ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಾರ್ಟ್‌ಸಿಟಿ: ಗುತ್ತಿಗೆದಾರರಷ್ಟೇ ‘ಸ್ಮಾರ್ಟ್’ ಆಗಿದ್ದಾರೆ

ತುಮಕೂರು ನಗರದಲ್ಲಿ ಕಾಮಗಾರಿಗಳು 2021ರಲ್ಲಿ ಪೂರ್ಣವಾಗುವ ಸಾಧ್ಯತೆ ಇಲ್ಲ
Last Updated 31 ಆಗಸ್ಟ್ 2020, 8:44 IST
ಅಕ್ಷರ ಗಾತ್ರ

ತುಮಕೂರು: ನಗರದಲ್ಲಿ ಸ್ಮಾರ್ಟ್‌ಸಿಟಿ ಕಾಮಗಾರಿಗಳನ್ನು 2020ರ ಜೂನ್‌ನಲ್ಲಿ ‍ಪೂರ್ಣಗೊಳಿಸಬೇಕಾಗಿತ್ತು. ಆದರೆ ಆಮೆನಡಿಗೆಯ ಕಾಮಗಾರಿಗಳ ಕಾರಣದಿಂದ 2021ಕ್ಕೂ ಪೂರ್ಣಗೊಳ್ಳುವ ಲಕ್ಷಣಗಳು ಕಂಡುಬರುತ್ತಿಲ್ಲ.

2016ರಲ್ಲಿ ನಗರದಲ್ಲಿ ಸ್ಮಾರ್ಟ್‌ಸಿಟಿ ಕಾಮಗಾರಿಗಳು ಆರಂಭವಾಗಿವೆ. ಈ ನಾಲ್ಕು ವರ್ಷಗಳಲ್ಲಿ ಒಟ್ಟು 63 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಇನ್ನೂ 72 ಕಾಮಗಾರಿಗಳು ನಿರ್ಮಾಣ ಹಂತದಲ್ಲಿ ಇದ್ದರೆ, 10 ಕಾಮಗಾರಿಗಳು ಟೆಂಡರ್ ಪ್ರಕ್ರಿಯೆಯಲ್ಲಿ ಇವೆ. ವಸ್ತುಸ್ಥಿತಿ ಹೀಗಿರುವಾಗ ಪೂರ್ಣ ಪ್ರಮಾಣದಲ್ಲಿ ಸ್ಮಾರ್ಟ್‌ಸಿಟಿ ಕಾಮಗಾರಿಗಳನ್ನು 2021ಕ್ಕೆ ಪೂರ್ಣಗೊಳಿಸುತ್ತೇವೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಈಗಿನ ವೇಗ ಗಮನಿಸಿದರೆ ಇನ್ನೂ ಎರಡು ವರ್ಷ ಕಳೆದರೂ ಕಾಮಗಾರಿ ಮುಗಿಯುವುದು ಅನುಮಾನ.

ನಗರದಲ್ಲಿ ಸ್ಮಾರ್ಟ್‍ಸಿಟಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸದ 11 ಗುತ್ತಿಗೆದಾರರಿಗೆ 2020ರ ಮಾರ್ಚ್‌ನಲ್ಲಿ ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಟಿ.ಭೂಬಾಲನ್ ₹ 1.53 ಕೋಟಿ ದಂಡ ವಿಧಿಸಿದ್ದರು. ಇದಕ್ಕೂ ಮುನ್ನ ಕಾಮಗಾರಿ ವಿಳಂಬ ಮತ್ತು ಸಾರ್ವಜನಿಕ ಹಿತದೃಷ್ಟಿಯಲ್ಲಿ ಅಗತ್ಯ ಸುರಕ್ಷಾ ಕ್ರಮಗಳನ್ನು ವಹಿಸದ ಗುತ್ತಿಗೆದಾರರಿಗೆ ₹ 65.9 ಲಕ್ಷ ದಂಡ ಹಾಕಿದ್ದರು. ಇದು ನಗರದಲ್ಲಿ ಸ್ಮಾರ್ಟ್‌ಸಿಟಿ ಕಾಮಗಾರಿಗಳು ಯಾವ ವೇಗದಲ್ಲಿ ನಡೆಯುತ್ತಿವೆ ಎನ್ನುವುದಕ್ಕೆ ಸ್ಪಷ್ಟ ಉದಾಹರಣೆ. ಕಾಮಗಾರಿಗಳು ಆರಂಭವಾದ ದಿನದಿಂದಲೂ ಕುಂಟುತ್ತ,ತೆವಳುತ್ತ ಸಾಗಿವೆ.

ಪೂರ್ಣವಾಗದ ಸ್ಮಾರ್ಟ್‌ ರಸ್ತೆಗಳು: ನಗರದ ಆಯ್ದ ವಾರ್ಡ್‌ಗಳಲ್ಲಿ 14.7 ಕಿಲೋ ಮೀಟರ್ ಉದ್ದದಲ್ಲಿ ಸ್ಮಾರ್ಟ್‌ ರಸ್ತೆಗಳನ್ನು ರೂಪಿಸಲಾಗುತ್ತಿದೆ. ಈ ಕಾಮಗಾರಿ ಕನಿಷ್ಠ ಅರ್ಧಭಾಗವೂ ಪೂರ್ಣವಾಗಿಲ್ಲ. ಈಗ ಏಕಕಾಲದಲ್ಲಿಯೇ ನಗರದ ಜನನಿಬಿಡ ಪ್ರದೇಶಗಳಲ್ಲಿ ಸ್ಮಾರ್ಟ್‌ರಸ್ತೆ ಕಾಮಗಾರಿಗಳನ್ನು ಕೈಗೊಂಡಿರುವುದು ನಾಗರಿಕರ ಸುಗಮ ಸಂಚಾರಕ್ಕೆ ತಡೆಯಾಗಿದೆ.

ಎಂ.ಜಿ.ರಸ್ತೆ, ಜೆ.ಸಿ.ರಸ್ತೆ, ಹೊರಪೇಟೆ, ವಿವೇಕಾನಂದ ರಸ್ತೆ, ಮಂಡಿಪೇಟೆ ಮುಖ್ಯರಸ್ತೆ, ಒಂದು ಮತ್ತು ಎರಡನೇ ಮುಖ್ಯರಸ್ತೆ, ಗುಬ್ಬಿ ವೀರಣ್ಣ ಕಲಾಮಂದಿರ ರಸ್ತೆ, ಕೆಎಸ್‌ಆರ್‌ಟಿಸಿ ಬಸ್ ಡಿಪೊ ರಸ್ತೆ, ಡಾ.ರಾಧಾಕೃಷ್ಣ ರಸ್ತೆ, ಬೆಳಗುಂಬ ರಸ್ತೆ ಹೀಗೆ ನಗರದ ಪ್ರಮುಖ ಪ್ರದೇಶಗಳಲ್ಲಿ ರಸ್ತೆ ಕಾಮಗಾರಿಗಳು ನಡೆಯುತ್ತಿವೆ. ಸ್ಮಾರ್ಟ್ ರಸ್ತೆ ಕಾಮಗಾರಿಗಳಿಗೆ ₹ 100 ಕೋಟಿಗೂ ಹೆಚ್ಚು ವೆಚ್ಚವಾಗುತ್ತದೆ.

ಸಮನ್ವಯದ ಕೊರತೆ: ಹೀಗೆ ಸ್ಮಾರ್ಟ್‌ಸಿಟಿ ಕಾಮಗಾರಿಗಳು ತಡವಾಗುವುದಕ್ಕೆ ಇಲಾಖೆಗಳ ನಡುವಿನ ಸಮನ್ವಯದ ಕೊರತೆಯೂ ಪ್ರಮುಖವಾಗಿದೆ. ಇದನ್ನು ಅಧಿಕಾರಿಗಳು ಸಹ ಒಪ್ಪುತ್ತಾರೆ. ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಪದೇ ಪದೇ ಸಭೆಗಳನ್ನು ನಡೆಸಿದಾಗಲೂ ಮತ್ತು ವಿಶೇಷ ಸಮನ್ವಯ ಸಾಧಿಸಲು ಸಭೆ ನಡೆಸಿದಾಗಲೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಬೇಕು ಎಂದು ಸೂಚಿಸಿದ್ದಾರೆ. ಆದರೆ ಆ ಸಮನ್ವಯ ಮಾತ್ರ ಸಾಧ್ಯವಾಗುತ್ತಿಲ್ಲ. ಇದಕ್ಕೆ ನಗರದಲ್ಲಿ ನಡೆಯುವ ಆಮೆಗತಿಯ ಕಾಮಗಾರಿಗಳೇ ಸಾಕ್ಷಿಯಾಗಿವೆ.

ಬಸ್ ನಿಲ್ದಾಣ ಮತ್ತು ಕ್ರೀಡಾಂಗಣ ಕಾಮಗಾರಿ ತಡ: ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಮತ್ತು ಮಹಾತ್ಮಗಾಂಧಿ ಕ್ರೀಡಾಂಗಣ ಕಾಮಗಾರಿಗಳು ದೊಡ್ಡ ಬಜೆಟ್‌ ಕಾಮಗಾರಿಗಳಾಗಿವೆ. ಈ ಎರಡೂ ಕಾಮಗಾರಿಗಳನ್ನು ಆಯಾ ಇಲಾಖೆಗೆ ವಹಿಸಲಾಗಿದೆ. ಫೆಬ್ರುವರಿಯಲ್ಲಿ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಕ್ರೀಡಾಂಗಣ ಕಾಮಗಾರಿ ಪರಿಶೀಲಿಸಿದ್ದರು. ಆಗ ಕಾಮಗಾರಿ ಯಾವಾಗ ಪೂರ್ಣಗೊಳಿಸುತ್ತೀರಿ ಎಂದು ಗುತ್ತಿಗೆದಾರರನ್ನು ಪ್ರಶ್ನಿಸಿದಾಗ ‘ಸೆಪ್ಟೆಂಬರ್‌ಗೆ ‍ಪೂರ್ಣಗೊಳ್ಳುತ್ತದೆ’ ಎಂದು ಉತ್ತರಿಸಿದ್ದರು. ಸದ್ಯದ ಪರಿಸ್ಥಿತಿ ನೋಡಿದರೆ ಅಲ್ಲಿನ ಕಾಮಗಾರಿ 2021 ಬಂದರೂ ಪೂರ್ಣವಾಗುವ ಲಕ್ಷಣಗಳು ಇಲ್ಲ. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಕಾಮಗಾರಿಯದ್ದೂ ಇದೇ ಸ್ಥಿತಿ.

ಹೀಗೆ ಕಾಮಗಾರಿಯ ನಿಧಾನಗತಿ ನಾಗರಿಕರಿಗೆ ಸಮಸ್ಯೆಗಳನ್ನು ತಂದೊಡ್ಡುತ್ತಿದೆ. ಗಾರ್ಡನ್ ರಸ್ತೆ, ಅಶೋಕ ರಸ್ತೆ, ವಿವೇಕಾನಂದ ರಸ್ತೆ– ಹೀಗೆ ವಿವಿಧ ಕಡೆಗಳಲ್ಲಿ ಸ್ಮಾರ್ಟ್‌ಸಿಟಿ ಕಾಮಗಾರಿಗಳು ನಡೆಯುತ್ತಿವೆ. ಆಸುಪಾಸಿನ ರಸ್ತೆಗಳಲ್ಲಿ ಏಕಕಾಲದಲ್ಲಿ ಕಾಮಗಾರಿಗಳನ್ನು ಆರಂಭಿಸಿರುವುದು ನಾಗರಿಕರಿಗೆ ಕಿರಿಕಿರಿಯಾಗಿದೆ. ಸುಗಮ ಸಂಚಾರಕ್ಕೂ ತೊಡಕಾಗಿದೆ.

ಅನ್ಯ ಕಾಮಗಾರಿಯಿಂದ ತಡ
ಈ ಹಿಂದೆ ಯುಜಿಡಿ, ಬೆಸ್ಕಾಂನಿಂದ ಭೂಗತ ಕೇಬಲ್ ಕಾಮಗಾರಿ, 24*7 ಕುಡಿಯುವ ನೀರಿನ ವ್ಯವಸ್ಥೆ, ಗ್ಯಾಸ್‌ಲೈನ್– ಹೀಗೆ ಎಲ್ಲ ಕಡೆಯೂ ಕೆಲಸಗಳು ನಡೆಯುತ್ತಿದ್ದವು. ಆ ಕೆಲಸಗಳೆಲ್ಲ ಮುಗಿದ ನಂತರವೇ ನಾವು ಕಾಮಗಾರಿಗಳನ್ನು ಆರಂಭಿಸಬೇಕಿತ್ತು. ಈ ಕಾರಣದಿಂದ ಸ್ವಲ್ಪ ತಡವಾಗಿದೆ ಎಂದು ತುಮಕೂರು ಸ್ಮಾರ್ಟ್‌ಸಿಟಿ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ರಂಗಸ್ವಾಮಿ ತಿಳಿಸಿದರು.

ಕೆಲವು ಕಡೆಗಳಲ್ಲಿ ಈಗಾಗಲೇ ಅಲ್ಲಿದ್ದ ವ್ಯವಸ್ಥೆ ಸ್ಥಳಾಂತರಿಸಿ ಕಾಮಗಾರಿ ಮಾಡಬೇಕಾಗಿತ್ತು. ಈ ಕಾರಣದಿಂದಲೂ ತಡವಾಯಿತು. 2021ರ ಮಾರ್ಚ್‌ ವೇಳೆಗೆ ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್‌ ರಸ್ತೆ ಕಾಮಗಾರಿಗಳು ಪೂರ್ಣವಾಗುತ್ತವೆ. ಮಹಾತ್ಮಗಾಂಧಿ ಕ್ರೀಡಾಂಗಣ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಗಳ ಕಾಮಗಾರಿಗಳನ್ನು ಆಯಾ ಇಲಾಖೆಗಳಿಗೆ ನೀಡಿದ್ದೇವೆ. ಇವು ದೊಡ್ಡ ಕಾಮಗಾರಿಗಳಾಗಿದ್ದು ಪೂರ್ಣವಾಗುವುದು ತಡವಾಗಬಹುದು ಎಂದು ಮಾಹಿತಿ ನೀಡಿದರು.

ಸಮಸ್ಯೆಗಳು ಎದುರಾದರೆ ತಿಳಿಸಿ
ನಾವು ಕಾಮಗಾರಿ ನಡೆಸುತ್ತಿರುವ ಕಡೆಗಳಲ್ಲಿ ‘ಇಲ್ಲಿ ಸ್ಮಾರ್ಟ್‌ಸಿಟಿ ಕಾಮಗಾರಿ ನಡೆಯುತ್ತಿದೆ’ ಎಂದು ಫಲಕಗಳನ್ನು ಅಳವಡಿಸಿದ್ದೇವೆ. ಹೀಗಿದ್ದರೂ ನಗರದಲ್ಲಿ ಬೇರೆ ಬೇರೆ ಕಡೆಗಳಲ್ಲಿ ನಡೆಯುತ್ತಿರುವ ಕಾಮಗಾರಿಗಳು ಸ್ಮಾರ್ಟ್‌ಸಿಟಿ ಕಾಮಗಾರಿಗಳೇ ಎಂದು ನಾಗರಿಕರು ಅಂದುಕೊಂಡಿದ್ದಾರೆ. ನಮ್ಮ ಕಾಮಗಾರಿಗಳಿಂದ ಸಮಸ್ಯೆಗಳು ಎದುರಾದರೆ ನಾಗರಿಕರು ನೇರವಾಗಿಯೇ ಬಂದು ದೂರುಗಳನ್ನು ಸಲ್ಲಿಸಬಹುದು ಎನ್ನುತ್ತಾರೆ ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ಸ್ವಾಮಿ.

ಅಂಕಿ ಅಂಶ
69 ಸದ್ಯ ಪೂರ್ಣಗೊಂಡ ಕಾಮಗಾರಿಗಳು; ಒಟ್ಟು ವೆಚ್ಚ ₹170.74 ಕೋಟಿ
72 ಪ್ರಗತಿಯಲ್ಲಿರುವ ಕಾಮಗಾರಿಗಳು; ಒಟ್ಟು ವೆಚ್ಚ ₹686.46 ಕೋಟಿ
10 ಟೆಂಡರ್ ಹಂತದಲ್ಲಿರುವ ಕಾಮಗಾರಿಗಳು; ಒಟ್ಟು ವೆಚ್ಚ ₹35.94 ಕೋಟಿ

ಕಾಮಗಾರಿ; ವೆಚ್ಚ (ಕೋಟಿಗಳಲ್ಲಿ)
ರಿಂಗ್ ರಸ್ತೆ ಅಭಿವೃದ್ಧಿ;
36.40
ಎಂ.ಜಿ.ಕ್ರೀಡಾಂಗಣ ಅಭಿವೃದ್ಧಿ; 52.30
ಸ್ಮಾರ್ಟ್‌ರಸ್ತೆ ಅಭಿವೃದ್ಧಿ; 133.48
ಇಂಟಲಿಜೆನ್ಸ್ ಟ್ರಾನ್ಸ್‌ಪೋರ್ಟ್ ಸಿಸ್ಟಂ; 4.69
ಮಾರಿಯಮ್ಮ ನಗರದಲ್ಲಿ ಮನೆ ನಿರ್ಮಾಣ; 12.33
ನಗರ ಕೇಂದ್ರ ಗ್ರಂಥಾಲಯದಲ್ಲಿ ಕಾಮಗಾರಿ; 25.62
ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಅಭಿವೃದ್ಧಿ; 82.18

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT