ಶನಿವಾರ, ಮಾರ್ಚ್ 25, 2023
29 °C
ಆಮೆ ವೇಗದಲ್ಲಿ ಸಾಗಿದ ನೀರಾವರಿ ಕಾಮಗಾರಿ

ಭದ್ರಾ ನೀರಿಗೆ ಇನ್ನೂ 10 ವರ್ಷ ಬೇಕೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಭದ್ರ ಮೇಲ್ದಂಡೆ ಯೋಜನೆ ಕಾಮಗಾರಿ ಇದೇ ವೇಗದಲ್ಲಿ ನಡೆದರೆ ಜಿಲ್ಲೆಗೆ ನೀರು ಹರಿದು ಬರಲು ಇನ್ನೂ ಹತ್ತು ವರ್ಷಗಳು ಬೇಕಾಗುತ್ತದೆ ಎಂದು ಕಾಂಗ್ರೆಸ್ ಮುಖಂಡ ಟಿ.ಬಿ.ಜಯಚಂದ್ರ ಶುಕ್ರವಾರ ಆಕ್ರೋಶ ವ್ಯಕ್ತಪಡಿಸಿದರು.

ತುಮಕೂರು ಸೇರಿದಂತೆ ಮಧ್ಯ ಕರ್ನಾಟಕದ ಹಲವು ಜಿಲ್ಲೆಗಳಿಗೆ ನೀರು ಒದಗಿಸುವ ₹12,340 ಕೋಟಿ ಮೊತ್ತದ ಭದ್ರ ಮೇಲ್ದಂಡೆ ಯೋಜನೆಯ ಕಾಮಗಾರಿ ಆಮೆ ವೇಗದಲ್ಲಿ ಸಾಗಿದೆ. ಜಿಲ್ಲೆಯಲ್ಲಿ ನಾಲಾ ಕಾಮಗಾರಿ ತೆವಳುತ್ತಾ ಸಾಗಿದೆ. ಚುರುಕುಗೊಳಿಸುವ ಪ್ರಯತ್ನವೇ ನಡೆದಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ಕಿಡಿಕಾರಿದರು.

ಜಿಲ್ಲೆಯಲ್ಲಿ ನಾಲಾ ಕಾಮಗಾರಿ ಶೇ 10ರಷ್ಟು ಮಾತ್ರ ನಡೆದಿದ್ದು, ಇದೇ ರೀತಿ ಮುಂದುವರಿದರೆ ಶಿರಾ, ಚಿಕ್ಕನಾಯಕನಹಳ್ಳಿ ಭಾಗಕ್ಕೆ ಭದ್ರ ನೀರು ಬರಲು 10 ವರ್ಷಗಳೇ ಬೇಕಾಗಬಹುದು. 160 ಕಿ.ಮೀ ನಾಲಾ ಕಾಮಗಾರಿಗೆ 2,420 ಎಕರೆ ಭೂಮಿ ಅಗತ್ಯವಿದ್ದು, 540 ಎಕರೆ
ಮಾತ್ರ ಭೂಸ್ವಾಧೀನವಾಗಿದೆ. ಉಳಿದ
ಭೂಸ್ವಾಧೀನಕ್ಕೆ ಈವರೆಗೂ ಅಧಿಸೂಚನೆ
ಹೊರಡಿಸಿಲ್ಲ. ಭೂಮಿ ವಶಪಡಿಸಿ
ಕೊಂಡು ಕೆಲಸ ಮುಗಿಸುವುದು ಯಾವಾಗ ಎಂದು ಪ್ರಶ್ನಿಸಿದರು.

ಕೃಷಾ ನ್ಯಾಯಮಂಡಳಿಯು ಬಿ ಸ್ಕೀಂನಲ್ಲಿ ನಿಗದಿಪಡಿಸಿರುವ 29.90 ಟಿಎಂಸಿ ನೀರನ್ನು ತುಂಗಾದಿಂದ ಭದ್ರಾಗೆ ತಂದು ಅಲ್ಲಿಂದ ವೇದಾವತಿ ನದಿ ಉಗಮ ಸ್ಥಾನ ಅಜ್ಜಂಪುರದ ಬಳಿ ಸಂಪರ್ಕ ಕಲ್ಪಿಸಬೇಕು. ಚಿತ್ರದುರ್ಗಕ್ಕೆ ಹೋಗುವ ಎಡದಂಡೆ ನಾಲೆ ಮತ್ತು ತುಮಕೂರಿಗೆ ಬರುವ ಬಲದಂಡೆ ನಾಲೆ ನಿರ್ಮಿಸುವ ಕಾಮಗಾರಿ ಕಳೆದ 12 ವರ್ಷಗಳಲ್ಲಿ ಶೇ 60ರಷ್ಟು ಕೆಲಸ ಪೂರ್ಣಗೊಂಡಿದೆ. ಜತೆಗೆ ಹೇಮಾವತಿ ನಾಲೆಯ 165 ಕಿ.ಮೀ.ನಲ್ಲಿ 10 ಕಿ.ಮೀ ಮಾತ್ರ ಕಾಮಗಾರಿ ನಡೆದಿದೆ. ತಕ್ಷಣ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಿ, ಕಾಮಗಾರಿ ಚುರುಕುಗೊಳಿಸುವಂತೆ ಒತ್ತಾಯಿಸಿದರು.

ಭದ್ರಾ ಮೇಲ್ದಂಡೆ ಯೋಜನೆಗಾಗಿ ಈವರೆಗೂ ₹4,500 ಕೋಟಿ ವೆಚ್ಚವಾಗಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಕಾಮಗಾರಿ ನಡೆದಿಲ್ಲ. ತುಮಕೂರು ನಾಲೆಗೆ ಈವರೆಗೆ 540 ಎಕರೆ ಭೂಮಿಗೆ ಮಾತ್ರ ಭೂ ಪರಿಹಾರ ನಿಗದಿಗೊಳಿಸಲಾಗಿದೆ. ಆದರೆ ಹೆಚ್ಚಿನ ಪರಿಹಾರಕ್ಕೆ ಒತ್ತಾಯಿಸಿ ಭೂ ಮಾಲೀಕರು ಭೂಮಿ ನೀಡುತ್ತಿಲ್ಲ. ಜಿಲ್ಲೆಗೆ 10 ಟಿಎಂಸಿ ನೀರು ನಿಗದಿಪಡಿಸಿದ್ದರೂ, ಕೇವಲ 4 ಟಿಎಂಸಿ ಹರಿಸಲು ಮುಂದಾಗಿದ್ದು, ಇದರಿಂದ ಯಾವುದೇ ಪ್ರಯೋಜನವಾಗದು. ಹಣ ಪೋಲಾಗಿದ್ದು ಬಿಟ್ಟರೆ ನೀರು ತರುವ ಪ್ರಯತ್ನ ನಡೆದಿಲ್ಲ ಎಂದು ಅಸಮಾಧಾನ ಹೊರಹಾಕಿದರು.

ಮೂಲ ಯೋಜನೆಯಂತೆ 29.90 ಟಿಎಂಸಿ ನೀರು ಹರಿಸಬೇಕು. ಇಲ್ಲದಿದ್ದರೆ ಮಧ್ಯಕರ್ನಾಟಕದ ಎಲ್ಲಾ ಜಿಲ್ಲೆಗಳ ಜನರೊಂದಿಗೆ ಬೀದಿಗಿಳಿದು ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು.

ನಾಲೆಯ ಬದಲಿಗೆ ಪೈಪ್‍ಲೈನ್ ಮೂಲಕ ನೀರು ಹರಿಸಲು ಮುಂದಾಗಿ
ರುವುದನ್ನು ಗಮನಿಸಿದರೆ ಯಾರ
ಉದ್ಧಾರಕ್ಕೆ ಎಂಬುದೇ ಅರ್ಥವಾಗು
ತ್ತಿಲ್ಲ. ಪೈಪ್‌ಲೈನ್‌ ಮೂಲಕ ನೀರು ಹರಿಸಿದರೆ ಯೋಜನೆಯ ಉದ್ದೇಶದಂತೆ 367 ಕೆರೆಗಳಿಗೆ ನೀರು ತುಂಬಿಸಲು ಸಾಧ್ಯವಾಗದು ಜಯಚಂದ್ರ ಹೇಳಿದರು.

ಮುಖಂಡರಾದ ಎಚ್.ಸಿ.ಹನುಮಂತಯ್ಯ, ಶಶಿ ಹುಲಿಕುಂಟೆ ಮಠ್, ಪವರ್ತಯ್ಯ, ಮಂಜುನಾಥ್, ನಟರಾಜು, ಸಂಜಯ್ ಜಯಚಂದ್ರ ಉಪಸ್ಥಿತರಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.