಿಯನ್ನು ನೋಂದಣಿ ಮಾಡಿಸಲು ಕೇಂದ್ರದ ಹತ್ತಿರ ಧಾವಿಸಿದರೆ ಖರೀದಿ ಕೇಂದ್ರದ ಅಧಿಕಾರಿಗೆ ₹ 200 ನೀಡಬೇಕು. ವಾಹನದಿಂದ ಚೀಲಗಳನ್ನು ಇಳಿಸುವ ಹಮಾಲಿಗಳಿಗೆ ಒಂದು ಚೀಲಕ್ಕೆ ₹ 20 ರಿಂದ ₹ 30 ಕೊಡಬೇಕು. ಎರಡು ಉಂಡೆ ಕೊಬ್ಬರಿ ನೀಡಬೇಕು. ಸಣ್ಣ ಹಾಗೂ ದಪ್ಪ ಎಂದು ವಿಂಗಡಿಸುವವರಿಗೆ ಹಣ ಕೊಟ್ಟರೆ ಮಾತ್ರ ಮುಂದೆ ಪಾಸ್‌ ಮಾಡುತ್ತಾರೆ. ಹಣ ನೀಡದಿದ್ದರೆ ಕೊಬ್ಬರಿ ನಫೆಡ್ ಕೇಂದ್ರ ತಲುಪುವುದಿಲ್ಲ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.

ನಫೆಡ್ ಕೇಂದ್ರದ ಕೊಬ್ಬರಿ ಚೀಲಗಳು ಹರಿದಿದ್ದು, ಪ್ರತಿ ಚೀಲದಲ್ಲಿಯೂ 41 ಕೆ.ಜಿ 300 ಗ್ರಾಂ ಕೊಬ್ಬರಿಯ ತೂಕವಿರಬೇಕು. ರೈತರು ಅಷ್ಟಕ್ಕೆ ತಂದರೂ 40 ಕೆ.ಜಿ ಮಾತ್ರ ದಾಖಲಿಸಲಾಗುತ್ತದೆ. ಇನ್ನೂ ಕೊಬ್ಬರಿ ಖರೀದಿಗೆ ಬಿಟ್ಟ ರೈತ ಯಾವುದೇ ರಶೀದಿಯಿಲ್ಲದೆ ಬರಿಗೈಯಲ್ಲಿ ಆತಂಕದಿಂದ ಮನೆಗೆ ತೆರಳುವಂತಾಗಿದೆ.

ಖರೀದಿ ಕೇಂದ್ರದಲ್ಲಿ ರೈತನಿಗೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಅಕ್ಕಪಕ್ಕದ ಟೀ ಅಂಗಡಿಗಳನ್ನೇ ಆಶ್ರಯಿಸಬೇಕಿದೆ. ಸೂಚನಾ ಫಲಕವಿಲ್ಲದೆ ರೈತನಿಗೆ ಯಾವ ಮಾಹಿತಿಯೂ ಸಿಗುತ್ತಿಲ್ಲ. ಇದಕ್ಕೆ ಸಂಬಂಧಪಟ್ಟ ಇಲಾಖೆ ಅಥವಾ ಮೇಲಧಿಕಾರಿಗಳು ಇತ್ತ ಗಮನಹರಿಸಿ ಸಂಕಷ್ಟದಲ್ಲಿರುವ ಕೊಬ್ಬರಿ ಬೆಳೆಗಾರರ ನೆರವಿಗೆ ಧಾವಿಸಬೇಕು ಎಂದು ರೈತರ ಆಗ್ರಹ.

‘ಇಲ್ಲಿನ ಹಮಾಲಿಗಳು ನಮಗೆ ಸಂಬಂಧಿಸಿದವರಲ್ಲ. ಅವರು ಬಾಬು ಎಂಬ ಗುತ್ತಿಗೆದಾರರ ಮೂಲಕ ಬಂದಿದ್ದು ನಮ್ಮ ಮಾಹಿತಿ, ಸಲಹೆಗಳನ್ನು ತಿರಸ್ಕರಿಸುತ್ತಾರೆ’ ಎಂದು ಖರೀದಿ ಕೇಂದ್ರದ ಅಧಿಕಾರಿ ಮಲ್ಲಿಕಾರ್ಜುನ ತಿಳಿಸಿದರು.

‘ಅಧಿಕಾರಿಗಳು ರವಾನೆದಾರರ ಕೊಬ್ಬರಿಯನ್ನು ವಿಂಗಡಣೆ ಮಾಡದೆ ನೇರವಾಗಿ ತೂಕ ಮಾಡುತ್ತಾರೆ. ನಮ್ಮ ಚೀಲಗಳನ್ನು ನೆಲಕ್ಕೆ ಹಾಕಿ ಸಣ್ಣ-ದಪ್ಪ ಎಂದು ವಿಂಗಡಿಸುತ್ತಾರೆ. ಸಣ್ಣ ಪ್ರಮಾಣದ ಕೊಬ್ಬರಿಯು ತಿನ್ನಲು ಹಾಗೂ ಎಣ್ಣೆ ತಯಾರಿಕೆಗೆ ಬಳಸಬಹುದು ಎಂಬುದನ್ನು ಅಧಿಕಾರಿಗಳು ತಿಳಿದುಕೊಳ್ಳಬೇಕು’ ಎಂದು ರೈತ ಶಿವನಂಜಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT