ಸಹಜ ಕೃಷಿ ಮಾತ್ರವೇ ಉಳಿವಿನ ಉಳುಮೆ

7
ಕದಳಿವನದಲ್ಲಿ ಒಂದು ದಿನದ ಕಾರ್ಯಾಗಾರ; ಸಹಜ ಕೃಷಿ ಪ್ರತಿಪಾದಕ ಬಾಳೇಕಾಯಿ ಶಿವನಂಜಯ್ಯ ಅಭಿಮತ

ಸಹಜ ಕೃಷಿ ಮಾತ್ರವೇ ಉಳಿವಿನ ಉಳುಮೆ

Published:
Updated:
ಚಿಕ್ಕನಾಯಕನಹಳ್ಳಿ ತಾಲ್ಲೂಕು ಶೆಟ್ಟಿಕೆರೆ ಹೋಬಳಿ ಜೆ.ಸಿ.ಪುರದ ಕದಳಿವನದಲ್ಲಿ ಗುರುವಾರ ಆಯೋಜಿಸಿದ್ದ ಒಂದು ದಿನದ ಸಹಜ ಕೃಷಿ ಕಾರ್ಯಾಗಾರದಲ್ಲಿ ಶಿವನಂಜಯ್ಯ ಬಾಳೇಕಾಯಿ ಶಿಬಿರಾರ್ಥಿಗಳಿಗೆ ಸಹಜ ಕೃಷಿ ತಂತ್ರಗಳನ್ನು ವಿವರಿಸಿದರು

ಚಿಕ್ಕನಾಯಕನಹಳ್ಳಿ: ‘ಅವೈಜ್ಞಾನಿಕ ಕೃಷಿ ಪದ್ಧತಿ ಹಾಗೂ ಅನಗತ್ಯ ಒಳಸುರಿ ಕಾರಣದಿಂದ ರೈತರು ಸಾಲದ ಶೂಲಕ್ಕೆ ಸಿಕ್ಕಿಕೊಂಡಿದ್ದಾರೆ. ರೈತರು ಸಾಲಮನ್ನಾಕ್ಕಾಗಿ ಸರ್ಕಾರದ ಮುಂದೆ ಕೈಚಾಚಿ ನಿಲ್ಲುವುದು ಹಾಗೂ ಸಾಲ ಮನ್ನಾದಂತಹ ಅವೈಜ್ಞಾನಿಕ ವಿಚಾರ ಸರ್ಕಾರದ ಅದ್ಯತೆಯಾಗುವುದು ದೇಶ ಅಧೋಗತಿಯತ್ತ ಸಾಗುತ್ತಿದೆ ಎನ್ನುವುದರ ಸಂಕೇತ’ ಎಂದು ಸಹಜ ಕೃಷಿ ಪ್ರತಿಪಾದಕ ಬಾಳೇಕಾಯಿ ಶಿವನಂಜಯ್ಯ ಅಭಿಪ್ರಾಯಪಟ್ಟರು.

ತಾಲ್ಲೂಕು ಶೆಟ್ಟಿಕೆರೆ ಹೋಬಳಿ ಜೆ.ಸಿ.ಪುರದ ತಮ್ಮ ಸಹಜ ಕೃಷಿ ತೋಟ ಕದಳಿವನದಲ್ಲಿ ಗುರುವಾರ ಆಯೋಜಿಸಿದ್ದ ಒಂದು ದಿನದ ಸಹಜ ಕೃಷಿ ಕಾರ್ಯಾಗಾರದಲ್ಲಿ ಮಾತನಾಡಿ, ಸಹಜ ಕೃಷಿ ಒಂದೇ ರೈತರ ಸುಸ್ಥಿರ ಬದುಕಿಗೆ ಆಧಾರ ಎಂದರು.

ಕೃಷಿ ದುಡ್ಡು ಹಾಕಿ ದುಡ್ಡು ತಗೆಯುವ ಉದ್ಯಮ ಎಂದು ಭಾವಿಸಿದ್ದು, ಹಸಿರು ಕ್ರಾಂತಿ ಹೆಸರಿನಲ್ಲಿ ಸಹಜ ಕೃಷಿ ವ್ಯವಸ್ಥೆಯನ್ನು ಹಾಳುಮಾಡಿ ಭೂಮಿಗೆ ವಿಷ ಉಣಿಸಿದ್ದರಿಂದ ಕೃಷಿ ವ್ಯವಸ್ಥೆ ವಿನಾಶದ ಹಂಚಿಗೆ ಹೋಗಿದೆ. ಅವೈಜ್ಞಾನಿಕವಾಗಿ ವಾಣಿಜ್ಯ ಬೆಳೆಗಳನ್ನು ಬೆಳೆಯಲು ಪ್ರಾರಂಭಿಸಿದ ರೈತರು ಉಳುಮೆ ಭೂಮಿಗೆ ವಿಷ ಉಣಿಸಿದ್ದಾರೆ. ಇದು ನೇರವಾಗಿ ಪರಿಸರ ಹಾಗೂ ಮನುಷ್ಯರ ಆರೋಗ್ಯವನ್ನು ಹದಗೆಡಿಸಿದೆ. ಹದಗೆಟ್ಟ ವ್ಯವಸ್ಥೆಯನ್ನು ಸರಿದಾರಿಗೆ ತರಲು ಪ್ರಜ್ಞಾವಂತ ರೈತರು ಹಸಿರು ಯೋಧರಂತೆ ಕಾರ್ಯ ನಿರ್ವಹಿಸಬೇಕಿದೆ ಎಂದರು.

ಸಹಜ ಕೃಷಿಯ ಪಂಚಮಂತ್ರಗಳಾದ ಮುಚ್ಚಿಕೆ, ಬೆಳೆ ವೈವಿಧ್ಯ, ಕಡಿಮೆ ನೀರು ಬಳಕೆ, ಸೂರ್ಯನ ಬೆಳಕಿನ ಸಂಯೋಜನೆ ಹಾಗೂ ಕಡಿಮೆ ಒಳಸುರಿಯನ್ನು ಅರಿತು ಕೃಷಿ ಮಾಡಿದರೆ ಕೃಷಿಯಲ್ಲಿ ನಷ್ಟ ಆಗುವುದಿಲ್ಲ. ಸಹಜ ಕೃಷಿ ಎಂಬುದು ಕೃಷಿ ಧ್ಯಾನ. ಕೇವಲ ತೋರಿಕೆಗಾಗಿ ಸಹಜ
ಕೃಷಿಯನ್ನು ಅಳವಡಿಸಿಕೊಳ್ಳಬೇಡಿ. ತಾಳ್ಮೆಯಿಂದ ಸಹಜ ಕೃಷಿಯ ಸರಳ ತತ್ವಗಳನ್ನು ಅಳವಡಿಸಿಕೊಂಡರೆ ಭವಿಷ್ಯದ ಬದುಕು ಸರಿದಾರಿಗೆ ಬರುತ್ತದೆ ಎಂದರು.

ಮೊದಲ ಸಹಜ ಕೃಷಿ ಕಾರ್ಯಾಗಾರಕ್ಕೆ ನಾಡಿನ ಮೂಲೆ ಮೂಲೆಗಳಿಂದ ಮೊದಲೇ ಹೆಸರು ನೊಂದಾಯಿದ 30 ರೈತರು ಬಂದಿದ್ದರು. ಶಿಬಿರಾರ್ಥಿಗಳಿಗೆ ಸಹಜ ಕೃಷಿಯ ಮೂಲ ತತ್ವಗಳನ್ನು ಮತ್ತು ಅದನ್ನು ಅಳವಡಿಸುವ ತಂತ್ರಗಳ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಮನದಟ್ಟು ಮಾಡಿಕೊಡಲಾಯಿತು.

**

‘ಶಿವನಂಜಯ್ಯ ಅವರು ನಡೆಸಿರುವ ಕೃಷಿ ಕ್ರಾಂತಿ ರೈತರು ಹಾಗೂ ಪರಿಸರವನ್ನು ಉಳಿಸಲು ಇರುವ ಮುಂದಿನ ದಾರಿ. ಇಂಥ ಪ್ರಯತ್ನ ಪ್ರಪಂಚಕ್ಕೇ ಬೇಕಾಗಿದೆ.

-ಚಂದ್ರಶೇಖರ್ ಬಿರಾದಾರ್, ಕೃಷಿ ಸಂಶೋಧಕ, ಕಲಬುರ್ಗಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !