ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಣಿಗಲ್: ಹಳ್ಳ ಹಿಡಿದ ಮೀಟರ್ ಅಳವಡಿಕೆ

2,100 ಮೀಟರ್ ಅಳವಡಿಕೆ ಮಾಡಿ ಮೂರು ವರ್ಷ ಕಳೆದರೂ ತಲೆ ಕೆಡಿಸಿಕೊಳ್ಳದ ಅಧಿಕಾರಿಗಳು
Last Updated 17 ಫೆಬ್ರುವರಿ 2021, 3:03 IST
ಅಕ್ಷರ ಗಾತ್ರ

ಕುಣಿಗಲ್: ಪುರಸಭೆಯಲ್ಲಿ ನೀರಿನ ವಿತರಣೆ ವ್ಯವಸ್ಥೆಯಲ್ಲಿನ ಲೆಕ್ಕಾಚಾರ ಹಲವಾರು ವರ್ಷಗಳಿಂದ ತಾಳೆಯಾಗದಿದ್ದರೂ, ₹71ಲಕ್ಷ ವೆಚ್ಚದಲ್ಲಿ ನಲ್ಲಿಗಳಿಗೆ ಅವೈಜ್ಞಾನಿಕವಾಗಿ ಮೀಟರ್ ಅಳವಡಿಕೆ ಮಾಡುತ್ತಿದ್ದಾರೆ ಎಂದು ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪಟ್ಟಣದ 23 ವಾರ್ಡ್‌ಗಳಿಗೆ ನೀರನ್ನು ವಿತರಿಸಲು 100ಕ್ಕೂ ಹೆಚ್ಚು ಕೊಳವೆ ಬಾವಿ ಸೇರಿದಂತೆ ದೊಡ್ಡಕೆರೆಯ ಹೇಮಾವತಿ ನೀರನ್ನು ಬಳಸಿಕೊಳ್ಳಲಾಗುತ್ತಿದೆ. ಲಭ್ಯವಿರುವ ನೀರನ್ನು ವ್ಯವಸ್ಥಿತವಾಗಿ ಹಂಚಿದರೆ ಪಟ್ಟಣದಲ್ಲಿ ನೀರಿನ ಕೊರತೆ ಇಲ್ಲ, ವಿತರಣ ವ್ಯವಸ್ಥೆಯ ದೋಷದಿಂದಾಗಿ ನಿರಂತರವಾಗಿ ನೀರಿನ ಸಮಸ್ಯೆ ಉಂಟಾಗುತ್ತಿದೆ.

ಬಿದನಗೆರೆಯ ಮಲ್ಲಾ ಘಟ್ಟಾ, ಉಪ್ಪಾರ ಬೀದಿ, ರಮಣ ಬ್ಲಾಕ್ ಮತ್ತು ಕುವೆಂಪು ನಗರದ ಕೆಲವೆಡೆಗಳಲ್ಲಿ 2,100 ನೀರಿನ ಮೀಟರ್ ಅಳವಡಿಸಿ ಮೂರು ವರ್ಷ ಕಳೆದಿದ್ದರೂ, ಮೀಟರ್ ಅಳವಡಿಕೆಯ ಉದ್ದೇಶ ಸಫಲವಾಗಿಲ್ಲ. ಗುತ್ತಿಗೆದಾರರು ₹36 ಲಕ್ಷ ಬಿಲ್ ಪಡೆದು ಮೀಟರ್ ಅಳವಡಿಸಿ ಕೈತೊಳೆದುಕೊಂಡಿದ್ದಾರೆ. ನಲ್ಲಿ ಸಂಪರ್ಕ ಪಡೆದಿರುವವರು, ಮೀಟರ್ ಅಳವಡಿಕೆಯಾಗಿದ್ದರೂ ಮೀಟರ್ ದರದಂತೆ ನೀರಿನ ತೆರಿಗೆ ಪಡೆಯಲು ಪುರಸಭೆಯಿಂದ ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ರಮಣ ಬ್ಲಾಕ್ ನಿವಾಸಿ ಪ್ರಸಾದ್‌ ಆರೋಪಿಸಿದ್ದಾರೆ.

ಜಿಲ್ಲಾ ಬಿಜೆಪಿ ಘಟಕದ ಉಪಾಧ್ಯಕ್ಷ ಕೆ. ರಮೇಶ್ ಪ್ರತಿಕ್ರಿಯಿಸಿ, ಪುರಸಭೆಯಲ್ಲಿನ ಅಧಿಕೃತ ಮನೆ ಮತ್ತು ವಾಣಿಜ್ಯ ಬಳಕೆಯ ಕೊಳಾಯಿಗಳ ಸಂಖ್ಯೆ ಬಗ್ಗೆ ನಿಖರವಾದ ಮಾಹಿತಿ ಇಲ್ಲ. ಅನಧಿಕೃತ ಕೊಳಾಯಿ ಸಂಪರ್ಕದ ಬಗ್ಗೆ ಅಧಿಕಾರಿಗಳು ತಲೆ ಕೆಡಿಸಿಕೊಳ್ಳದ ಕಾರಣ ಪುರಸಭೆ ಆದಾಯ ಕಡಿಮೆಯಾಗುತ್ತಿದೆ. ಈಗಾಗಲೇ ಮೀಟರ್ ಅಳವಡಿಕೆ ಗುತ್ತಿಗೆ ಪಡೆದಿರುವ ಗುತ್ತಿಗೆದಾರ ಅವೈಜ್ಞಾನಿಕವಾಗಿ ಎಲ್ಲೆಂದರಲ್ಲಿ ಮೀಟರ್ ಅಳವಡಿಸಿ ಸಮಸ್ಯೆ ಸೃಷ್ಟಿಸುತ್ತಿದ್ದಾರೆ. ಮನೆಗಳ ಕೊಳಾಯಿ ಸಂಪರ್ಕದಲ್ಲಿ ಅಳವಡಿಸದೆ ರಸ್ತೆಯ ಮಧ್ಯಭಾಗದಲ್ಲಿ ಅಳವಡಿಸಿದ ಪರಿಣಾಮ ವಾಹನಗಳು ಹರಿದು ಮೀಟರ್ ನಾಶವಾಗಿದೆ ಎಂದು ಆರೋಪಿಸಿದ್ದಾರೆ.

ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಮಂಜುನಾಥ್ ಮಾತನಾಡಿ, ಪಟ್ಟಣದ ಬಿದನಗರೆ, ಮಲ್ಲಾ ಘಟ್ಟ, ರಮಣಬ್ಲಾಕ್ ಮತ್ತು ಉಪ್ಪಾರ ಬೀದಿಗಳಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಕೊಳಾಯಿಗಳಿಗೆ ಮೀಟರ್ ಅಳವಡಿಸಿ ಹೋದವರು ಇದುವರೆಗೂ ಈ ಕಡೆ ತಲೆ ಹಾಕಿಲ್ಲ. ಬಹುತೇಕ ಮೀಟರ್‌ಗಳು ಮಣ್ಣಿನಲ್ಲಿ ಹುದುಗಿ ಹೋಗಿವೆ. ಆಯ್ದ ಕೆಲ ವಾರ್ಡ್‌ಗಳಲ್ಲಿ ಮನಸಿಗೆ ಬಂದಂತೆ ಮೀಟರ್ ಅಳವಡಿಸಲಾಗಿದೆ. ನೀರಿನ ತೆರಿಗೆ ಪಾವತಿಸುತ್ತಿರುವ ನಾಗರಿಕರ ಮನೆಗಳಿಗೆ ಬದಲಾಗಿ ಅನಧಿಕೃತ ಸಂಪರ್ಕದ ಮನೆಗಳಿಗೂ ಮೀಟರ್ ಹಾಕುತ್ತಿದ್ದಾರೆ. ಒಂದೇ ಮನೆಯ ಸಮುಚ್ಛಯಗಳಲ್ಲಿ ಅನೇಕ ಮನೆಗಳಿದ್ದರೂ ಒಂದೇ ಮೀಟರ್ ಅಳವಡಿಕೆ ಮಾಡಲಾಗಿದೆ. ಈರೀತಿಯ ಪ್ರಕರಣಗಳು ಹೆಚ್ಚಾಗಿವೆ ಇದರಿಂದಾಗಿ ಪುರಸಭೆಗೆ ಆರ್ಥಿಕ ಹೊರೆಯೇ ಹೊರತು ಲಾಭವಿಲ್ಲ ಎಂದು ತಿಳಿಸಿದ್ದಾರೆ.

ಪುರಸಭೆ ಅಧಿಕಾರಿಗಳು ಪಟ್ಟಣದಲ್ಲಿರುವ ಮನೆಗಳ ಸಂಖ್ಯೆ, ಕೊಳಯಿ ಸಂಪರ್ಕ ಪಡೆದಿರುವವರ ಪಟ್ಟಿಯನ್ನು ಸಿದ್ಧಪಡಿಸಿ ನಂತರ ಎಲ್ಲ ಮನೆಗಳಿಂದಲೂ ಕಂದಾಯ ಮತ್ತು ನೀರಿನ ಕರಗಳನ್ನು ಸ್ವೀಕರಿಸಿ ಅಧಿಕೃತವಾಗಿ ದಾಖಲೆಗಳನ್ನು ಹೊಂದಲು ಕ್ರಮ ತೆಗೆದುಕೊಳ್ಳಬೇಕಾಗಿದೆ. ಪುರಸಭೆಯಿಂದ ಮೂಲ ಸೌಕರ್ಯಕ್ಕಾಗಿ ಆಗ್ರಹಿಸುವವರು ತೆರಿಗೆ ಪಾವತಿಯೂ ತಮ್ಮ ಕರ್ತವ್ಯ ಎಂದು ಭಾವಿಸಿ ತೆರಿಗೆ ಪಾವತಿಗೆ ಸಿದ್ಧರಾಗಬೇಕಿದೆ ಎಂದು ಹಿರಿಯ ನಾಗರಿಕ ಚಂದ್ರಶೇಖರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT