ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧುಗಿರಿ | ಅಂತ್ಯಸಂಸ್ಕಾರಕ್ಕಿಲ್ಲ ಸಮರ್ಪಕ ಸ್ಥಳ

ಮಧುಗಿರಿ: ವಿದ್ಯುತ್ ಚಿತಾಗಾರಕ್ಕೆ ಒತ್ತಾಯ
Last Updated 17 ಜುಲೈ 2020, 10:38 IST
ಅಕ್ಷರ ಗಾತ್ರ

ಮಧುಗಿರಿ: ಪಟ್ಟಣದಲ್ಲಿ ಯಾರಾದರೂ ಮೃತಪಟ್ಟರೆ ಮನೆಯಲ್ಲಿ ಶವ ಇಟ್ಟುಕೊಂಡು ಅಂತ್ಯಕ್ರಿಯೆಗೆ ಜಾಗ ಹುಡುಕುವಂತಾಗಿದೆ.

ಪುರಸಭೆ ವ್ಯಾಪ್ತಿಯಲ್ಲಿ 23 ವಾರ್ಡ್‌ಗಳಿವೆ. 35 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಆದರೆ ಸಮರ್ಪಕವಾದ ಸ್ಮಶಾನವಿಲ್ಲದೆ, ಸಮಾಧಿಗಳ ಮೇಲೆ ಮತ್ತೆ ಸಮಾಧಿ ಮಾಡುವಂತಾಗಿದೆ.

ಉಳ್ಳವರು ಅವರ ಜಮೀನುಗಳಲ್ಲಿ ಶವ ಸಂಸ್ಕಾರ ಮಾಡುತ್ತಾರೆ. ಆದರೆ ಬಡವರು ಮೃತಪಟ್ಟರೆ ಸ್ಥಳವಿಲ್ಲದೆ ಪರದಾಡುತ್ತಿದ್ದಾರೆ. ಈ ಬಗ್ಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.

ಪಟ್ಟಣದ ಗೌರಿಬಿದನೂರು ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿ ಯಲ್ಲಿ ಸಮಾಧಿಗಳ ಮೇಲೆಯೇ ಸಮಾಧಿ ಮಾಡುತ್ತಿದ್ದಾರೆ. ಕುಟುಂಬದವರಿಗೆ ಸಮಾಧಿಗಳನ್ನು ಗುರುತಿಸುವುದೇ ದೊಡ್ಡ ತಲೆನೋವಾಗಿದೆ.

ಪಟ್ಟಣದಲ್ಲಿ ಎರಡು ಹಿಂದೂ ಸ್ಮಶಾನ ಹಾಗೂ ಒಂದು ಮುಸ್ಲಿಂ ಸಮುದಾಯದ ಸ್ಮಶಾನವಿದೆ. ಇವುಗಳಲ್ಲಿ ಶೌಚಾಲಯ, ಕುಡಿಯುವ ನೀರು ಸೇರಿದಂತೆ ಸೂಕ್ತ ಸೌಲಭ್ಯಗಳಿಲ್ಲ. ಸ್ಮಶಾನದ ಸುತ್ತಲೂ ಗಿಡ, ಬಳ್ಳಿ ಹಾಗೂ ಮುಳ್ಳಿನ ಗಿಡಗಳು ಆವರಿಸಿವೆ. ಶವಸಂಸ್ಕಾರಕ್ಕೆ ಕಿರಿಕಿರಿಯಾಗುತ್ತದೆ. ಶೀಘ್ರ ಇದನ್ನು ತೆರವುಗೊಳಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಶವವನ್ನು ಸುಡುವ ಸಂಪ್ರದಾಯ ಹೊಂದಿರುವ ಸಮುದಾಯಗಳಿಗೆ ಯಾರಾದರೂ ಮೃತಪಟ್ಟರೆ ಕಟ್ಟಿಗೆ ಹೊಂದಿಸುವುದೇ ಸವಾಲಾಗಿದೆ. ಲಾಕ್‌ಡೌನ್‌ನಿಂದಾಗಿ ಕಾರ್ಮಿಕರಿಲ್ಲದೆ ಸಾಮಿಲ್‌ಗಳು ಕೂಡ ಸ್ಥಗಿತಗೊಂಡಿರುವುದರಿಂದ ಕಟ್ಟಿಗೆಗೆ ಪರದಾಡುವಂತಾಗಿದೆ.

ಪಟ್ಟಣ ಪ್ರದೇಶ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿದೆ. ಜನಸಂಖ್ಯೆಯೂ ಹೆಚ್ಚಾಗುತ್ತಿದೆ. ಹಲವುಸಮುದಾಯದ ಜನರು ಶವವನ್ನು ಸುಡುವ ಸಂಪ್ರದಾಯ ರೂಢಿಸಿಕೊಂಡಿದ್ದಾರೆ. ತಾಲ್ಲೂಕು ಕೇಂದ್ರದಲ್ಲಿ ವಿದ್ಯುತ್ ಚಿತಾಗಾರ ಸ್ಥಾಪನೆ ಮಾಡಿದರೆ ಸಾಕಷ್ಟು ಅನುಕೂಲವಾಗುತ್ತದೆ ಎನ್ನುವುದು ಸಾರ್ವಜನಿಕರ ಒತ್ತಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT