ಶುಕ್ರವಾರ, ಜನವರಿ 28, 2022
24 °C

ಪ್ರಚಾರಕ್ಕೆ ತೆರೆ: ಅಂತಿಮ ಕಸರತ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆಯುತ್ತಿರುವ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಮಂಗಳವಾರ ಸಂಜೆ ತೆರೆ ಬಿತ್ತು. ಕೋವಿಡ್ ನಿಯಮ ಅನುಸರಿಸಬೇಕಿದ್ದು, ಮತದಾನ ಮುಕ್ತಾಯಗೊಳ್ಳುವ 72 ಗಂಟೆಗಳ ಮುಂಚಿತವಾಗಿ ಬಹಿರಂಗ ಪ್ರಚಾರ ಅಂತ್ಯಗೊಳಿಸುವಂತೆ ಚುನಾವಣೆ ಆಯೋಗ ಸೂಚಿಸಿತ್ತು.

ಪ್ರಮುಖವಾಗಿ ಬಿಜೆಪಿಯ ಎನ್.ಲೋಕೇಶ್, ಕಾಂಗ್ರೆಸ್‌ನ ಆರ್.ರಾಜೇಂದ್ರ, ಜೆಡಿಎಸ್‌ನ ಆರ್.ಅನಿಲ್ ಕುಮಾರ್ ನಡುವೆ ಹಣಾಹಣಿ ಏರ್ಪಟ್ಟಿದೆ. ಗೆಲುವಿಗಾಗಿ ಮೂವರೂ ಎಲ್ಲಾ ರೀತಿಯಲ್ಲೂ ಪ್ರಯತ್ನ ಆರಂಭಿಸಿದ್ದಾರೆ.

ಬಹಿರಂಗ ಪ್ರಚಾರ ಅಂತ್ಯಗೊಂಡಿದ್ದು, ಮನೆಮನೆಗೆ ಭೇಟಿ ನೀಡಿ ಪ್ರಚಾರ ಮಾಡಬಹುದಾಗಿದೆ. ಉಳಿದಿರುವ ಎರಡು ದಿನಗಳಲ್ಲಿ ನಿಜವಾದ ಮತ ಬೇಟೆ ಆರಂಭವಾಗಲಿದೆ ಎಂಬುದು ಬಹಿರಂಗ ಸತ್ಯ. ಪ್ರಚಾರ ಮುಗಿಸಿರುವ ಅಭ್ಯರ್ಥಿಗಳು, ಪಕ್ಷದ ಮುಖಂಡರು, ಕಾರ್ಯಕರ್ತರು ತೆರೆಮರೆಯ ಕಸರತ್ತು ನಡೆಸಿದ್ದಾರೆ.

ಉಳಿದಿರುವ ಎರಡು ದಿನಗಳಲ್ಲಿ ಗೆಲುವಿಗೆ ಎಲ್ಲಾ ರೀತಿಯ ತಂತ್ರಗಾರಿಕೆಯೂ ಬಳಕೆಯಾಗಲಿದೆ. ಈಗಾಗಲೇ ಕೆಲವರು ಬೆಟ್ಟೆ, ಸೀರೆ, ಇತರೆ ಉಡುಗೊರೆಗಳನ್ನು ಕೊಟ್ಟಿದ್ದಾರೆ. ವಿವಿಧ ರೀತಿಯ ಆಮಿಷಗಳನ್ನು ಒಡ್ಡಿದ್ದಾರೆ. ಹಣ ಹಂಚಿಕೆ ಬುಧವಾರದಿಂದ ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ. ಮೂರು ಪಕ್ಷದವರು ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ. ಎದುರು ಪಕ್ಷದವರು ಎಷ್ಟು ಕೊಡುತ್ತಾರೆ, ಅದನ್ನು ನೋಡಿಕೊಂಡು ನಮ್ಮ ಪಕ್ಷದಿಂದ ಎಷ್ಟು ಕೊಡಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ ಎಂದು ಮೂರು ಪಕ್ಷಗಳ ಮುಖಂಡರು
ಹೇಳುತ್ತಿದ್ದಾರೆ.

ಪರಿಷತ್ ಚುನಾವಣೆ ಗೆಲುವು ಹಣದ ಮೇಲೆ ನಿಂತಿದೆ ಎಂಬ ಮಾತು ಜನಜನಿತವಾಗಿದೆ. ಎಲ್ಲರ ಬಾಯಲ್ಲೂ ಇದೇ ಮಾತುಗಳು ಕೇಳಿಬರುತ್ತಿವೆ. ಹಣ ಕೊಡುತ್ತೇವೆ ಎಂದು ಹೇಳಿದರೆ ಜನಪ್ರತಿನಿಧಿಗಳಿಗೆ ಅಪಮಾನ ಮಾಡಿದಂತೆ ಎಂದು ಮೇಲು ನೋಟಕ್ಕೆ ಎಲ್ಲರೂ ಹೇಳಿಕೆ ಕೊಡುತ್ತಿದ್ದಾರೆ. ಆದರೆ ಹಣ ಹಂಚಿಕೆ ಮೇಲೆ ಗೆಲುವು ನಿರ್ಧಾರವಾಗುತ್ತದೆ ಎಂದು ಆಂತರಿಕವಾಗಿ ಒಪ್ಪಿಕೊಳ್ಳುತ್ತಾರೆ.

ಬಿಜೆಪಿ, ಕಾಂಗ್ರೆಸ್, ಜೆಡಿಎಸ್– ಮೂರು ಪಕ್ಷಗಳಲ್ಲೂ ಒಂದೊಂದು ರೀತಿಯ ಲೆಕ್ಕಾಚಾರ ನಡೆದಿದೆ. ಕೆಲವರು ಈಗಾಗಲೇ ಮೊದಲ ಹಂತದಲ್ಲಿ ಹಂಚಿಕೆ ಮಾಡಿದ್ದು, ಎರಡನೇ ಹಂತದ ಹಂಚಿಕೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ₹50 ಸಾವಿರದ ವರೆಗೂ ಕೊಡಬಹುದು ಎಂದು ಹೇಳಲಾಗುತ್ತಿದೆ. ಮತದಾನದ ಹಿಂದಿನ ದಿನದ ವೇಳೆಗೆ ಈ ಮೊತ್ತ ಇನ್ನೂ ಹೆಚ್ಚಾಗಬಹುದು. ಕೊನೆ ಗಳಿಗೆಯ ಅನಿವಾರ್ಯತೆ, ಗೆಲುವಿಗೆ ಸಮೀಪ ಬಂದಾಗ, ವಿರೋಧಿ ಮತಗಳನ್ನು ಸೆಳೆಯುವ ಸಂದರ್ಭ ಎದುರಾದರೆ ₹70–80 ಸಾವಿರದ ವರೆಗೂ ಏರಿಕೆಯಾಗಬಹುದು. ಈ ಮೊತ್ತ ಇನ್ನೂ ಹೆಚ್ಚಾದರೂ ಆಶ್ಚರ್ಯಪಡಬೇಕಿಲ್ಲ ಎಂಬ ಸತ್ಯವನ್ನು ಮೂರು ಪಕ್ಷದವರು ಆಂತರಿಕವಾಗಿ ಒಪ್ಪಿಕೊಳ್ಳುತ್ತಿದ್ದಾರೆ. ಇದನ್ನು ಬಹಿರಂಗಪಡಿಸುವುದಿಲ್ಲ. ಇದೇನಿದ್ದರೂ ಗುಟ್ಟಿನ ವಿಚಾರ ಎಂಬ ಸಮಜಾಯಿಸಿಯನ್ನೂ
ನೀಡುತ್ತಿದ್ದಾರೆ.

ಕೊನೆಯ ಎರಡು ದಿನಗಳಲ್ಲಿ ನಡೆಯುವ ಹಣ ಹಂಚಿಕೆ ಮೇಲೆ ಗೆಲುವು ನಿರ್ಧಾರವಾಗಲಿದೆ. ಅದಕ್ಕೆ ಬೇಕಾದ ಸಿದ್ಧತೆಗಳನ್ನು ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಮಾಡಿಕೊಂಡಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.