ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇತಿಹಾಸದ ನಡಿಗೆಯಲ್ಲಿ ಪುರಾಣದ ಧರ್ಮಚಕ್ರ

Last Updated 31 ಜುಲೈ 2018, 12:00 IST
ಅಕ್ಷರ ಗಾತ್ರ

ಪ್ರಳಯದ ಬಗ್ಗೆ ಆನಂದ ಕುಮಾರಸ್ವಾಮಿ ಅವರು ಅಪೂರ್ವ ಲೇಖನವೊಂದನ್ನು ಬರೆದಿದ್ದಾರೆ. ಪ್ರಳಯ ಇಂದು ಮಾಧ್ಯಮಗಳಿಗೆ ವ್ಯಾಪಾರಕ್ಕೆ ಒದಗಿರುವ ಭಯಂಕರ ಸರಕು! ಆದರೆ ಪ್ರಳಯದ ಕಲ್ಪನೆಯಲ್ಲಿ ಪ್ರಕಟವಾಗಿರುವುದು ಪರಂಪರೆಯ ವಿನಯಪಾಠ. ಪ್ರಳಯದಲ್ಲಿ ಬರುವ ‘ನೌಕಾಯಾನ’ವು ಎರಡು ರೀತಿಯ ಪ್ರಯಾಣಕ್ರಮಗಳನ್ನು ಸೂಚಿಸುತ್ತದೆ. ಒಂದು: ದೇವಯಾನ; ಮತ್ತೊಂದು: ಪಿತೃಯಾನ. ಒಂದು ಕಾಲವನ್ನು ಒಪ್ಪಿ ನಡೆಯುವಂಥದ್ದು; ಮತ್ತೊಂದು ಕಾಲವನ್ನೇ ಮೀರಬೇಕೆಂದು ಒತ್ತಾಯಿಸುವುದು. ಪ್ರಳಯಕ್ಕೂ ಮನುವಿನ ಹುಟ್ಟಿಗೂ ನೇರ ನಂಟಿದೆ; ಪ್ರಳಯವೇ ಆಗದಿದ್ದರೆ ಮನ್ವಂತರಗಳೇ ಬದಲಾಗದು. ಅಷ್ಟೇ ಅಲ್ಲ, ಪ್ರಳಯದಲ್ಲಿ ಕೆಟ್ಟದ್ದು ಮಾತ್ರವೇ ಅಲ್ಲ, ಒಳ್ಳೆಯದ್ದೂ ಮರೆಯಾಗುತ್ತದೆ.

ವಾಲ್ಮೀಕಿಯು ರಾಮಾಯಣದ ಕಥೆಯ ಆರಂಭವನ್ನೇ ಅಂತ್ಯದೊಂದಿಗೂ ಜೋಡಿಸಿ ಹೇಳುತ್ತಿರುವುದರ ಉದ್ದೇಶವೇನು? ಜಗತ್ತಿನ ಹಲವು ವಂಶಗಳ, ರಾಜಮಹಾರಾಜರ ಇತಿಹಾಸವನ್ನು ಜಾಲಾಡಿದವರು ವಿಲ್‌ ಡ್ಯುರಂಟ್‌; ‘Man is a moment in astronomic time’ ಎಂಬುದು ಇತಿಹಾಸದಲ್ಲಿ ಅವರು ಕಂಡ ಯುಗರಹಸ್ಯ. ‘ಜ್ಯೋತಿರ್ವರ್ಷಗಳ ಎಣಿಕೆಯಲ್ಲಿ ಮಾನವನು ಒಂದು ಕ್ಷಣವಷ್ಟೆ.’ ಕಾಲದ ಈ ಪ್ರವಾಹ ನಮಗೆ ತಿಳಿಯದೆಹೋದರೆ ಆಗ ನಮ್ಮ ಅಹಂಕಾರಕ್ಕೆ ಅಂಕುಶವೇ ಇರದು; ಅದರಲ್ಲೂ ರಾಜನಿಗೂ ಪ್ರಭುತ್ವಕ್ಕೂ ಈ ಅರಿವು ಇರದಿದ್ದರೆ ಪ್ರಜೆಗಳ ಪಾಡು ನಿತ್ಯವೂ ಪ್ರಳಯಸದೃಶವೇ ಆಗುವುದು ದಿಟ! ಪ್ರಭುತ್ವವನ್ನೂ ಪದವಿಯನ್ನೂ ಕಾಲ ಹೇಗೆ ಕುಣಿಸುತ್ತದೆ ಎನ್ನುವುದನ್ನು ಈ ಸಂಸ್ಕೃತಪದ್ಯವೊಂದು ಸೊಗಸಾಗಿ ವರ್ಣಿಸಿದೆ:

ಆಸೀನ್ನಾಥ ಪಿತಾಮಹೀ ತವ ಮಹೀ ಜಾತಾ ತತೋsನಂತರಂ

ಮಾತಾ ಸಂಪ್ರತಿ ಸಾಂಬುರಾಶಿರಶನಾ ಜಾಯಾ ಕುಲೋದ್ಭೂತಯೇ |

ಪೂರ್ಣೇ ವರ್ಷಶತೇ ಭವಿಷ್ಯತಿ ಪುನಃ ಸೈವಾನವದ್ಯಾ ಸ್ನುಷಾ

ಯುಕ್ತಂ ನಾಮ ಸಮಗ್ರನೀತಿವಿದುಷಾಂ ಕಿಂ ಭೂಪತೀನಾಂ ಕುಲೇ ||

‘ಎಲೈ ರಾಜನೇ! ಸಮುದ್ರವನ್ನೇ ಒಡ್ಯಾಣವಾಗಿ ಅಲಂಕರಿಸಿಕೊಂಡಿರುವ ಈ ಭೂಮಿಯು ಮೊದಲು ನಿನ್ನ ಅಜ್ಜಿಯಾಗಿದ್ದಳು. ಆಮೇಲೆ ತಾಯಿ ಎನಿಸಿದಳು. ಈಗ ನಿನ್ನ ವಂಶೋದ್ಧಾರವನ್ನು ಮಾಡುವ ಮಡದಿಯಾಗಿದ್ದಾಳೆ. ನಿನಗೆ ನೂರು ವರ್ಷಗಳು ತುಂಬಿದಮೇಲೆ ಅವಳೇ ನಿನಗೆ ಸೊಸೆಯೂ ಆಗುತ್ತಾಳೆ. ಎಲ್ಲ ನೀತಿಗಳನ್ನು ತಿಳಿದ ನಿನ್ನಂಥ ಭೂಪತಿಯ ಮನೆಯಲ್ಲಿ ಇದು ಯೋಗ್ಯವೇ?’

ರಾಜನಿಗೆ ‘ಭೂಪತಿ’ ಎಂಬ ಹೆಸರಿದೆಯಷ್ಟೆ; ಭೂಮಿಯ ಒಡೆಯ, ಭೂಮಿಯನ್ನು ವರಿಸಿದವನು ಎಂದು ಅರ್ಥ. ಆದರೆ ರಾಜತ್ವವು ನೀಡುವ ‘ಪತಿ’ಪಟ್ಟದ ಮೌಲ್ಯವನ್ನೇ ಈ ಪದ್ಯ ಲೇವಡಿ ಮಾಡುತ್ತಿದೆ. ಇಲ್ಲಿಯ ವಿವರಗಳು ನಮ್ಮ ಕಾಲದ ಪ್ರಭುತ್ವಗಳಿಗೂ ಪದವಿಗಳಿಗೂ ಸಲ್ಲುತ್ತವೆಯೆನ್ನಿ!

‘ರಘುವಂಶ’ವನ್ನೇ ಕುರಿತು ಹೇಳಲು ಹೊರಟವನು ಕಾಳಿದಾಸ. ‘ವೇದಗಳಿಗೆ ಮೂಲವೇ ಓಂಕಾರ. ಅಂತೆಯೇ ವೈವಸ್ವತಮನು ಈ ಭೂಮಂಡಲದ ಮೊದಲ ರಾಜ; ಅವನಿಂದಲೇ ಆರಂಭವಾದದ್ದು ಇಕ್ಷ್ವಾಕುವಂಶ; ಅದೇ ಸೂರ್ಯವಂಶ’ ಎನ್ನುತ್ತ, ಈ ವಂಶದ ವರ್ಣನೆಯನ್ನು ಮಾಡಲು ನನಗೆ ಅರ್ಹತೆ ಸಾಲದು ಎಂದು ವಿನಯದಿಂದ ಘೋಷಿಸಿಕೊಂಡಿದ್ದಾನೆ, ಕಾಳಿದಾಸ:

ಕ್ವ ಸೂರ್ಯಪ್ರಭವೋ ವಂಶಃ ಕ್ವ ಚಾಲ್ಪವಿಷಯಾ ಮತಿಃ |

ತಿತೀರ್ಷುರ್ದುಸ್ತರಂ ಮೋಹಾದುಡುಪೇನಾಸ್ಮಿ ಸಾಗರಮ್‌ ||

‘ಎಲ್ಲಿಯ ಸೂರ್ಯವಂಶ? ಎಲ್ಲಿಯ ನನ್ನ ಅಲ್ಪವಿಷಯದ ಬುದ್ಧಿ? ಮಹಾಸಾಗರವನ್ನು ತೆಪ್ಪದಿಂದ ದಾಟಲು ಹವಣಿಸುವವನಂತೆ ನಾನು ಈ ವಂಶವನ್ನು ವರ್ಣಿಸಲು ತೊಡಗಿದ್ದೇನೆ!’

ಆದರೆ ಅಂಥ ಸೂರ್ಯವಂಶವೂ ಕೂಡ ‘ಪ್ರಳಯ’ಕ್ಕೆ ಒಳಗಾಗಲೇಬೇಕು ಎನ್ನುವುದನ್ನು ಅವನು ಹೇಳದೆಬಿಡುವುದಿಲ್ಲ; ರಾಜ ಅಗ್ನಿವರ್ಣನಲ್ಲಿ ಅದನ್ನು ತೋರಿಸುತ್ತಾನೆ. ಎಲ್ಲವನ್ನೂ ಕೆಡಿಸಬಲ್ಲ ಮತ್ತು ಕೆಡವಬಲ್ಲ ಗುಣ ಕಾಲಕ್ಕೆ ಇದೆ ಎನ್ನುವುದನ್ನು ಅವನು ಸೂಚಿಸುತ್ತಾನೆ. ‘ಈಗ ಧರ್ಮಾತ್ಮರು ಯಾರಿದ್ದಾರೆ?’ ಎಂಬ ಯಾವ ಪ್ರಶ್ನೆ ರಾಮಾಯಣದ ಹುಟ್ಟಿಗೆ ಕಾರಣವಾಯಿತೋ ಅದು ಎಲ್ಲ ಕಾಲದ ಪ್ರಶ್ನೆಯೂ ಹೌದು ಎನ್ನುವುದನ್ನೂ ಅವನು ನೆನಪಿಸುತ್ತಾನೆ. ‘ಯಾವ ವಂಶದ ಬಗ್ಗೆ ಮಾತನಾಡಲು ನನಗೆ ಸಿದ್ಧಿ ಸಾಲದು’ ಎಂದು ಹಿಂಜರಿದಿದ್ದನೋ ಅಂಥವನೇ ಆ ವಂಶದ ರಾಜನ ಅಧಃಪತನವನ್ನೂ ವಿವರಿಸುತ್ತಾನೆ. ಪ್ರಳಯ ಎನ್ನುವುದು ಹೇಗೆ ನಿತ್ಯದ ವಿದ್ಯಮಾನ ಎಂದೂ ಆ ಮೂಲಕ ಧ್ವನಿಸುತ್ತಾನೆ. (ಪ್ರಳಯದಲ್ಲಿ ಬೇರೆ ಬೇರೆ ಪ್ರಭೇದಗಳಿವೆ.) ಆದರೆ ಅದರ ಜೊತೆಯಲ್ಲಿಯೇ ಹೊಸಹುಟ್ಟಿನ ಬಗ್ಗೆಯೂ ಭರವಸೆ ಕೊಡುತ್ತಾನೆ. ಹೀಗೆ ಕಾಲದ ಓಟಕ್ಕೆ ಸಿಕ್ಕು ತಿರುಗುವ ಧರ್ಮಚಕ್ರದ ವರ್ಣನೆಯನ್ನೇ ಭಾರತೀಯ ‘ಇತಿಹಾಸ’ದ ಪರಿಕಲ್ಪನೆ ಎನ್ನಬಹುದೇನೋ! ಈ ಚಕ್ರಗತಿದೃಷ್ಟಿಯ ವಿಶೇಷತೆಯನ್ನು ಕುರಿತು ರಾಮಮನೋಹರ ಲೋಹಿಯಾ ಅವರ ಮಾತುಗಳು ಇಲ್ಲಿ ಮನನೀಯ: ‘ಈ ದೃಷ್ಟಿಯ ಸಾರಭೂತವಾದ ಗುಣ ಇರುವುದು ಕಾಲದಲ್ಲಿ ನಡೆಯುವ ಒಳ್ಳೆಯ ಮತ್ತು ಕೆಟ್ಟ ಎಲ್ಲ ಘಟನೆಗಳೂ ಕ್ಷಣಿಕ ಎಂದು ಗುರುತಿಸುವುದರಲ್ಲಿ. ಕೆಟ್ಟದ್ದು ಕೂಡ ಸ್ಥಾಯಿ ಅಲ್ಲ; ಒಂದು ಜನಾಂಗ ತನ್ನ ಸತ್ವವನ್ನೆಲ್ಲ ಬಳಸಿಕೊಂಡು ಅವನತಿ ಹೊಂದುವುದು ಎಷ್ಟು ನಿಜವೋ ಅದು ಮತ್ತೆ ಎದ್ದೇಳುವುದೂ ಅಷ್ಟೇ ನಿಜ.’ (ಅನುವಾದ: ಎಂ. ಗೋಪಾಲಕೃಷ್ಣ ಅಡಿಗ) ‘ಉದಾಹರಣೆಗಳ ಮೂಲಕ ತತ್ತ್ವಶಾಸ್ತ್ರವನ್ನು ಕಲಿಸುವುದನ್ನೇ ಇತಿಹಾಸ ಎನ್ನುವುದು’ (History is philosophy teaching by examples) - ಎಂದ ಪ್ರಾಚೀನ ಗ್ರೀಕ್‌ ಇತಿಹಾಸಜ್ಞ ಥೂಸಿಡಿಡಿಸ್‌ನ ಮಾತು ರಾಮಾಯಣ–ಮಹಾಭಾರತಗಳಿಗೆ ಒಪ್ಪುವಂಥದ್ದೇ ಹೌದು.

ಚಕ್ರೀಯಗತಿಯ ಸಂಕೀರ್ಣತೆಗೆ ಉದಾಹರಣೆಯಾಗಿ ಭಗವದ್ಗೀತೆಯ ಈ ಶ್ಲೋಕವನ್ನು ನೋಡಬಹುದು:

ಇಮಂ ವಿವಸ್ವತೇ ಯೋಗಂ ಪ್ರೋಕ್ತವಾನಹಮವ್ಯಯಮ್ |

ವಿವಸ್ವಾನ್ ಮನವೇ ಪ್ರಾಹ ಮನುರಿಕ್ಷ್ವಾಕವೇsಬ್ರವೀತ್ ||

‘ಈ ಅವ್ಯಯವಾದ ಯೋಗವನ್ನು ನಾನು ವಿವಸ್ವಂತನಿಗೆ ಹೇಳಿದೆ; ಅವನು ಮನುವಿಗೆ ಹೇಳಿದನು. ಮನುವು ಇಕ್ಷ್ವಾಕುವಿಗೆ ಹೇಳಿದ’.

ಈ ಮಾತನ್ನು ಕೃಷ್ಣನು ಅರ್ಜುನನಿಗೆ ಹೇಳುವುದು. ಇಲ್ಲಿ ಸೂರ್ಯ–ಮನು–ಇಕ್ಷ್ವಾಕು – ಈ ರೇಖಾತ್ಮಕ ಸಂಬಂಧವನ್ನು ಅರ್ಥ ಮಾಡಿಕೊಳ್ಳಲಾದೀತು. ಆದರೆ ಸೂರ್ಯನಿಗೆ ಕೃಷ್ಣ ಮೊದಲು ಗೀತೆಯನ್ನು ಉಪದೇಶಿಸಿದ ಎಂಬುದನ್ನು ಅರ್ಥೈಸಿಕೊಳ್ಳಲು ತೊಡಕು ಎದುರಾಗುತ್ತದೆ. ಏಕೆಂದರೆ ಸೃಷ್ಟಿಯ ಮೊದಲ ಯುಗ ಕೃತಯುಗ; ಆ ಯುಗಕ್ಕೆ ಸೇರಿದವನು ವಿವಸ್ವಂತ (= ಸೂರ್ಯ). ಆದರೆ ಕೃಷ್ಣನ ಕಾಲ ಮೂರನೆಯ ಯುಗವಾದ ದ್ವಾಪರಯುಗ. ಮೂರನೆಯ ಯುಗದಲ್ಲಿರುವವನು ಮೊದಲನೆಯ ಯುಗದವನಿಗೆ ಹೇಳಲು ಹೇಗಾದೀತು? ಆದುದರಿಂದಲೇ ಭಾರತೀಯ ಇತಿಹಾಸ–ಪುರಾಣಗಳನ್ನು ಅರ್ಥೈಸಿಕೊಳ್ಳಲು ಅಭಿಜಾತ ಮಾನಸಿಕತೆ ಬೇಕು ಎನ್ನುವುದು.

ನಮ್ಮ ಮೂಲವನ್ನು ನೆನಪಿಸುವುದರ ಉದ್ದೇಶ ಸ್ವಸ್ಥಾನಪರಿಜ್ಞಾನದ ಬಗ್ಗೆ ನಮ್ಮನ್ನು ಎಚ್ಚರಿಸಲಷ್ಟೆ ಅಲ್ಲ; ನಾವೂ ನಮ್ಮ ಸಾಧನೆಯೂ ಬ್ರಹ್ಮಾಂಡದ ಎದುರಿನಲ್ಲಿ ಒಂದು ಬಿಂದುವಿನಲ್ಲಿರುವ ಬಿಂದುವೇನೋ ಹೌದು. ಅದರೆ ಈ ಅಣುತ್ವದ ಜೊತೆಗೆ ನಮ್ಮ ಮಹೋನ್ನತಿಯ ಜ್ಞಾಪಕಕ್ಕೂ ಇದು ಸಹಕಾರಿಯೇ. ಸೃಷ್ಟಿಯ ಆದಿಪುರುಷನಾದ ಮನುವಿಗೆ ಸಮನಾದ ಚಕ್ರವರ್ತಿ ಈ ದಶರಥ; ಅವನ ಪರಂಪರೆಗೆ ಸೇರಿದವನು ಇವನು ಎಂಬಂಥ ಸಂಬಂಧಸೂತ್ರವನ್ನೂ ಈ ಮಾತು ಒದಗಿಸುತ್ತದೆ ಎಂಬುದೂ ಸತ್ಯ.

‘ಮಿಥ್‌’ಗಳ ಉದ್ದೇಶಗಳಲ್ಲಿ ಇದೂ ಒಂದು – ಅಲೌಕಿಕವನ್ನೂ ಲೌಕಿಕವನ್ನೂ ಬೆಸೆಯುವುದು; ಕಾಲವನ್ನೂ ಕಾಲಾತೀತವಾದುದನ್ನೂ ಒಂದಾಗಿಸುವುದು; ರಾಜತ್ವವನ್ನೂ ದೈವತ್ವವನ್ನೂ ಸಮೀಕರಿಸುವುದು; ಈ ಲೋಕವನ್ನೂ ಆ ಲೋಕವನ್ನೂ ಕೂಡಿಸುವುದು. ‘ಕುಮಾರವ್ಯಾಸಭಾರತ’ದ ಆರಂಭದ ಪದ್ಯವನ್ನು ಇಲ್ಲಿ ನೋಡಬಹುದಾಗಿದೆ:

ಶ್ರೀವನಿತೆಯರಸನೆ ವಿಮಲ ರಾ

ಜೀವಪೀಠನ ಪಿತನೆ ಜಗಕತಿ

ಪಾವನನೆ ಸನಕಾದಿ ಸಜ್ಜನನಿಕರ ದಾತಾರ |

ರಾವಣಾಸುರಮಥನ ಶ್ರವಣ ಸು

ಧಾ ವಿನೂತನ ಕಥನಕಾರಣ ಕಾವುದಾನತ ಜನವ ಗದುಗಿನ ವೀರನಾರಯಣ ||

‘ಅವನು ಶ್ರೀಲಕ್ಷ್ಮಿಗೇ ಒಡೆಯ. ಅವನೇ ಜಗತ್ತಿಗೆ ಮೂಲ. ಅವನಷ್ಟು ಪರಮಪಾವನನಾದವನು ಯಾರೂ ಇಲ್ಲ. ಎಲ್ಲರನ್ನೂ ಕಾಪಾಡಬಲ್ಲವನೇ ಅವನು. ಅಂಥ ಮಹಾಮಹಿಮ ಯಾರು ಎಂದರೆ, ಅವನೇ ನನ್ನೂರಿನಲ್ಲಿ ನೆಲೆ ನಿಂತ ‘ಗದುಗಿನ ವೀರನಾರಾಯಣ’! ‘ನಮ್ಮ ಹಳ್ಳಿಯ ಗುಡಿಯಲ್ಲಿರುವ ನಾರಾಯಣನ ವಿಗ್ರಹ ಬೇರೆ ಅಲ್ಲ, ಸೃಷ್ಟಿಗೇ ಮೂಲಪುರುಷನಾದ ಶ್ರೀಮಹಾವಿಷ್ಣು ಬೇರೆ ಅಲ್ಲ – ಎಂಬ ಅರಿವಿನ ವಿಸ್ತರಣವನ್ನೇ ಮಿಥ್‌ಗಳು ನಮ್ಮಿಂದ ನಿರೀಕ್ಷಿಸುವ ಮರುಹುಟ್ಟು. ‘ನಾನು ಇಂಥ ವಂಶಕ್ಕೆ ಸೇರಿದವನು’, ‘ನಾನು ಇಂಥ ರಾಜ್ಯಕ್ಕೆ ಸೇರಿದವನು’ ಎಂಬಂಥ ಸ್ವಕೇಂದ್ರಿತ ಸ್ತರದಿಂದ ‘ನಾನು ಇಡಿಯ ಸೃಷ್ಟಿಗೆ ಸೇರಿದವನು’ ಎಂಬ ವಿಶ್ವಕೇಂದ್ರಿತ ಸ್ತರಕ್ಕೆ ನಾವು ಜಿಗಿಯುವಂತೆ ನಮ್ಮ ಭಾವ–ಬುದ್ಧಿಗಳನ್ನು ರಾಮಾಯಣದಂಥ ಮಿಥ್‌ಗಳು ಸಿದ್ಧಗೊಳಿಸುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT