ಮಂಗಳವಾರ, ನವೆಂಬರ್ 19, 2019
23 °C
ಸಿದ್ಧಗಂಗಾ ಆಸ್ಪತ್ರೆ ಹಾಗೂ ಸಂಶೊಧನಾ ಕೇಂದ್ರದ ಶಿಕ್ಷಕ ಆರೋಗ್ಯ ಯೋಜನೆಗೆ ಚಾಲನೆ ನೀಡಿದ ಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್

ಮಕ್ಕಳ ಕೇಂದ್ರಿತ ಶಿಕ್ಷಣ ವ್ಯವಸ್ಥೆ ಜಾರಿ ಅವಶ್ಯ

Published:
Updated:
Prajavani

ತುಮಕೂರು: ’ಮಕ್ಕಳು ಇಲ್ಲದೇ ಇದ್ದರೆ ನಮ್ಮ ಶಿಕ್ಷಣ ಇಲಾಖೆಯೇ ಇಲ್ಲ. ಮಕ್ಕಳ ಕೇಂದ್ರಿತ ಶಿಕ್ಷಣ ವ್ಯವಸ್ಥೆ ಜಾರಿ ಅವಶ್ಯವಾಗಿದೆ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್‌ಕುಮಾರ್ ಹೇಳಿದರು.

ಗುರುವಾರ ನಗರದ ಸಿದ್ಧಗಂಗಾ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವು ಆಯೋಜಿಸಿದ್ಧ ಶಿಕ್ಷಕರ ದಿನಾಚರಣೆ , ಶಿಕ್ಷಕರಿಗೆ ಹೆಲ್ತ್ ಕಾರ್ಡ್ ವಿತರಣೆ, ಹಿರಿಯ ಹಾಗೂ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ, ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

’ಮಕ್ಕಳಿಗೆ ಇಷ್ಟವಾಗುವ ರೀತಿ ಶಿಕ್ಷಣ ನೀಡಬೇಕಾಗಿದೆ. ಶಾಲೆಗೆ ಶಿಕ್ಷಕ ಇಷ್ಟಪಟ್ಟು ಹೋಗುವಂತಹ ಶಿಕ್ಷಕ ಸ್ನೇಹಿ ವರ್ಗಾವಣೆ ನೀತಿ ಜಾರಿಯಾಗಬೇಕಾಗಿದೆ. ನಮ್ಮ ರಾಜ್ಯದ ಶಿಕ್ಷಕರ ಸಾಮರ್ಥ್ಯ ನನಗೆ ಗೊತ್ತಿದೆ. ಎಲ್ಲರೂ ವ್ಯವಸ್ಥೆ ಸುಧಾರಣೆಗೆ ಕೈ ಜೋಡಿಸಲಿದ್ದಾರೆ ಎಂಬ ವಿಶ್ವಾಸವಿದೆ’ ಎಂದು ಹೇಳಿದರು.

’ಮಕ್ಕಳು ತರಗತಿ ಒಳಗಡೆ ಕಲಿಯುವುದಕ್ಕಿಂತ ಹೊರಗಡೆ ಕಲಿಯುವುದೇ ಹೆಚ್ಚಾಗಿರುತ್ತದೆ. ಮಕ್ಕಳು ಇತರ ಮಕ್ಕಳೊಂದಿಗೆ ಬೆರೆತು, ಆಟವಾಡಿ ಬೆಳೆದಾಗಲೇ ಸರ್ವಾಂಗೀಣ ವ್ಯಕ್ತಿತ್ವ ರೂಪಗೊಳ್ಳುತ್ತದೆ. ಆದರೆ, ಪ್ರಸ್ತುತ ವಾತಾವರಣ ನೋಡಿದರೆ ವ್ಯತಿರಿಕ್ತವಾಗಿದೆ. ಇದನ್ನು ಬದಲಾವಣೆ ಮಾಡಲೇಬೇಕು’ ಎಂದು ನುಡಿದರು.

ಸಿದ್ಧಗಂಗಾಮಠದ ಅಧ್ಯಕ್ಷರಾದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ,‘ ಕರ್ನಾಟಕದಾದ್ಯಂತ ಎಲ್ಲ ಶಿಕ್ಷಕರಿಗೆ ಆರೋಗ್ಯ ತಪಾಸಣೆ, ಚಿಕಿತ್ಸೆ ಸೇರಿದಂತೆ ಆರೋಗ್ಯ ಸೇವೆ ಒದಗಿಸಲು  ಸಿದ್ಧಗಂಗಾ ಆಸ್ಪತ್ರೆ ಯೋಜನೆ ರೂಪಿಸಿರುವುದು ಪ್ರಶಂಸನೀಯ’ ಎಂದು ನುಡಿದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್,  ಸರ್ವೋದಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸೀತಾರಾಮ್ ವೇದಿಕೆಯಲ್ಲಿದ್ದರು.

ಸಿದ್ಧಗಂಗಾ ಆಸ್ಪತ್ರೆಯ ಅಧ್ಯಕ್ಷ ಡಾ.ಉಮಾಶಂಕರ್ ಸ್ವಾಗತಿಸಿದರು.  ವ್ಯವಸ್ಥಾಪಕ ನಿರ್ದೇಶಕರಾದ ಡಾ.ಪರಮೇಶ್ ಅವರು ಪ್ರಾಸ್ತಾವಿಕ ಮಾತನಾಡಿದರು. ಸಿದ್ಧಲಿಂಗಯ್ಯ ನಿರೂಪಿಸಿದರು.

 

ಪ್ರತಿಕ್ರಿಯಿಸಿ (+)