ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರವ್‌ ವಿರುದ್ಧ ಸಿಬಿಐ ಆರೋಪಪಟ್ಟಿ

‘ಪಿಎನ್‌ಬಿ’ಯ ಮಾಜಿ ಎಂ.ಡಿ ಉಷಾ ಸೇರಿ 22 ಮಂದಿ ವಿರುದ್ಧ ಆರೋಪ
Last Updated 14 ಮೇ 2018, 19:51 IST
ಅಕ್ಷರ ಗಾತ್ರ

ನವದೆಹಲಿ / ಮುಂಬೈ: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ (ಪಿಎನ್‌ಬಿ) ₹13 ಸಾವಿರ ಕೋಟಿ ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ವಜ್ರಾಭರಣ ವ್ಯಾಪಾರಿ ನೀರವ್‌ ಮೋದಿ ವಿರುದ್ಧ ಸಿಬಿಐ ಅಧಿಕಾರಿಗಳು ಸೋಮವಾರ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದಾರೆ.

ಮುಂಬೈ ವಿಶೇಷ ನ್ಯಾಯಾಲಯಕ್ಕೆ ಸಿಬಿಐ ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ನೀರವ್‌ ಮೋದಿ ಜತೆಗೆ ‘ಪಿಎನ್‌ಬಿ’ಯ ಮಾಜಿ ವ್ಯವಸ್ಥಾಪಕ ನಿರ್ದೇಶಕಿ ಉಷಾ ಅನಂತಸುಬ್ರಮಣಿಯನ್‌ ಮತ್ತು ನೀರವ್‌ ಸಹೋದರ ನಿಶಾಲ್‌ ಮೋದಿ ಸೇರಿದಂತೆ 22 ಜನರನ್ನು ಹೆಸರಿಸಲಾಗಿದೆ.

‘ಪಿಎನ್‌ಬಿ’ಯ ಕಾರ್ಯನಿರ್ವಾಹಕ ನಿರ್ದೇಶಕರಾದ ಕೆ.ವಿ. ಬ್ರಹ್ಮಾಜಿ ರಾವ್‌, ಸಂಜೀವ್‌ ಶರಣ್‌ ಮತ್ತು ಜನರಲ್‌ ಮ್ಯಾನೇಜರ್‌ ನೇಹಲ್‌ ಅಹಾದ್ ಸೇರಿದಂತೆ  ಹಿರಿಯ ಅಧಿಕಾರಿಗಳು ಇದರಲ್ಲಿ ಸೇರಿದ್ದಾರೆ.

ನೀರವ್‌ ಮೋದಿ ಒಡೆತನದ ಕಂಪನಿಗಳಿಗೆ ಬೇಕಾಬಿಟ್ಟಿಯಾಗಿ ₹ 6,498 ಕೋಟಿಗೂ ಅಧಿಕ ಮೊತ್ತದ ಸಾಲ ಖಾತರಿ ಪತ್ರ ವಿತರಿಸಿದ ಪ್ರಕರಣಕ್ಕೆ ಸಂಬಂಧಿಸಿದ ಆರೋಪ ಪಟ್ಟಿ ಇದಾಗಿದೆ.

ಮೆಹುಲ್‌ ಹೆಸರಿಲ್ಲ: ಆರೋಪ ಪಟ್ಟಿಯಲ್ಲಿ ನೀರವ್‌ ಪತ್ನಿ ಅಮಿ ಮೋದಿ, ಸಂಬಂಧಿ ಹಾಗೂ ವ್ಯವಹಾರ ಪಾಲುದಾರ ಮೆಹುಲ್‌ ಚೋಕ್ಸಿ ಹೆಸರಿಲ್ಲ. ಚೋಕ್ಸಿ ಪಾತ್ರದ ಬಗ್ಗೆ ಚಕಾರವನ್ನೂ ಎತ್ತಿಲ್ಲ.

ಗೀತಾಂಜಲಿ ಸಮೂಹದ ಅಕ್ರಮಗಳ ಕುರಿತು ಸಿಬಿಐ ಸಲ್ಲಿಸಲಿರುವ ಪೂರಕ ಆರೋಪ ಪಟ್ಟಿಯಲ್ಲಿ ಚೋಕ್ಸಿ ಅವರನ್ನು ಹೆಸರಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

2015–2017ರ ಅವಧಿಯಲ್ಲಿ ಪಿಎನ್‌ಬಿ ವ್ಯವಸ್ಥಾಪಕ ನಿರ್ದೇಶಕಿಯಾಗಿದ್ದ ಉಷಾ ಅವರನ್ನು ಸಿಬಿಐ ಅಧಿಕಾರಿಗಳು ಇತ್ತೀಚೆಗೆ ವಿಚಾರಣೆಗೆ ಒಳಪಡಿಸಿದ್ದರು. ಸದ್ಯ ಅವರು ಅಲಹಾಬಾದ್‌ ಬ್ಯಾಂಕ್‌ ವ್ಯವಸ್ಥಾಪಕ ನಿರ್ದೇಶಕಿಯಾಗಿದ್ದಾರೆ.

ಹಗರಣದ ಬಗ್ಗೆ ಬ್ಯಾಂಕ್‌, ಸಿಬಿಐಗೆ ದೂರು ನೀಡುವ ಮೊದಲೇ ನೀರವ್‌ ಮತ್ತು ಚೋಕ್ಸಿ ದೇಶ ತೊರೆದಿದ್ದರು. ಸಿಬಿಐ ಈ ಹಗರಣಕ್ಕೆ ಸಂಬಂಧಿಸಿದಂತೆ ಮೂರು ಪ್ರತ್ಯೇಕ ಎಫ್‌ಐಆರ್‌ ದಾಖಲಿಸಿದೆ.

ಹಾಂಕಾಂಗ್‌ನಲ್ಲಿ ನೀರವ್‌ ಮೋದಿ ಹೊಂದಿರುವ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶ ನೀಡುವಂತೆ ಕೋರಿ ‘ಪಿಎನ್‌ಬಿ’ ಅಲ್ಲಿಯ ನ್ಯಾಯಾಲಯದ ಮೊರೆ ಹೋಗಿದೆ.

ಹಗರಣಕ್ಕೆ ಸಂಬಂಧಿಸಿದಂತೆ ಆಂತರಿಕ ತನಿಖೆ ನಡೆಸುತ್ತಿರುವ ಬ್ಯಾಂಕ್‌ ಈಗಾಗಲೇ 20ಕ್ಕೂ ಹೆಚ್ಚು ಅಧಿಕಾರಿಗಳನ್ನು ಅಮಾನತುಗೊಳಿಸಿದೆ.

ಉಷಾ ಅಧಿಕಾರ ಮೊಟಕು

ಪಿಎನ್‌ಬಿ ಹಗರಣದ ಸಂಬಂಧ ಅಲಹಾಬಾದ್‌ ಬ್ಯಾಂಕ್‌ ವ್ಯವಸ್ಥಾಪಕ ನಿರ್ದೇಶಕಿ ಉಷಾ ಅನಂತಸುಬ್ರಮಣಿಯನ್‌ ಹಾಗೂ ಪಿಎನ್‌ಬಿಯ ಇಬ್ಬರು ಕಾರ್ಯನಿರ್ವಾಹಕ ನಿರ್ದೇಶಕರನ್ನು ವಜಾಗೊಳಿಸುವ ಪ್ರಕ್ರಿಯೆಯನ್ನು ಸರ್ಕಾರ ಆರಂಭಿಸಿದೆ.

ಉಷಾ ಅವರಿಗೆ ನೀಡಿರುವ ಎಲ್ಲ ಅಧಿಕಾರವನ್ನು ಮೊಟಕುಗೊಳಿಸುವಂತೆ ಕೇಂದ್ರ ಹಣಕಾಸು ಸಚಿವಾಲಯ ಸೋಮವಾರ ಬ್ಯಾಂಕ್‌ ಆಡಳಿತ ಮಂಡಳಿಗೆ ಸೂಚಿಸಿದೆ.

‘ಪಿಎನ್‌ಬಿ’ ಹಗರಣದ ಸಂಬಂಧ ಸಿಬಿಐ ನ್ಯಾಯಾಲಯಕ್ಕೆ  ಆರೋಪ ಪಟ್ಟಿ ಸಲ್ಲಿಸಿದ ಬೆನ್ನಲ್ಲೇ ಹಣಕಾಸು ಸಚಿವಾಲಯದ ಈ ನಿರ್ದೇಶನ ಹೊರಬಿದ್ದಿದೆ.

ಅದೇ ರೀತಿ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕರಾದ ಕೆ.ವಿ. ಬ್ರಹ್ಮಾಜಿ ರಾವ್‌, ಸಂಜೀವ್‌ ಶರಣ್ ಅವರ ಅಧಿಕಾರವನ್ನೂ ಮೊಟಕುಗೊಳಿಸುವಂತೆ ಸೂಚಿಸಿದೆ. ಇದರ ಬೆನ್ನಲ್ಲೇ ಬ್ಯಾಂಕ್, ಅವರಿಬ್ಬರನ್ನು ತಕ್ಷಣ ವಜಾಗೊಳಿಸಿದೆ.

ಹಣಕಾಸು ಸಚಿವಾಲಯ ಹತ್ತು ದಿನಗಳ ಹಿಂದೆ ಇವರೆಲ್ಲರಿಗೂ ಕಾರಣ ಕೇಳಿ ನೋಟಿಸ್‌ ನೀಡಿತ್ತು ಎಂದು ಹಣಕಾಸು ಸೇವೆಗಳ ಕಾರ್ಯದರ್ಶಿ ರಾಜೀವ್‌ ಕುಮಾರ್‌ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಆರೋಪಪಟ್ಟಿಯಲ್ಲಿ ಏನಿದೆ?

* 7,500 ಪುಟಗಳ ಆರೋಪಪಟ್ಟಿ

* 22 ಜನರು ಮತ್ತು ಮೂರು ಸಂಸ್ಥೆಗಳ ಹೆಸರು

* ಸಾಲಖಾತರಿ ಪತ್ರಗಳ ಬಗ್ಗೆ ಆರ್‌ಬಿಐ ದಾರಿ ತಪ್ಪಿಸಿದ್ದ ಪಿಎನ್‌ಬಿ ಅಧಿಕಾರಿಗಳು

* ನೀರವ್‌ ವಂಚನೆ ಬಗ್ಗೆ ಪಿಎನ್‌ಬಿ ಮುಂಬೈ ಶಾಖೆ ಅಧಿಕಾರಿಗಳಿಗೆ ಮುಂಚಿತವಾಗಿ ಸುಳಿವು

* ನೀರವ್‌ ಮೋದಿ, ಮೆಹುಲ್‌ ಚೋಕ್ಸಿ ಜತೆ ಪಿಎನ್‌ಬಿ ಎಂ.ಡಿ ಉಷಾ ಅನಂತಸುಬ್ರಮಣಿಯನ್‌ ಹಾಗೂ ಹಿರಿಯ ಅಧಿಕಾರಿಗಳು ಶಾಮೀಲು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT