ಬುಧವಾರ, ಸೆಪ್ಟೆಂಬರ್ 29, 2021
20 °C
ಜಯಚಂದ್ರ ಅವರ ರಾಜಕೀಯ ದಾಳಕ್ಕೆ ಬಲಿಯಾಗಲಾರೆ

ಮದಲೂರು ಕೆರೆಗೆ ನೀರಿಲ್ಲ: ಮಾಧುಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಶಿರಾ ತಾಲ್ಲೂಕು ಮದಲೂರು ಕೆರೆಗೆ ಯಾವುದೇ ಕಾರಣಕ್ಕೂ ನೀರು ಬೀಡಲು ಸಾಧ್ಯವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಬುಧವಾರ ಮತ್ತೊಮ್ಮೆ ಸ್ಪಷ್ಟಪಡಿಸಿದರು.

‘ಕಾಂಗ್ರೆಸ್ ಮುಖಂಡ ಟಿ.ಬಿ.ಜಯಚಂದ್ರ ಅವರ ರಾಜಕೀಯ ದಾಳಕ್ಕೆ ಬಲಿಯಾಗಲು ನಾನು ತಯಾರಿಲ್ಲ. ಮದಲೂರು ಕೆರೆಗೆ ನೀರು ಹರಿಸಲಾಗದು. ಏನಾದರೂ ಮಾಡಿಕೊಳ್ಳಲಿ’ ಎಂದು ಸುದ್ದಿಗಾರರಿಗೆ ತಿಳಿಸಿದರು.

ಶಿರಾ ತಾಲ್ಲೂಕಿಗೆ ಹಂಚಿಕೆಯಾಗಿರುವ 0.9 ಟಿಎಂಸಿ ನೀರನ್ನು ಆ ಭಾಗಕ್ಕೆ ಬಳಸಿಕೊಳ್ಳುವಂತೆ ಹೈಕೋರ್ಟ್ ಹೇಳಿದೆ. ಹಂಚಿಕೆಯಾಗಿರುವ ನೀರನ್ನು ಕಳ್ಳಂಬೆಳ್ಳ ಕೆರೆಗೆ ತುಂಬಿಸಿ, ಶಿರಾ ಕೆರೆಗೆ ನೀರು ಹರಿಸುವುದರ ಒಳಗೆ ಮುಗಿದು ಹೋಗುತ್ತದೆ. ಮದಲೂರು ಕೆರೆಗೆ ಎಲ್ಲಿಂದ ನೀರು ಕೊಡುವುದು ಎಂದು ಪ್ರಶ್ನಿಸಿದರು.

ಜಯಚಂದ್ರ ಅವರು ಶಿರಾ ಕೆರೆಗೆ ನೀರು ಬಿಡುವುದು ಬೇಡ. ಅದೇ ನೀರನ್ನು ಮದಲೂರು ಕೆರೆಗೆ ಹರಿಸಿ ಎಂದು ಹೇಳಿದರೆ ಆಗ ಮಾತ್ರ ನೀರು ಬಿಡಬಹುದು. ಇದಕ್ಕೆ ಶಿರಾ ನಗರದ ಜನರನ್ನು ಒಪ್ಪಿಸಿಕೊಂಡು ಬರಲಿ ಎಂದು ಸವಾಲು ಹಾಕಿದರು. 0.9 ಟಿಎಂಸಿ ನೀರನ್ನು ತಾಲ್ಲೂಕಿನ ಎಲ್ಲಿಗೆ ಬೇಕಾದರೂ ಹರಿಸಿಕೊಳ್ಳಲಿ ಎಂದರು.

ಶಿರಾ ನಗರದಲ್ಲಿ 60 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಅಲ್ಲಿನ ಜನರು ಕುಡಿಯಲು ಕೆರೆ ನೀರನ್ನೇ ಆಶ್ರಯಿಸಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ ಶಿರಾ ಕೆರೆಗೆ ಬಿಡದೆ ಬೇರೆಡೆಗೆ ಕೊಡಲು ಸಾಧ್ಯವಿಲ್ಲ. ಮದಲೂರು ಕೆರೆ ಬಳಿ ಕುಡಿಯುವ ನೀರು ಸರಬರಾಜು ಮಾಡಲು ಯಾವ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಸುಮ್ಮನೆ ಕೆರೆಗೆ ಬಿಡಲಾಗುತ್ತದೆಯೆ? ಹೈಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲೇ ನೀರು ಕೊಡಲು ಸಾಧ್ಯವಿಲ್ಲ. ಅಧಿಕಾರಿಗಳು ಜೈಲಿಗೆ ಹೋಗುತ್ತಾರೆಂದು ಹೇಳುತ್ತಿರುವುದು ಎಂದು ವಿವರಿಸಿದರು.

ಶಿರಾ– ಮದಲೂರು ನಾಲೆ ಮಧ್ಯದಲ್ಲಿ ಸಾಕಷ್ಟು ಬ್ಯಾರೇಜ್‌ಗಳನ್ನು ಜಯಚಂದ್ರ ನಿರ್ಮಿಸಿದ್ದಾರೆ. ಈ ಬ್ಯಾರೇಜ್‌ಗಳನ್ನು ತುಂಬಿಸಿ ಮುಂದಕ್ಕೆ ನೀರು ತೆಗೆದುಕೊಂಡು ಹೋಗಲು ಸಾಧ್ಯವೇ ಇಲ್ಲ. ಬ್ಯಾರೇಜ್‌ಗಳನ್ನು ತೆರವುಮಾಡಿ, ಪೈಪ್‌ಲೈನ್ ನಿರ್ಮಿಸಿದರೆ ಈಗಲೂ ನೀರು ಬಿಡಲು ಸಿದ್ಧ. ಆಗ ಬೇಕಾದರೆ ರಾಜಿಮಾಡಿಕೊಳ್ಳುತ್ತೇನೆ. ಈಗ ಪೈಪ್‌ಲೈನ್ ನಿರ್ಮಿಸಿ, ನೀರು ಬಿಡುವುದು ಅಸಾಧ್ಯದ ಕೆಲಸ. ಅವರು ಮಾಡಿದ ಅವಾಂತರದಿಂದ ಇಷ್ಟೆಲ್ಲ ಸಮಸ್ಯೆಗಳಾಗಿವೆ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.