ಗುರುವಾರ , ನವೆಂಬರ್ 14, 2019
19 °C

ನೂಡಲ್ಸ್; ಬೆಂಕಿ ಹೊತ್ತಿಕೊಂಡು ಬಾಲಕ ಸಾವು

Published:
Updated:

ತುಮಕೂರು: ನೂಡಲ್ಸ್ ಮಾಡಲು ಗ್ಯಾಸ್ ಹಚ್ಚಿದ ಬಾಲಕನಿಗೆ ಬೆಂಕಿ ಹೊತ್ತಿಕೊಂಡು ಮೃತಪಟ್ಟ ಘಟನೆ ನಗರದಲ್ಲಿ ನಡೆದಿದೆ.

ನೊಯಲ್ (7) ಮೃತಪಟ್ಟ ಬಾಲಕನಾಗಿದ್ದು, ನಗರದ ಕ್ರಿಶ್ಚಿಯನ್ ಸ್ಟ್ರೀಟ್‌ನ ವಾಸಿಗಳಾದ ಡ್ಯಾನಿಯಲ್ ದಯಾನ್ ಮತ್ತು ಸುಷ್ಮಾ ಅವರ 2ನೇ ಮಗನಾಗಿದ್ದಾನೆ.

ಅ.5ರಂದು ಮಧ್ಯಾಹ್ನ ಘಟನೆ ನಡೆದಿದ್ದು, ತೀವ್ರವಾಗಿ ಗಾಯಗೊಂಡಿದ್ದ ಬಾಲಕ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಅ.11ರಂದು ಕರೆದುಕೊಂಡು ಹೋಗುವಾಗ ಮಾರ್ಗದಲ್ಲಿ ಮೃತಪಟ್ಟಿದ್ದಾನೆ.

ಅ.5ರಂದು ಮಧ್ಯಾಹ್ನ ನೊಯಲ್ ನೂಡಲ್ಸ್ ಮಾಡಿಕೊಡು ಎಂದು ಕೇಳಿದ. ನಲ್ಲಿ ನೀರು ತುಂಬುತ್ತಿದ್ದರಿಂದ ಸ್ವಲ್ಪ ತಡೆದುಕೊ ನೀರು ತುಂಬಿ ಮಾಡಿಕೊಡುತ್ತೇನೆ ಎಂದು ಹೇಳಿದ್ದೆ. ಈ ವೇಳೆ ಮನೆಯ ಒಳಗಡೆ ಹೋಗಿದ್ದ. ಒಳಗಡೆ ಇದ್ದಾನೆ ಎಂದು ನಾನು ನೀರು ತುಂಬುವಲ್ಲಿ ಮಗ್ನಳಾಗಿದ್ದೆ ಎಂದು ಬಾಲಕನ ತಾಯಿ ಸುಷ್ಮಾ ಘಟನೆ ಕುರಿತು ’ಪ್ರಜಾವಾಣಿ’ಗೆ ವಿವರಿಸಿದರು.

ಈ ವೇಳೆ ನೊಯಲ್  ತಾನೇ ನೂಡಲ್ಸ್ ಮಾಡಿಕೊಳ್ಳಲು ಲೈಟರ್‌ನಿಂದ ಗ್ಯಾಸ್ ಹಚ್ಚಿದಾಗ ಧಿಗ್ಗನೆ ಏಕಕಾಲಕ್ಕೆ ಬೆಂಕಿ ಹೊತ್ತಿಕೊಂಡು ಆತನ ಕೈಗಳಿಗೆ, ಸ್ವಲ್ಪ ಮುಖಕ್ಕೆ ಗಾಯಗಳಾಗಿದ್ದವು. ಬಳಿಕ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದೆವು ಎಂದು ವಿವರಿಸಿದರು.

ಹಿರಿಯ ಮಗ ಗ್ಯಾಸ್ ಹಚ್ಚಿ ಟೀ, ಕಾಫಿ ಮಾಡುತ್ತಿರುತ್ತಾನೆ. ಅವನಂತೆಯೇ ತಾನೂ ಗ್ಯಾಸ್ ಹಚ್ಚಿ ನೂಡಲ್ಸ್ ಮಾಡಿಕೊಳ್ಳಲು ಹೋಗಿ ಈ ಅನಾಹುತವಾಗಿದೆ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)