ತುಮಕೂರು: ಮನೆಯಲ್ಲಿದ್ದ ಕಾಳು ಬಿತ್ತಿ ಬಂದಿದ್ದೇವೆ. ಭೂತಾಯಿ ಒಡಲಿನಿಂದ ಮೇಲೆ ಬಂದು ಚಿಗುರು ಮೂಡುವ ಮುನ್ನವೇ ಮತ್ತೆ ಭೂತಾಯಿ ಒಡಲು ಸೇರಿಕೊಂಡಿದೆ. ಇನ್ನೂ ಮೇಲೇಳುವ ಮಾತೇ ಇಲ್ಲ. ಬಿತ್ತನೆಗೆ ಸಮಯ ಮೀರಿದೆ. ಈ ವರ್ಷ ನಮ್ಮ ಬದುಕು ಮೂರಾಬಟ್ಟೆಯಾಗಿದೆ. ಮುಂದೇನು ಎಂಬುದೇ ಕಾಣುತ್ತಿಲ್ಲ...
ಮೇಲಿನ ಮಾತು ಹೇಳುತ್ತಲೇ ಮಧುಗಿರಿ ತಾಲ್ಲೂಕಿನ ಬಡವನಹಳ್ಳಿ ರೈತ ರಾಮಾಂಜನಪ್ಪ ಕಣ್ಣೀರಾದರು. ಬಂದೆರಗಿರುವ ಬರ ಕಂಡು ಒಂದು ಕ್ಷಣ ಗರಬಡಿದವರಂತೆ ನಿಂತು ಬಿಟ್ಟರು. ಮುಂದಿನ ಬದುಕು ನೆನೆದು ಆತಂಕಕ್ಕೆ ಒಳಗಾದರು. ಇದು ಅವರೊಬ್ಬ ರೈತರ ಬವಣೆಯಲ್ಲ. ಆ ಮಾತುಗಳು ಜಿಲ್ಲೆಯ ರೈತರು, ಜನರ ಬದುಕಿಗೆ ಕನ್ನಡಿ ಹಿಡಿದಂತಿತ್ತು.
ಈ ವರ್ಷ ಜಿಲ್ಲೆಯಲ್ಲಿ ಮುಂಗಾರು ಪೂರ್ವ ಹಾಗೂ ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟಿದ್ದು, ಬರದ ಛಾಯೆ ಆವರಿಸಿದೆ. ಮುಂದಿನ ಪರಿಸ್ಥಿತಿಯನ್ನು ಕಲ್ಪಿಸಿಕೊಂಡ ಹಳ್ಳಿ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಆಗಸ್ಟ್ ತಿಂಗಳ ಮೂರನೇ ವಾರಕ್ಕೆ ಕಾಲಿಟ್ಟಿದ್ದರೂ ಮಳೆಯ ಸುಳಿವೇ ಇಲ್ಲವಾಗಿದ್ದು, ಒಣಹವೆ ಮುಂದುವರಿದಿದೆ. ಜಿಲ್ಲೆ ಬರಕ್ಕೆ ತುತ್ತಾಗಿದ್ದರೂ ಬರಪೀಡಿತ ಪ್ರದೇಶವೆಂದು ಘೋಷಿಸಲು ರಾಜ್ಯ ಸರ್ಕಾರ ಮುಂದಾಗಿಲ್ಲ. ಘೋಷಣೆ ಮಾಡಿದ ತಕ್ಷಣ ಸೌಲಭ್ಯಗಳು ಜನರ ಮನೆ ಬಾಗಿಲಿಗೆ ಹರಿದು ಬರುವುದಿಲ್ಲ. ಅಲ್ಪ ಮಟ್ಟಿಗೆ ಪರಿಹಾರ ಕಂಡುಕೊಳ್ಳಲು, ಬೆಳೆ ವಿಮೆ ಸೌಲಭ್ಯ ಪಡೆದುಕೊಳ್ಳಲು ಸಹಕಾರಿಯಾಗುತ್ತದೆ. ಆದರೆ ಸರ್ಕಾರ ಮಾತ್ರ ನಿರ್ಧಾರ ಕೈಗೊಳ್ಳುವುದನ್ನು ನಿಧಾನ ಮಾಡುತ್ತಿದೆ.
ಮಳೆ ಕೊರತೆ
ಜೂನ್ ತಿಂಗಳಲ್ಲಿ ಸರಿಯಾಗಿ ಮಳೆ ಬೀಳಲಿಲ್ಲ. ಜುಲೈನಲ್ಲಿ ಅಲ್ಪ ಸ್ವಲ್ಪ ಬಿದ್ದ ಮಳೆಗೆ ರೈತರು ಬಿತ್ತನೆ ಮಾಡಿದ್ದಾರೆ. ಆಗಸ್ಟ್ ತಿಂಗಳಲ್ಲಿ ಈವರೆಗೂ ಒಂದು ಹನಿಯೂ ಭೂಮಿ ಕಂಡಿಲ್ಲ. ಬಿತ್ತನೆ ಮಾಡಿದ್ದ ಬೀಜ ಮೊಳಕೆಯೊಡೆದು, ನಾಲ್ಕು ಎಲೆಗಳು ಮೂಡುವ ಹೊತ್ತಿಗೆ ಮಣ್ಣಿನಲ್ಲಿ ತನುವಿಲ್ಲದೆ ಒಣಗಲಾರಂಭಿಸಿದೆ. ಜಿಲ್ಲೆಯ ಪರಿಸ್ಥಿತಿಯನ್ನು ಗಮನಿಸಿದರೆ ಬೆಳೆ ಬಹುತೇಕ ಒಣಗಿ ನಿಂತಿದ್ದು, ಮುಂದಿನ ದಿನಗಳಲ್ಲಿ ಮಳೆ ಬಂದರೂ ಚಿಗುರುವುದಿಲ್ಲ. ಗಿಡ ಬಲಿತು ಬಾಡಿದ್ದರೆ ಮಳೆಗೆ ಚೇತರಿಸಿಕೊಳ್ಳುತಿತ್ತು. ಆದರೆ ಬೇರು ಬಿಟ್ಟು ಗಟ್ಟಿಯಾಗಿ ನಿಲ್ಲುವ ಮೊದಲೇ ಒಣಗಿರುವುದರಿಂದ ಇನ್ನು ಮೇಲೇಳುವುದಿಲ್ಲ. ಈಗ ಮಳೆ ಬಂದರೂ ಬಿತ್ತನೆಗೆ ಸಕಾಲವಲ್ಲ.
ಮಳೆ ಬಿದ್ದರೆ ಜಾನುವಾರುಗಳಿಗೆ ಮೇವು ಹಾಗೂ ಕುಡಿಯಲು ಸಹಕಾರಿಯಾಗುತ್ತದೆ. ಶೇಂಗಾ ಬೆಳೆಗೆ ಅಲ್ಪ ಪ್ರಮಾಣದಲ್ಲಿ ಸಹಕಾರಿ ಆಗಬಹುದು. ಅದು ಬಿಟ್ಟರೆ ಇತರೆ ಯಾವುದೇ ಬೆಳೆಗೂ ನೆರವಾಗುವುದಿಲ್ಲ. ಈ ಬಾರಿ ನಾಲ್ಕು ಕಾಳು ಸಹ ಮನೆ ಸೇರುವುದಿಲ್ಲ. ಮಳೆ ಆಶ್ರಯಿಸಿರುವ ತೆಂಗು, ಅಡಿಕೆ, ಬಾಳೆ ಸೇರಿದಂತೆ ತೋಟಗಾರಿಕೆ ಬೆಳೆಗಳು ಹೊಡೆತ ತಿನ್ನುತ್ತವೆ. ಕೊಳವೆ ಬಾವಿಗಳಲ್ಲೂ ಅಂತರ್ಜಲ ಮಟ್ಟ ಕಡಿಮೆಯಾಗಿದ್ದು, ನೀರಾವರಿ ಆಶ್ರಯದ ಬೆಳೆಗಳ ರಕ್ಷಣೆಯೂ ಕಷ್ಟಕರವಾಗಿದೆ. ಮಳೆಯನ್ನೇ ನಂಬಿದ್ದ ತೆಂಗಿನ ತೋಟಗಳಲ್ಲಿ ಮರದ ಗರಿಗಳು ಭೂಮಿಯತ್ತ ಮುಖ ಮಾಡಿವೆ. ಹಿಂದಿನ ವರ್ಷಗಳಿಗಿಂತ ಈ ಬಾರಿ ಪರಿಸ್ಥಿತಿ ತೀವ್ರವಾಗಿ ಬಿಗಡಾಯಿಸಲಿದೆ.
ಒಣಗಿದ ಬೆಳೆ
ಜಿಲ್ಲೆಯಲ್ಲಿ ಶೇಂಗಾ 70,250 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಇದ್ದು, ಮಳೆ ಇಲ್ಲದೆ 52,725 ಹೆಕ್ಟೇರ್ (ಶೇ 75) ಪ್ರದೇಶದಲ್ಲಷ್ಟೇ ಬಿತ್ತನೆಯಾಗಿದೆ. ರಾಗಿ 1.50 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಬೇಕಿದ್ದು, 95,094 ಹೆಕ್ಟೇರ್‌ಗಳಲ್ಲಿ (ಶೇ 63) ಬಿತ್ತನೆ ಮಾಡಲಾಗಿದೆ. ಉಳಿದಂತೆ ಇತರೆ ಯಾವುದೇ ಬೆಳೆಯೂ ಬಿತ್ತನೆಯಾಗಿಲ್ಲ. ಶೇಂಗಾ ಬೆಲೆ ಅಲ್ಪ ಸ್ವಲ್ಪ ಉಸಿರಾಡುತ್ತಿದ್ದು, ಕಾಯಿ ಕಟ್ಟುವುದು ಅನುಮಾನ. ಮಳೆಯಾದರೆ ಜಾನುವಾರುಗಳಿಗೆ ಮೇವಾಗುತ್ತದೆ. ರಾಗಿ ಬಿತ್ತನೆ ಮಾಡಿದ ಕೆಲ ದಿನಗಳಲ್ಲೇ ಮಳೆ ಕೈಕೊಟ್ಟಿದ್ದರಿಂದ ಸಂಪೂರ್ಣ ಒಣಗಿ ಹೋಗಿದೆ. ಹಾಗಾಗಿ ಈ ವರ್ಷ ಆಹಾರ ಧಾನ್ಯಗಳ ಉತ್ಪಾದನೆ ಗಣನೀಯ ಪ್ರಮಾಣದಲ್ಲಿ ಕುಸಿತ ಕಾಣಲಿದೆ.
ಮಳೆ ವಿವರ ಮಿ.ಮೀ (ಜೂನ್– ಆಗಸ್ಟ್)
ತಾಲ್ಲೂಕು;ಸರಾಸರಿ;ಬಿದ್ದ ಮಳೆ;ಕೊರತೆ (ಶೇ)
ಚಿ.ನಾ.ಹಳ್ಳಿ;199;158;21
ಗುಬ್ಬಿ;224;174;22
ಕೊರಟಗೆರೆ;207;129;38
ಕುಣಿಗಲ್;227;157;31
ಮಧುಗಿರಿ;194;121;38
ಪಾವಗಡ;153;111;27
ಶಿರಾ;162;193;20
ತಿಪಟೂರು;163;159;03
ತುಮಕೂರು;263;221;16
ತುರುವೇಕೆರೆ;176;132;25
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.