ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧುಗಿರಿ | ಇಲ್ಲಿ ಸೌಲಭ್ಯ ಇದೆ; ಚಿಕಿತ್ಸೆ ಕೇಳಬೇಡಿ

ಮಧುಗಿರಿ ಸಾರ್ವಜನಿಕ ಆಸ್ಪತ್ರೆ; ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ತಕ್ಕಮಕಟ್ಟಿನ ವ್ಯವಸ್ಥೆ
Last Updated 31 ಮಾರ್ಚ್ 2020, 7:14 IST
ಅಕ್ಷರ ಗಾತ್ರ

ಮಧುಗಿರಿ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಎಲ್ಲವೂ ಸುಸಜ್ಜಿತವಾಗಿದೆ. ಆದರೂ ಗಂಭೀರ ಚಿಕಿತ್ಸೆಗಳಿಗೆ ರವಾನೆ ಮಾಡುವುದು ಮಾತ್ರ ಜಿಲ್ಲಾ ಆಸ್ಪತ್ರೆಗೆ!.

ಕೊರೊನಾ ಶಂಕಿತರಿಗೆ ಪ್ರಥಮ ಚಿಕಿತ್ಸೆ ನೀಡಲು ವೆಂಟಿಲೇಟರ್ ಹಾಗೂ ಐಸೋಲೇಷನ್ ವಾರ್ಡ್‌ ಅನ್ನು ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿದೆ. ಆದರೆ, ಕೊರೊನಾ ಸೋಂಕಿತರು ಕಂಡು ಬಂದರೆ ಮಾತ್ರ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ಕಳುಹಿಸಲಾಗುವುದು ಎಂದು ವೈದ್ಯರು ಹೇಳುತ್ತಾರೆ.

ಸಾರ್ವಜನಿಕ ಆಸ್ಪತ್ರೆಯ ಮೇಲ್ಭಾಗ ಕೊರೊನಾ ಶಂಕಿತರ ಚಿಕಿತ್ಸೆಗಾಗಿ ದೊಡ್ಡ ಕೊಠಡಿಯಲ್ಲಿ ಒಂದು ವೆಂಟಿಲೇಟರ್ ಹಾಗೂ ಒಂದು ಐಸೊಲೇಷನ್ ವಾರ್ಡ್‌ನಲ್ಲಿ ಎರಡು ಹಾಸಿಗೆ ವ್ಯವಸ್ಥೆ ಮಾಡಲಾಗಿದೆ. ಅಗತ್ಯ ಬಿದ್ದರೆ ಮತ್ತಷ್ಟು ಹಾಸಿಗೆಗಳನ್ನು ಹಾಕಲು ವ್ಯವಸ್ಥೆ ಮಾಡಿಕೊಂಡಿದ್ದಾರೆ. ಕೊರೊನಾ ಶಂಕಿತರಿಗೆ ಪ್ರಥಮ ಚಿಕಿತ್ಸೆ ನೀಡಲು ಎಲ್ಲ ವೈದ್ಯರು ತರಬೇತಿ ಪಡೆದಿದ್ದಾರೆ.

100 ಹಾಸಿಗೆ ಸಾಮರ್ಥ್ಯ ಹೊಂದಿದ್ದು, ತಾಲ್ಲೂಕಿಗೆ ದೊಡ್ಡ ಆಸ್ಪತ್ರೆ ಇದಾಗಿದೆ. 12 ವೈದ್ಯರು, 24 ನರ್ಸ್‌ಗಳು, 5 ಲ್ಯಾಬ್ ಟಿಕ್ನಿಷಿಯನ್, ಮೂವರು ಫಾರ್ಮಸಿ, ಇಬ್ಬರು ಕ್ಷ– ಕಿರಣ ಸಿಬ್ಬಂದಿ ಸೇರಿದಂತೆ 40 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಸಾರ್ವಜನಿಕ ಆಸ್ಪತ್ರೆಯಲ್ಲಿ ನೆಗಡಿ, ಜ್ವರ, ಕೆಮ್ಮ, ಹೆರಿಗೆ, ರಕ್ತದೊತ್ತಡ, ಹಲ್ಲು, ನೇತ್ರ ತಪಾಸಣೆ, ಮಧುಮೇಹ, ಅಪಘಾತದಲ್ಲಿ ಸಣ್ಣ ಮತ್ತು ಪುಟ್ಟ ಗಾಯಗಳಿಗೆ ಚಿಕಿತ್ಸೆ ದೊರೆಯುತ್ತದೆ. ಆದರೆ, ಗಂಭೀರ ಗಾಯ, ನೇತ್ರ ಶಸ್ತ್ರ ಚಿಕಿತ್ಸೆ ಹಾಗೂ ಹಾವು ಕಡಿತ ಸೇರಿದಂತೆ ಹಲವು ಚಿಕಿತ್ಸೆಗೆ ತುಮಕೂರು ಹಾಗೂ ಬೆಂಗಳೂರಿನ ಆಸ್ಪತ್ರೆಗೆ ಕಳುಹಿಸುತ್ತಿದ್ದಾರೆ ಎಂದು ಸಾರ್ವಜನಿಕರು ದೂರುತ್ತಾರೆ.

ತಾಲ್ಲೂಕಿನ ಐ.ಡಿ.ಹಳ್ಳಿ ಹಾಗೂ ಮಧುಗಿರಿಗೆ 108 ಆಂಬುಲೆನ್ಸ್ ಮಂಜೂರಾಗಿವೆ. ದೊಡ್ಡೇರಿ, ಕೊಡಿಗೇನಹಳ್ಳಿ ಹಾಗೂ ಮಿಡಿಗೇಶಿ ಹೋಬಳಿಗೆ 108 ಆಂಬುಲೆನ್ಸ್ ಬೇಕೆಂದು ಒತ್ತಾಯವಿದ್ದರೂ ಈವರೆಗೂ ಮಂಜೂರಾಗಿಲ್ಲ ಎಂಬ ಅಸಮಾಧಾನ ಆಯಾ ಹೋಬಳಿಯ ಜನರಲ್ಲಿ ಕಾಡುತ್ತಿದೆ.

ಮಧುಗಿರಿಯಲ್ಲಿ ಇರುವ 108 ಆಂಬುಲೆನ್ಸ್‌ನಲ್ಲಿ ಸಿಬ್ಬಂದಿ ಸರಿಯಾಗಿ ಕಾರ್ಯ ನಿರ್ವಹಿಸದೆ ಆಸ್ಪತ್ರೆಯ ಹಿಂಭಾಗ ವಾಹನ ನಿಲುಗಡೆ ಮಾಡುತ್ತಿದ್ದಾರೆಂದು ಹೆಸರು ಹೇಳಲು ಇಚ್ಚಿಸದ ಸಿಬ್ಬಂದಿಯೊಬ್ಬರು ಹೇಳುತ್ತಾರೆ.

ತಾಲ್ಲೂಕಿನಲ್ಲಿ 13 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಆದರೆ, ಇವುಗಳ ನಿರ್ವಹಣೆ ಮಾಡಲು ತಾಲ್ಲೂಕು ಆರೋಗ್ಯಾಧಿಕಾರಿಗೆ ಸಮರ್ಪಕವಾದ ಕಚೇರಿಯಿಲ್ಲ. ತಾತ್ಕಾಲಿಕವಾಗಿ ಸಾರ್ವಜನಿಕ ಆಸ್ಪತ್ರೆಯ ವಸತಿ ಗೃಹವನ್ನು ಬಳಸಿಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ. ನರ್ಸ್, ಆಶಾ ಕಾರ್ಯಕರ್ತರಿಗೆ ತರಬೇತಿ ನೀಡಲು ಉತ್ತಮ ಕಟ್ಟಡ ವ್ಯವಸ್ಥೆ ಇಲ್ಲ.

ಮಲೇರಿಯ, ಚಿಕೂನ್‌ಗುನ್ಯಾ, ಹೃದಯ ಸಂಬಂಧಿ ಕಾಯಿಲೆ ಸೇರಿದಂತೆ ಅನೇಕ ಸಾಂಕ್ರಾಮಿಕ ರೋಗಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಈ ರೋಗಗಳನ್ನು ತಡೆಗಟ್ಟಲು ಈಗಿರುವ ಸಾರ್ವಜನಿಕ ಆಸ್ಪತ್ರೆಯನ್ನು ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯನ್ನಾಗಿ ಪರಿವರ್ತಿಸಬೇಕೆಂಬುದು ಸಾರ್ವಜನಿಕರ ಆಗ್ರಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT