ತುಮಕೂರು: ಮುಂದಿನ ಒಂದು ವಾರದಲ್ಲಿ ರೈಲ್ವೆ, ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಕೇಂದ್ರ ಜಲ ಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅಧಿಕಾರಿಗಳಿಗೆ ಸೂಚಿಸಿದರು.
ನಗರದಲ್ಲಿ ಶುಕ್ರವಾರ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು.
‘2027ರ ಮಾರ್ಚ್ ಒಳಗೆ ತುಮಕೂರು– ರಾಯದುರ್ಗ, ತುಮಕೂರು– ದಾವಣಗೆರೆ ರೈಲ್ವೆ ಮಾರ್ಗಕ್ಕೆ ಚಾಲನೆ ನೀಡುವಂತೆ ಪ್ರಧಾನಿ ಮೋದಿ ಸೂಚಿಸಿದ್ದಾರೆ. ನಿಗದಿತ ಸಮಯದಲ್ಲಿ ಎಲ್ಲ ಕೆಲಸ ಪೂರ್ಣಗೊಳಿಸಬೇಕು. ಮುಂದಿನ ವಾರದಲ್ಲಿ ಕೇಂದ್ರದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ರಾಜ್ಯಕ್ಕೆ ಭೇಟಿ ನೀಡಿ ವಿವಿಧ ಕಾಮಗಾರಿಗಳ ಪರಿಶೀಲನೆ ನಡೆಸಲಿದ್ದಾರೆ’ ಎಂದು ತಿಳಿಸಿದರು.
ತುಮಕೂರು– ನೆಲಮಂಗಲ ಹೆದ್ದಾರಿ ಕಾಮಗಾರಿಗೆ ಹಿರೇಹಳ್ಳಿ ಬಳಿ 1.2 ಕಿ.ಮೀ ಜಾಗದಲ್ಲಿ 300 ಮೀಟರ್ ಅಗಲ ಕಡಿಮೆಯಾಗಿದೆ. ಅಧಿಕಾರಿಗಳು ಇದನ್ನೆ ನೆಪವಾಗಿಟ್ಟುಕೊಂಡು ಇಡೀ ಯೋಜನೆ ನಿಧಾನಗತಿಯಲ್ಲಿ ಸಾಗುವಂತೆ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರವನ್ನು ‘ವಿಲನ್’ ಮಾಡುತ್ತಿದ್ದಾರೆ. ಸಂಬಂಧಪಟ್ಟವರು ಕೂಡಲೇ ಕಾಮಗಾರಿ ಆರಂಭಿಸಲು ಕ್ರಮಕೈಗೊಳ್ಳಬೇಕು ಎಂದು ನಿರ್ದೇಶಿಸಿದರು.
ಕೆ.ಬಿ.ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 206ರ ವಿಸ್ತರಣಾ ಕಾಮಗಾರಿ ಆದಷ್ಟು ಬೇಗ ಶುರುವಾಗಲಿದೆ. ರಸ್ತೆಯ ಪಕ್ಕದಲ್ಲಿದ್ದ ಮನೆ, ವಾಣಿಜ್ಯ ಸಂಕೀರ್ಣ, ಅಂಗಡಿ ಮುಂಗಟ್ಟು, ನಿವೇಶನಗಳಿಗೆ ಪರಿಹಾರ ವಿತರಿಸಲು ಸೂಚಿಸಲಾಗಿದೆ. ಹೊಸದಾಗಿ ಅಂಗಡಿ ಮಳಿಗೆ ಶುರು ಮಾಡಲು ನಾಳೆಯಿಂದಲೇ ಅವಕಾಶ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಜಿಲ್ಲಾಧಿಕಾರಿ ಶುಭ ಕಲ್ಯಾಣ್, ‘ತುಮಕೂರು– ರಾಯದುರ್ಗ ರೈಲ್ವೆ ಕಾಮಗಾರಿಗೆ ಶೇ 84ರಷ್ಟು ಭೂಮಿಯ ಹಸ್ತಾಂತರ ಪೂರ್ಣಗೊಂಡಿದೆ. ಕೊರಟಗೆರೆ, ಮಧುಗಿರಿ, ಮಡಕಶಿರಾ ಭಾಗದಲ್ಲಿ ಸ್ವಲ್ಪ ಸಮಸ್ಯೆಯಾಗುತ್ತಿದೆ. ತುಮಕೂರು–ದಾವಣೆಗೆರೆ ಕಾಮಗಾರಿ ಈಗಾಗಲೇ ಆರಂಭವಾಗಿದೆ. ತಿಮ್ಮರಾಜನಹಳ್ಳಿ– ತಾವರೆಕೆರೆ ಕಾಮಗಾರಿಗೆ ಟೆಂಡರ್ ಕರೆಯಲಾಗಿದ್ದು, ರೈಲ್ವೆಗೆ 610 ಎಕರೆ ಹಸ್ತಾಂತರಿಸಲಾಗಿದೆ’ ಎಂದು ಮಾಹಿತಿ ನೀಡಿದರು.
ಚಿತ್ರದುರ್ಗ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್, ‘ಚಿತ್ರದುರ್ಗ– ಭರಮಸಾಗರ ಯೋಜನೆಗೆ ಶೇ 90ರಷ್ಟು ಭೂಮಿ ಹಸ್ತಾಂತರಿಸಿದ್ದು, ಈಗಾಗಲೇ ಟೆಂಡರ್ ಕರೆಯಲಾಗಿದೆ. ಹಿರಿಯೂರು– ಚಿತ್ರದುರ್ಗ ಯೋಜನೆಗೆ ಶೇ 78ರಷ್ಟು ಭೂಮಿ ಹಸ್ತಾಂತರಿಸಿದೆ. ಮೂರು ಹಂತದಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ. ತಾವರೆಕೆರೆ– ಹಿರಿಯೂರು ಕಾಮಗಾರಿಗೆ 32 ಎಕರೆ ಭೂ ಹಸ್ತಾಂತರ ಬಾಕಿ ಇದೆ. ಮುಂದಿನ ತಿಂಗಳಲ್ಲಿ ಎಲ್ಲ ಕೆಲಸಗಳನ್ನು ಪೂರ್ಣಗೊಳಿಸಲಾಗುವುದು’ ಎಂದು ತಿಳಿಸಿದರು.
ಶಾಸಕ ಬಿ.ಸುರೇಶ್‌ಗೌಡ, ‘ನಗರದ ಅಂತರಸನಹಳ್ಳಿ ಕೆಳ ಸೇತುವೆ ಬಳಿ ಮಳೆ ಬಂದ ಪ್ರತಿ ಸಾರಿ ನೀರು ನಿಂತು ವಾಹನಗಳ ಓಡಾಟಕ್ಕೆ ಸಮಸ್ಯೆಯಾಗುತ್ತಿದೆ. ಅಧಿಕಾರಿ ಮುಂದಾಲೋಚನೆ ಇಲ್ಲದೆ ಕೆಲಸ ಮಾಡಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಎನ್.ವೆಂಕಟೇಶ್, ಡಾ.ಮಂಜುಳಾ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.