ಶುಕ್ರವಾರ, ಅಕ್ಟೋಬರ್ 22, 2021
21 °C
ಓದುವ ಹವ್ಯಾಸ ಬೆಳೆಸಲು ಪೂರಕ

ಗುಬ್ಬಿ: ಮಕ್ಕಳ ಸ್ನೇಹಿ ಕಲಿಕಾ ಕೇಂದ್ರ ಉದ್ಘಾಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗುಬ್ಬಿ: ‘ಮಕ್ಕಳಲ್ಲಿ ಓದುವ ಹವ್ಯಾಸ ಹಾಗೂ ಯುವಕರಿಗೆ ವೃತ್ತಿ ಮಾರ್ಗದರ್ಶನ ನೀಡುವ ಉದ್ದೇಶದಿಂದ ಗ್ರಾಮ ಪಂಚಾಯಿತಿಯ ಗ್ರಂಥಾಲಯಗಳಲ್ಲಿ ಮಕ್ಕಳ ಸ್ನೇಹಿ ಕಲಿಕಾ ಕೇಂದ್ರಗಳನ್ನು ತೆರೆಯಲಾಗುತ್ತಿದೆ’ ಎಂದು ಇಂಡಿಯಾ ಲಿಟರಸಿ ಪ್ರಾಜೆಕ್ಟ್‌ನ ಟ್ರಸ್ಟಿ ಸುಚಿತ್ರ ರಾವ್ ತಿಳಿಸಿದರು.

ಕಡಬ ಹೋಬಳಿ ಬೆಲವತ್ತ ಗ್ರಾಮ ಪಂಚಾಯಿತಿ ಗ್ರಂಥಾಲಯದಲ್ಲಿ ಮಕ್ಕಳ ಸ್ನೇಹಿ ಕಲಿಕಾ ಕೇಂದ್ರ ಉದ್ಘಾಟಿಸಿ ಮಾತನಾಡಿದರು.

ಸಂಸ್ಥೆಯು ತಾಲ್ಲೂಕಿನ ಹತ್ತು ಗ್ರಾಮ ಪಂಚಾಯಿತಿ ಗ್ರಂಥಾಲಯಗಳಲ್ಲಿ ಮಕ್ಕಳ ಕಲಿಕಾ ಕೇಂದ್ರಗಳನ್ನು ತೆರೆಯುತ್ತಿದೆ. ಇಲ್ಲಿ ಮಕ್ಕಳನ್ನು ಆಕರ್ಷಿಸಲು ಗೋಡೆಗಳಿಗೆ ಚಿತ್ರಕಲೆ ಹಾಗೂ ಓದುವ ಹವ್ಯಾಸವನ್ನು ಬೆಳಸಿಕೊಳ್ಳಲು ಅನುಕೂಲವಾಗುವ ಪುಸ್ತಕಗಳನ್ನು ಇಡಲಾಗುತ್ತದೆ. ಯುವಕರಿಗೆ ಉನ್ನತ ಶಿಕ್ಷಣ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಿರುವ ಮಾಹಿತಿ ನೀಡುವ ಉದ್ದೇಶವನ್ನು ಸಂಸ್ಥೆ ಹೊಂದಿದೆ. ಇದರ ಯಶಸ್ಸು ಗಮನಿಸಿ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿಯೇ ಇದನ್ನು ವಿಸ್ತರಿಸಲಾಗುವುದು ಎಂದು ಹೇಳಿದರು.

ಕರ್ನಾಟಕ ಪಂಚಾಯತ್ ರಾಜ್ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಕಾಡಶೆಟ್ಟಿಹಳ್ಳಿ ಸತೀಶ್ ಮಾತನಾಡಿ, ಕೋವಿಡ್‌ನಿಂದಾಗಿ ಮಕ್ಕಳಲ್ಲಿ ಶೈಕ್ಷಣಿಕ ಚಟುವಟಿಕೆ ಹಿಂದುಳಿದಿದೆ. ಮಕ್ಕಳು ಮೊಬೈಲ್‌, ಟ್ಯಾಬ್‌ಗಳ ಮೊರೆಹೋಗಿದ್ದಾರೆ. ಅವರಲ್ಲಿ ಓದಿನ ಆಸಕ್ತಿ ಮೂಡಿಸಲು ಇಂತಹ ಗ್ರಂಥಾಲಯಗಳ ಅಗತ್ಯವಿದೆ ಎಂದರು.

ಯುಎಸ್‌ಟಿ ಗ್ಲೋಬಲ್ ಪ್ರೋಗ್ರಾಂ ವ್ಯವಸ್ಥಾಪಕ ಸ್ಮಿತಾಶರ್ಮ ಮಾತನಾಡಿ, ಕಲಿಕಾ ಕೇಂದ್ರಗಳಿಂದ ಮಕ್ಕಳ ಬೌದ್ಧಿಕ ಮಟ್ಟ ಸುಧಾರಣೆಗೊಳ್ಳುವುದರ ಜೊತೆಗೆ ಓದಿನ ಬಗ್ಗೆ ಆಸಕ್ತಿ ಮೂಡಿಸಲು ಸಾಧ್ಯವಾಗುತ್ತದೆ. ಇದನ್ನು ಸಮುದಾಯದತ್ತ ಕಾರ್ಯಕ್ರಮವಾಗಿಸಲು ಸಂಸ್ಥೆಯು ಸಂಪೂರ್ಣವಾಗಿ ಸಹಕರಿಸುವುದು ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪಕಲಾ ಮಾತನಾಡಿ, ಐಎಲ್‌ಸಿ ಸಂಸ್ಥೆಯವರು ಮಕ್ಕಳ ಸ್ನೇಹಿ ಕಲಿಕಾ ಕೇಂದ್ರ ಸ್ಥಾಪನೆಗೆ ಮುಂದಾಗಿರುವುದು ಸಂತೋಷಕರ. ಇದಕ್ಕೆ ಗ್ರಾಮ ಪಂಚಾಯಿತಿಯಿಂದ ಸಾಧ್ಯವಿರುವ ಎಲ್ಲ ಸಹಕಾರ ನೀಡಲಾಗುವುದು
ಎಂದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಜಯಮ್ಮ, ಜಿಲ್ಲಾ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕರಾದ ಸರೋಜಮ್ಮ, ಗುಬ್ಬಿ ಗ್ರಂಥಾಲಯದ ಸಹಾಯಕರಾದ ರಾಜಲಕ್ಷ್ಮಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದೇವಕಿ, ಐಎಲ್‌ಪಿ ಸಂಸ್ಥೆಯ ಹರೀಶ್, ವಿಕ್ರಂ, ರವಿ ಮಣಿ, ಗ್ರಾಮ ಪಂಚಾಯಿತಿ ಸದಸ್ಯರು, ಗ್ರಂಥಾಲಯದ ಸಿಬ್ಬಂದಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು