ಬುಧವಾರ, ಸೆಪ್ಟೆಂಬರ್ 18, 2019
25 °C
ತುಮಕೂರು ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ನಿರ್ಣಯ, ಬಹಳ ದಿನಗಳ ಸದಸ್ಯರ ಒತ್ತಾಯಕ್ಕೆ ಮಣಿದ ಸಭೆ

ಅನಧಿಕೃತ ಆಸ್ತಿ ಖಾತಾ ನಕಲಿಗೆ ಎನ್‌ಒಸಿ ಬೇಡ

Published:
Updated:
Prajavani

ತುಮಕೂರು: ಅಧಿಕೃತ, ಅನಧಿಕೃತ ಆಸ್ತಿಗಳಿಗೆ ನಮೂನೆ– 3ರಡಿ ಖಾತಾ ನಕಲು ನೀಡಲು, ವಿದ್ಯುತ್ ಸಂಪರ್ಕಕ್ಕೆ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ಅಗತ್ಯವಿಲ್ಲ ಎಂಬ ನಿರ್ಣಯವನ್ನು ಬುಧವಾರ ನಡೆದ ಮಹಾನಗರ ಪಾಲಿಕೆ ಸಾಮಾನ್ಯ ಸಭೆ  ಕೈಗೊಂಡಿತು.

ಅನಧಿಕೃತ ಕಟ್ಟಡದ ಮೇಲೆ ದುಪ್ಪಟ್ಟು ತೆರಿಗೆ ವಿಧಿಸುತ್ತಿರುವುದು, ಖಾತಾ ನಕಲಿಗೆ ಸಂಬಂಧಿಸಿದ ನಮೂನೆ –3, ವಿದ್ಯುತ್ ಸಂಪರ್ಕಕ್ಕೆ ನಮೂನೆ –2 ನೀಡದೆ ಸಾರ್ವಜನಿಕರಿಗೆ ತೊಂದರೆ ಆಗುತ್ತಿರುವ ಕುರಿತು ಸಾರ್ವಜನಿಕ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ಸ್ಥಾಯಿ ಸಮಿತಿ ಸದಸ್ಯ ಸೈಯದ್ ನಯಾಜ್ ಅವರು ವಿಷಯ ಪ್ರಸ್ತಾಪಿಸಿದರು.

ಇದಕ್ಕೆ ಸದಸ್ಯರೆಲ್ಲರೂ ದನಿಗೂಡಿಸಿದರು. ಜನಸ್ನೇಹಿಯಾದ ಕ್ರಮವನ್ನು ಸಭೆ ಕೈಗೊಳ್ಳದೇ ಇದ್ದರೆ ಸಭೆ ಬಹಿಷ್ಕರಿಸಿ ಧರಣಿ ನಡೆಸುವುದಾಗಿ ಮೇಯರ್ ಲಲಿತಾ ರವೀಶ್ ಅವರ ಗಮನ ಸೆಳೆದರು.

ದುಪ್ಪಟ್ಟು ತೆರಿಗೆ ವಸೂಲಿ ಮಾಡುವುದರಿಂದ ಬಡಜನರಿಗೆ ತೊಂದರೆಯಾಗುತ್ತದೆ. ಈ ನಿಯಮ ಕೈಬಿಡಿ ಎಂದು ಹಿಂದಿನ ತುರ್ತು ಸಭೆಯಲ್ಲೇ ನಿರ್ಣಯ ತೆಗೆದುಕೊಂಡಿದ್ದರೂ ಕ್ರಮಕೈಗೊಂಡಿಲ್ಲ. ಅಧಿಕಾರಿಗಳು ಬೇಜವಾಬ್ದಾರಿ ವಹಿಸಿದ್ದಾರೆ. ಕೂಡಲೇ ಅದನ್ನು ಸರಿಪಡಿಸಬೇಕು. ಅಧಿಕಾರಿಗಳು ಸಭೆಯಲ್ಲೇ ಇದಕ್ಕೆ ಸ್ಪಷ್ಟ ಉತ್ತರ ನೀಡಬೇಕು ಎಂದು ಸದಸ್ಯರು ಒತ್ತಾಯ ಮಾಡಿದರು.

ಉಪ ಆಯುಕ್ತ ಯೋಗಾನಂದ್ ಮಾತನಾಡಿ, ‘ಮಹಾನಗರ ಪಾಲಿಕೆ ವ್ಯಾಪ್ತಿಯ ಆಸ್ತಿ ಖಾತೆಗೆ ಸಂಬಂಧಿಸಿದಂತೆ ಪಾಲಿಕೆಯು ಇ ಆಸ್ತಿ (ಇ– ಸ್ವತ್ತು) ನಿಯಮಾವಳಿಗೆ ಒಳಪಡುತ್ತದೆ. ಸರ್ಕಾರವು ಹೊಸದಾಗಿ 2019 ಆ. 8ರಂದು ಜಾರಿಗೊಳಿಸಿರುವ ಸುತ್ತೋಲೆ ಪ್ರಕಾರ ಅಧಿಕೃತ, ಅನಧಿಕೃತ ಸ್ವತ್ತುಗಳಿಗೆ ನಮೂನೆ–3( ಖಾತಾ ನಕಲಿಗೆ ಸಂಬಂಧಿಸಿದ್ದು) ನೀಡಲಾಗುವುದು. ವಿದ್ಯುತ್‌ ಸಂಪರ್ಕಕ್ಕೆ ನಿರಪೇಕ್ಷಣ ಪತ್ರ(ಎನ್‌ಓಸಿ) ಅಗತ್ಯವಿಲ್ಲ’ ಎಂದು ಹೇಳಿದರು.

‘ಆಸ್ತಿಯ ಮಾಲೀಕರು ತಮ್ಮ ಸ್ವತ್ತಿನ ಖಾತಾ ನಕಲು ಹಾಗೂ ತೆರಿಗೆ ರಸೀದಿಯನ್ನು ನೇರವಾಗಿ ಬೆಸ್ಕಾಂಗೆ ಸಲ್ಲಿಸಿದಲ್ಲಿ ವಿದ್ಯುತ್ ಸಂಪರ್ಕ ಪಡೆಯಲು ಅವಕಾಶವಿದೆ’ ಎಂದು ಯೋಗಾನಂದ್ ಹೇಳಿದರು.

ಇದಕ್ಕೆ ಬೆಸ್ಕಾಂ ಅಧಿಕಾರಿಗಳಾದ ಶ್ರೀನಿವಾಸ್, ಧನ್ಯಕುಮಾರ್ ಅವರು ಪ್ರತಿಕ್ರಿಯಿಸಿ ನಮೂನೆ–3 ಇದ್ದರೆ ವಿದ್ಯುತ್ ಸಂಪರ್ಕ ಕಲ್ಪಿಸುತ್ತೇವೆ ಎಂದು ಹೇಳಿದಾಗ ಸದಸ್ಯರಲ್ಲಿದ್ದ ಗೊಂದಲ ದೂರವಾಗಿ ಸಭೆ ನಿರ್ಣಯ ಕೈಗೊಂಡಿತು.

ದುಪ್ಪಟ್ಟು ತೆರಿಗೆ ಪ್ರತ್ಯೇಕ: ಅನಧಿಕೃತ ಕಟ್ಟಡಗಳ ಮೇಲೆ ದುಪ್ಪಟ್ಟು ತೆರಿಗೆ ವಿಚಾರ ಅದೊಂದು ಪ್ರತ್ಯೇಕ. ಅದಕ್ಕೂ, ನಮೂನೆ–3 ನೀಡುವುದಕ್ಕೂ ಸಂಬಂಧವಿಲ್ಲ. ಇ ಆಸ್ತಿ ನಿಯಮಾವಳಿ ಪ್ರಕಾರ ದುಪ್ಪಟ್ಟು ತೆರಿಗೆಗೆ ಸಂಬಂಧಿಸಿದಂತೆ ಪಾಲಿಕೆ ಏನೂ ತೀರ್ಮಾನ ಮಾಡಲು ಅವಕಾಶವಿಲ್ಲ. ಸರ್ಕಾರಕ್ಕೆ ಪತ್ರ ಬರೆದು ಮನವರಿಕೆ ಮಾಡಿಕೊಡಬಹುದು ಎಂಬ ಸಲಹೆಯನ್ನು ಉಪ ಆಯುಕ್ತ ಯೋಗಾನಂದ್ ನೀಡಿದರು.

ಮೇಯರ್ ಲಲಿತಾ ರವೀಶ್ ಮಾತನಾಡಿ,‘ ಸದಸ್ಯರು ಪಾಲಿಕೆಗೆ ತರುವ ಜನರ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ ಮೇಲೆ ಅಧಿಕಾರಿಗಳು ಸ್ಪಂದಿಸಬೇಕು. ಬಡವರು, ಜನಸಾಮಾನ್ಯರಿಗೆ ಅನುಕೂಲವಾಗದೇ ಇದ್ದರೆ ಪಾಲಿಕೆಯದ್ದೇ ಆಗಲಿ, ಸ್ಮಾರ್ಟ್ ಸಿಟಿ ಯೋಜನೆಯೇ ಆಗಲಿ. ಏನೂ ಉಪಯೋಗವಿಲ್ಲ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸದಸ್ಯೆ ನಳಿನಾ ಇಂದ್ರಕುಮಾರ್, ಕುಮಾರ್, ಮನು, ಮಂಜುನಾಥ್, ಮಲ್ಲಿಕಾರ್ಜುನ್, ಫರೀದಾ ಬೇಗಂ, ವಿಷ್ಣು, ಧರಣೀಶ್, ಇನಾಯತ್ ಸೇರಿದಂತೆ ಹಲವು ಸದಸ್ಯರು ಅಧಿಕಾರಿಗಳು, ಸಿಬ್ಬಂದಿ ಜನಸ್ನೇಹಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ದೂರಿದರು.

ನಿಯಮಬದ್ಧವಾಗಿ ಮಾಡಿಕೊಡಬೇಕಾದ ಕೆಲಸಗಳನ್ನು ವಾರ್ಡ್‌ ಸದಸ್ಯರು ಹೇಳಿದರೂ ಅಧಿಕಾರಿಗಳು ಮಾಡಿಕೊಡುತ್ತಿಲ್ಲ. ಬೇರೆ ಏಜೆಂಟರ ಮೂಲಕ ಸಂಪರ್ಕಿಸಿದರೆ, ಹಣ ಕೊಟ್ಟರೆ ಎರಡೇ ದಿನಕ್ಕೆ ಕೆಲಸ ಮಾಡಿಕೊಡಲಾಗುತ್ತಿದೆ. ವಿಶೇಷವಾಗಿ ವಿದ್ಯುತ್ ಸಂಪರ್ಕಕ್ಕೆ ನಿರಾಕ್ಷೇಪಣ ಪತ್ರ ನೀಡಲು, ಖಾತಾ ವರ್ಗಾವಣೆ ವಿಷಯದಲ್ಲಿ ಅತಿರೇಕವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಉಪ ಆಯುಕ್ತ ಯೋಗಾನಂದ ಮಾತನಾಡಿ, ‘ಖಾತಾ ವರ್ಗಾವಣೆಯಾಗಲಿ, ಬೇರೆ ಯಾವುದೇ ಕೆಲಸವಾದರೂ ನಿರ್ದಿಷ್ಟ ಸಮಯಾವಕಾಶ ನಿಗದಿಪಡಿಸಲಾಗಿದೆ. ಅದರೊಳಗೆ ಕೆಲಸ ಮಾಡಿಕೊಡಲು ಸಾಧ್ಯವಿಲ್ಲ’ ಎಂದು ಹೇಳಿದರು.

ಸಹಾಯಕ ಕಂದಾಯ ಅಧಿಕಾರಿ ನೀಲಲೋಚನ ಪ್ರಭು ಮಾತನಾಡಿ, ‘ಖಾತೆ ವರ್ಗಾವಣೆ ಸದಸ್ಯರು ಹೇಳುವ ಪ್ರಕಾರ 30 ದಿನಗಳಲ್ಲ. ಅದಕ್ಕೆ ಸರ್ಕಾರ 45 ದಿನ ಸಮಯ ನಿಗದಿಪಡಿಸಿದೆ’ ಎಂದಾಗ ಸದಸ್ಯರೆಲ್ಲ ದಿಗಿಲುಗೊಂಡರು. ಅಧಿಕಾರಿಗಳೇ ದಾಖಲೆಗಳಲ್ಲಿ ಲೋಪ ಮಾಡಿ ವಿನಾಕಾರಣ ಸಾರ್ವಜನಿಕರನ್ನು ಕಚೇರಿಗೆ ಅಲೆದಾಡಿಸುತ್ತಾರೆ. ಇದಕ್ಕೇ ಏನು ಪರಿಹಾರ ಎಂದು ಪ್ರಶ್ನಿಸಿದರು.

ಆಯುಕ್ತ ಟಿ.ಭೂಬಾಲನ್ ಮಧ್ಯಪ್ರವೇಶಿಸಿ ಆದಷ್ಟು ಬೇಗ ಕೆಲಸಗಳನ್ನು ಮಾಡಿಕೊಡಬೇಕು. ವಿನಾಕಾರಣ ಸಾರ್ವಜನಿಕರನ್ನು ಕಚೇರಿಗೆ ಅಲೆದಾಡಿಸಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಉಪ ಮೇಯರ್ ಬಿ.ಎಸ್.ರೂಪಶ್ರೀ, ತೆರಿಗೆ ನಿರ್ಧರಣೆ ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮಿನರಸಿಂಹರಾಜು, ಪಟ್ಟಣ ಯೋಜನೆ ಮತ್ತು ಸುಧಾರಣೆ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ಎಸ್.ಮಂಜುಳಾ, ಲೆಕ್ಕಪತ್ರ ಸ್ಥಾಯಿ ಸಮಿತಿ ಅಧ್ಯಕ್ಷೆ ವಿ.ಎಸ್.ಗಿರಿಜಾ, ಸದಸ್ಯರು, ಪಾಲಿಕೆ ಅಧಿಕಾರಿಗಳಿದ್ದರು.

Post Comments (+)