ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಸಿದ್ದರಾಮಯ್ಯ ಅವರೇ ಮುಂದಿನ ಚುನಾವಣೆಯಲ್ಲಿ ನಿಮ್ಮ ಪಕ್ಷ ಗೆಲ್ಲಲು ಬಿಡುವುದಿಲ್ಲ'

ಆಗ್ನೇಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಚಾರ ಸಭೆಗೆ ಬಿ.ಎಸ್. ಯಡಿಯೂರಪ್ಪ ಚಾಲನೆ 
Last Updated 24 ಅಕ್ಟೋಬರ್ 2020, 11:55 IST
ಅಕ್ಷರ ಗಾತ್ರ

ತುಮಕೂರು: ಸಿದ್ದರಾಮಯ್ಯ ಅವರೇ ಮುಂದಿನ ಯಾವುದೇ ಚುನಾವಣೆಯಲ್ಲಿ ನಿಮ್ಮ ಪಕ್ಷ ಗೆಲ್ಲಲು ಬಿಡುವುದಿಲ್ಲ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿಯೂ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.

ಆಗ್ನೇಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಚಿದಾನಂದಗೌಡ ಅವರ ಚುನಾವಣಾ ಪ್ರಚಾರ ಸಭೆಗೆ ನಗರದಲ್ಲಿ ಚಾಲನೆ ನೀಡಿ, ಆರ್.ಆರ್.ನಗರದಲ್ಲಿ ಕನಿಷ್ಠ 50 ಸಾವಿರ ಅಂತರದಲ್ಲಿ ಗೆಲ್ಲುತ್ತೇವೆ. ಶಿರಾದಲ್ಲಿಯೂ ಗೆಲ್ಲುತ್ತೇವೆ. ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರ ಜನಪರ ಆಡಳಿತ ನೀಡುತ್ತಿವೆ. ಮುಂದಿನ ಲೋಕಸಭಾ ಚುನಾವಣೆಯಲ್ಲೂ ಮೋದಿ ಅವರೇ ನೇತೃತ್ವ ವಹಿಸಬೇಕು‌. ಗೆದ್ದು ಪ್ರಧಾನಿ ಆಗಬೇಕು ಎಂದು ಹೇಳಿದರು.

ತುಮಕೂರು ಜಿಲ್ಲೆಯಲ್ಲಿ ಮೊದಲ ಪ್ರಾಶಸ್ತ್ಯ ಮತಗಳನ್ನುಚಿದಾನಂದ ಗೌಡ ಅವರಿಗೆ ಕಾರ್ಯಕರ್ತರು ಕೊಡಿಸಬೇಕು. ಇನ್ನೂ ಮೂರು ದಿನ ಇದೆ ಮತದಾನಕ್ಕೆ. ಅಷ್ಟರಲ್ಲಿ ಮತ್ತಷ್ಟು ಮತಗಳನ್ನು ಗಟ್ಟಿ ಮಾಡಿಕೊಳ್ಳಬೇಕು. ಈ ಕ್ಷೇತ್ರದಲ್ಲಿ ನಾನೇ ಅಭ್ಯರ್ಥಿ. ನಾನು ಯಾವುದೇ ಚುನಾವಣಾ ಪ್ರಚಾರಕ್ಕೆ ಹೋಗುತ್ತಿಲ್ಲ. ಆದರೂ ಇಲ್ಲಿಗೆ ಬಂದಿದ್ದೇನೆ. ನಾನೇ ಅಭ್ಯರ್ಥಿ ಎಂದು ತಿಳಿಯಿರಿ. ಶಿಕ್ಷಕರ, ಪದವೀಧರರ ಯಾವುದೇ ಸಮಸ್ಯೆ ಪರಿಹಾರಕ್ಕೆ ಬದ್ದವಾಗಿದ್ದೇವೆ ಎಂದರು.

5 ಸಾವಿರ ಮೊರಾರ್ಜಿ ದೇಸಾಯಿ ಶಿಕ್ಷಕರನ್ನು ನೇಮಿಸಿದ್ದೇವೆ. ಜೆಒಪಿ ಶಿಕ್ಷಕರಿಗೆ ಅನುಕೂಲ ಮಾಡಿಕೊಟ್ಟಿದ್ದೇವೆ. ಕೊರೊನಾ ಸಮಯದಲ್ಲಿಯೂ ಸರ್ಕಾರಿ ನೌಕರರಿಗೆ ಪೂರ್ಣ ಸಂಬಳ ನೀಡಿದ್ದೇವೆ. ಸರ್ವ ಶಿಕ್ಷಣ ಅಭಿಯಾನ ಆರಂಭವಾಗಿದ್ದು ವಾಜಪೇಯಿ ಅವರ ಸರ್ಕಾರದಲ್ಲಿ. ಹೊಸ ಶಿಕ್ಷಣ ನೀತಿ ಜಾರಿ ಮಾಡುತ್ತಿದ್ದೇವೆ. ಕೊರೊನಾ, ಪ್ರವಾಹದ‌ಂತಹ ಸಂದರ್ಭದಲ್ಲಿಯೂ ಅಭಿವೃದ್ಧಿ ಕಾರ್ಯ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಮಾತನಾಡಿ, ದೇಶದಲ್ಲಿ ಕರ್ನಾಟಕ ಯಶಸ್ವಿ ಮಟ್ಟಕ್ಕೆ ಏರಬೇಕು ಎನ್ನುವ ಕನಸಿದೆ. ಮೋದಿ ಅವರಿಗೆ ಭಾರತ ವಿಶ್ವಮಟ್ಟದಲ್ಲಿ ಬೆಳಗಬೇಕು ಎನ್ನುವ ಆಸೆ ಇದೆ. ಯುವಕ ಯುವತಿಯರಿಗೆ ಶಿಕ್ಷಣ ಕೊಡಲು ಇಲ್ಲಿಯವರೆಗೆ ಸಾಧ್ಯವಾಗಿಲ್ಲ. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ದೇಶದ ಅಭ್ಯುದಯ ಸಾಧ್ಯ. ಈ ನೀತಿ ಅನುಷ್ಠಾನ ಆದರೆ ಯುವ ಸಮುದಾಯದ ಶೈಕ್ಷಣಿಕ ಮತ್ತು ಔದ್ಯೋಗಿಕ ಬೆಳವಣಿಗೆ ಸಾಧ್ಯ ಎಂದರು.

ರಾಜ್ಯದಲ್ಲಿ ಶಿಕ್ಷಣ ನೀತಿ ಸೂಕ್ತವಾಗಿ ಅನುಷ್ಠಾನ ಆಗಬೇಕು ಎಂದರೆ ವಿಧಾನ ಪರಿಷತ್‌ನಲ್ಲಿ ಶೈಕ್ಷಣಿಕ ಹಿನ್ನೆಲೆಯವರು ಆಯ್ಕೆ ಆಗಬೇಕು. ಆದ್ದರಿಂದ ಚಿದಾನಂದ ಅಂತಹವರು ಪರಿಷತ್‌ಗೆ ಆಯ್ಕೆ ಆಗಬೇಕು. ಎಂಟು ಬಾರಿ ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿದೆ. ಇದು ಮುಂದುವರಿಯಬೇಕು.ಶೈಕ್ಷಣಿಕ ಕ್ಷೇತ್ರ ಬಲಗೊಳ್ಳಬೇಕು‌. ಆ ಮೂಲಕ ನರೇಂದ್ರ ಮೋದಿ ಮತ್ತು ಯಡಿಯೂರಪ್ಪ ಅವರ ಕೈ ಬಲಪಡಿಸಬೇಕಾಗಿದೆ. ಆದ್ದರಿಂದ ಬಿಜೆಪಿ ಬೆಂಬಲಿಸಿ ಎಂದು ಕೋರಿದರು.

ಸಂಸದ ಜಿ.ಎಸ್. ಬಸವರಾಜು ಮಾತನಾಡಿ, ಈ ಪದವೀಧರ ಕ್ಷೇತ್ರದ ಚುನಾವಣೆ ಮಹತ್ವವಾದುದು‌. ಯಡಿಯೂರಪ್ಪ ಮತ್ತು ನರೇಂದ್ರ ಮೋದಿ ಅವರು ರಾಜ್ಯಕ್ಕೆ ಮತ್ತು ದೇಶಕ್ಕೆ ಕೊಟ್ಟ ಕೊಡುಗೆ ಅಪಾರ. ಇದೆಲ್ಲ ವಿದ್ಯಾವಂತರಾದ ನಿಮಗೆ ಗೊತ್ತು. ಚಿದಾನಂದ ಗೌಡರು ಗೆದ್ದರೆ ಬಿಜೆಪಿಗೆ ಮತ್ತೆ ಶಕ್ತಿ ಬರುತ್ತದೆ. ಶಿರಾ ಉಪಚುನಾವಣೆಯಲ್ಲಿಯೂ ರಾಜೇಶ್ ಗೌಡ ಅವರ ಪರವಾದ ವಾತಾವರಣ ಇದೆ ಎಂದರು.

ತಿಪಟೂರು ಶಾಸಕ ಬಿ.ಸಿ.ನಾಗೇಶ್ ಮಾತನಾಡಿ, ಎಸ್. ಮಲ್ಲಿಕಾರ್ಜುನಯ್ಯ ಅವರು ಈ ಕ್ಷೇತ್ರದಲ್ಲಿ ನಾಲ್ಕು ಬಾರಿ ಸತತವಾಗಿ ಗೆಲ್ಲುವ ಮೂಲಕ ಭದ್ರಬುನಾದಿ ಹಾಕಿದ್ದಾರೆ. ಆ ಗೆಲುವು ಮುಂದುವರಿಸಬೇಕು. ಪ್ರತಿಬೂತ್‌ಗೂ ಒಬ್ಬ ಕಾರ್ಯಕರ್ತನಿಗೆ ಜವಾಬ್ದಾರಿ ನೀಡಲಾಗಿದೆ. ಈಗಾಗಲೇ ಕಾರ್ಯಕರ್ತರು ಮತದಾರರ ಮನೆಗಳಿಗೆ ತೆರಳಿ ಮತಕೇಳಿದ್ದಿರಿ. ಅ.28 ರಂದು ಮತ್ತೆ ಅವರ ಮನೆಗಳಿಗೆ ತೆರಳಿ ಮತಗಟ್ಟೆಗೆ ಕರೆತರಬೇಕಾಗಿದೆ ಎಂದರು.

ಆಗ್ನೇಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಚಿದಾನಂದಗೌಡ ಮಾತನಾಡಿ, ಯಡಿಯೂರಪ್ಪ ಅವರ ಆಶೀರ್ವಾದದಿಂದ ನಾನು ಈ ಕ್ಷೇತ್ರದಲ್ಲಿ ಅಭ್ಯರ್ಥಿ ಆಗಿದ್ದೇನೆ. ಎರಡು ವರ್ಷದಿಂದ ಮತದಾರರ ಜತೆ ಒಡನಾಟ ಹೊಂದಿದ್ದೇನೆ. ನನಗೆ ಪಕ್ಷ ಈ ಅವಕಾಶ ಕೊಟ್ಟಿರುವುದಕ್ಕೆ ಋಣಿ. ಪದವೀಧರರು, ಶಿಕ್ಷಕರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT