ತುಮಕೂರು: ಶಾಲಾ ಶಿಕ್ಷಣ ಇಲಾಖೆಯಿಂದ ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಉತ್ತರ ಬಡಾವಣೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವದಲ್ಲಿ ವಿವಿಧ ಶಾಲೆಗಳ ಮಕ್ಕಳು ಭಾಗವಹಿಸಿ ಗಮನ ಸೆಳೆದರು.
ಉತ್ತರ ಬಡಾವಣೆ ಕ್ಲಸ್ಟರ್ ವ್ಯಾಪ್ತಿಯ ಖಾಸಗಿ, ಅನುದಾನಿತ ಮತ್ತು ಸರ್ಕಾರಿ ಶಾಲೆಗಳ ಮಕ್ಕಳು ರಾಷ್ಟ್ರ ನಾಯಕರು, ಪೌರಾಣಿಕ, ಐತಿಹಾಸಿಕ ಪಾತ್ರಗಳ ವೇಷ ಭೂಷಣ ತೊಟ್ಟು ಮಿಂಚಿದರು. ತಮ್ಮ ವಿಭಿನ್ನ, ವಿಶೇಷ ಅಭಿನಯದ ಮೂಲಕ ಮೆಚ್ಚುಗೆ ಪಡೆದರು. ಇದೇ ವೇಳೆ ಜಾನಪದ ಗೀತೆ ಗಾಯನ ನೆರವೇರಿತು. ಮಕ್ಕಳು ವಿವಿಧ ಗೀತೆಗಳಿಗೆ ಹೆಜ್ಜೆ ಹಾಕಿ ನೆರೆದವರ ಚಪ್ಪಾಳೆ ಗಿಟ್ಟಿಸಿದರು.
ಡಯಟ್ ಪ್ರಾಂಶುಪಾಲ ಕೆ.ಮಂಜುನಾಥ ಕಲೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ‘ತೀರ್ಪುಗಾರರು ಮಕ್ಕಳ ಪ್ರತಿಭೆ ಗುರುತಿಸಿ, ಪ್ರೋತ್ಸಾಹಿಸಬೇಕು. ಯಾರಿಗೂ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು. ನೀರಿಗೆ ಯಾವುದೇ ಬಣ್ಣ, ಆಕಾರವಿಲ್ಲ. ಯಾವ ಪಾತ್ರೆಯಲ್ಲಿ ತುಂಬಿಸಿದರೆ ಅದರ ಆಕಾರ ಪಡೆಯುತ್ತದೆ. ಮಕ್ಕಳ ಮನಸ್ಸು ಸಹ ನೀರಿನಂತೆ. ಅವರನ್ನು ತಿದ್ದಿ, ತೀಡಿ ಒಳ್ಳೆಯ ಬಣ್ಣ, ಆಕಾರ ನೀಡುವುದು ಶಿಕ್ಷಕರ ಜವಾಬ್ದಾರಿ’ ಎಂದರು.
ಉತ್ತರ ಬಡಾವಣೆ ಶಾಲೆಯ ಮುಖ್ಯ ಶಿಕ್ಷಕ ಡಿ.ಎಸ್.ಶಿವಸ್ವಾಮಿ, ‘ಇಲಾಖೆಯ ಮಾರ್ಗದರ್ಶನದಲ್ಲಿ ಕ್ಲಸ್ಟರ್ ಮಟ್ಟದ ಸ್ಪರ್ಧೆ ಆಯೋಜಿಸಲಾಗಿದೆ. ಇಲ್ಲಿ ವಿಜೇತರಾದ ಮಕ್ಕಳು ತಾಲ್ಲೂಕು ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾರೆ’ ಎಂದು ತಿಳಿಸಿದರು.
ಉತ್ತರ ಬಡಾವಣೆ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಟಿ.ಓಬಳಯ್ಯ, ಡಯಟ್ ಉಪನ್ಯಾಸಕರಾದ ನಂಜುಂಡಯ್ಯ, ರಂಗರಾಜು, ಕಾಳಿದಾಸ ಪದವಿ ಪೂರ್ವ ಕಾಲೇಜು ಉಪಪ್ರಾಂಶುಪಾಲ ಚಂದ್ರಶೇಖರ್, ಶಿಕ್ಷಕರಾದ ಜಿ.ತಿಮ್ಮೇಗೌಡ, ಸೈಯದ್ ಮೆಹಬೂಬ್ ಷಾಪ, ಕೆ.ಸಿ.ಯಮುನಾ ಇತರರು ಹಾಜರಿದ್ದರು.