ಮಂಗಳವಾರ, ಜೂನ್ 22, 2021
22 °C
ಕಾಂಗ್ರೆಸ್ ಮುಖಂಡ ಟಿ.ಬಿ. ಜಯಚಂದ್ರ ಆರೋಪ

‘ಕೋವಿಡ್‌ ಸಾವಿಗೆ ನಿರ್ಲಕ್ಷ್ಯವೇ ಕಾರಣ’-ಟಿ.ಬಿ. ಜಯಚಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಾ: ತಾಲ್ಲೂಕಿನಲ್ಲಿ ಕೊರೊನಾ ಸೋಂಕಿನಿಂದ ಸುಮಾರು 300 ಮಂದಿ ಮೃತಪಟ್ಟಿದ್ದು, ಇದಕ್ಕೆ ಶಾಸಕರು, ಸಂಸದರು ಸೇರಿದಂತೆ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ಕಾಂಗ್ರೆಸ್ ಮುಖಂಡ ಟಿ.ಬಿ. ಜಯಚಂದ್ರ ಆರೋಪಿಸಿದರು.

ನಗರದ ಮಿನಿ ವಿಧಾನಸೌಧದ ಆವರಣದಲ್ಲಿ ಶುಕ್ರವಾರ ತಾಲ್ಲೂಕು ಆಡಳಿತಕ್ಕೆ ಎರಡು ಆಂಬುಲೆನ್ಸ್‌ ಹಾಗೂ ಆಮ್ಲಜನಕ ಸೇರಿದಂತೆ ಅಗತ್ಯ ವಸ್ತುಗಳ ಬಳಕೆಗೆ ಚೆಕ್ ಹಸ್ತಾಂತರಿಸಿ ಮಾತನಾಡಿದರು.

ಕೋವಿಡ್‌ನಿಂದ ಮೃತಪಟ್ಟವರಲ್ಲಿ ಬಡವರೇ ಹೆಚ್ಚಾಗಿದ್ದಾರೆ. ನಗರದ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆ ಇದೆ. ಆಸ್ಪತ್ರೆಗೆ ದಾಖಲಾಗಿದ್ದ ಗ್ರಾಮ ಪಂಚಾಯಿತಿ ಸದಸ್ಯ ತಿಪ್ಪೇಸ್ವಾಮಿ ಅವರ ಸಹೋದರ ‘ಆಮ್ಲಜನಕ ನೀಡುವಂತೆ ಯಾರನ್ನು ಕೇಳಿದರು ನೀಡುತ್ತಿಲ್ಲ ನನ್ನ ತಮ್ಮನನ್ನು ಉಳಿಸಿ’ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದಕೊಂಡ ಬೆಳಿಗ್ಗೆಯೇ ಮೃತಪಟ್ಟಿದ್ದಾರೆ. ಅವರ ಸಾವಿಗೆ ಆಮ್ಲಜನಕದ ಕೊರತೆಯೇ ಕಾರಣ. ಈವರೆಗೆ ಶಿರಾ ಆಸ್ಪತ್ರೆಯಲ್ಲಿ 125 ಜನ ಮೃತಪಟ್ಟಿದ್ದಾರೆ. ಬೇರೆ ಕಡೆ ಸುಮಾರು 175ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ನಾನು ಅಧಿಕಾರದಲ್ಲಿ ಇದ್ದ ಸಮಯದಲ್ಲಿ ತಾಯಿ ಮತ್ತು ಮಗು ಆಸ್ಪತ್ರೆ, ವಸತಿ ಶಾಲೆ ಹಾಗೂ ವಿದ್ಯಾರ್ಥಿ ನಿಲಯ ನಿರ್ಮಿಸದಿದ್ದರೆ ಇಂದು ಹಾದಿ ಬೀದಿಗಳಲ್ಲಿ ರೋಗಿಗಳು ಬಿದ್ದಿರಬೇಕಿತ್ತು. ಆದರೆ ತಾಲ್ಲೂಕು ಆಡಳಿತ ಇರುವ ಮೂಲ ಸೌಕರ್ಯವನ್ನು ಬಳಸಿಕೊಳ್ಳಲು ವಿಫಲವಾಗಿದೆ. 1,800 ಮಂದಿ ಹೋಂಕ್ವಾರೈಂಟೈನ್‌ನಲ್ಲಿ ಇರುವುದಾಗಿ ಹೇಳಲಾಗುತ್ತಿದೆ. ಕೇರ್ ಸೆಂಟರ್‌ನಲ್ಲಿ‌ ಕೇವಲ 200 ಜನ ಮಾತ್ರ ಇದ್ದಾರೆ. ಇಲ್ಲಿನ ಅವ್ಯವಸ್ಥೆಯಿಂದ ಜನ ಇಲ್ಲಿಗೆ ಬರಲು ಹೆದರುತ್ತಿದ್ದಾರೆ’ ಎಂದರು.

‘ಶಾಸಕರು ಪೋಸ್ ಕೊಟ್ಟುಕೊಂಡು ಓಡಾಡುವ ಬದಲು ಮುಖ್ಯಮಂತ್ರಿ ಮೇಲೆ ಒತ್ತಡ ತಂದು ಹೆಚ್ಚಿನ ಲಸಿಕೆಯನ್ನು ತಾಲ್ಲೂಕಿಗೆ ತರಬೇಕು’ ಎಂದು ಒತ್ತಾಯಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಅರ್.ಮಂಜುನಾಥ್, ಬರಗೂರು ನಟರಾಜ್, ಕಾನೂನು ಘಟಕದ ಅಧ್ಯಕ್ಷ ಎಚ್.ಗುರುಮೂರ್ತಿ, ಮುಖಂಡರಾದ ಸಂಜಯ್ ಜಯಚಂದ್ರ, ಗುಳಿಗೇನಹಳ್ಳಿ ನಾಗರಾಜ್, ಎಂ.ಆರ್.ಶಶಿಧರ್ ಗೌಡ, ಜಿ.ಎಸ್.ರವಿ, ಜಿ.ಎನ್.ಮೂರ್ತಿ, ಹುಣಸೇಹಳ್ಳಿ ಶಿವಕುಮಾರ್, ಅಜೇಯ್, ಡಿ.ವೈ.ಗೋಪಾಲ್, ಹಾರೋಗೆರೆ ಮಹೇಶ್, ಬರಗೂರು ಶ್ರೀನಿವಾಸ್, ಎಚ್.ಎಲ್.ರಂಗನಾಥ್, ದೇವರಾಜ್, ಸುಧಾಕರ್ ಗೌಡ, ಶೇಷಾನಾಯ್ಕ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು