ಬುಧವಾರ, ಆಗಸ್ಟ್ 4, 2021
ಜೂನ್ 18ರಂದು ದ್ವಿತೀಯ ಪಿಯುಸಿ ಇಂಗ್ಲಿಷ್ ವಿಷಯ ಪರೀಕ್ಷೆ

ಹೊರ ಜಿಲ್ಲೆ; 678 ಮಂದಿಗೆ ಅವಕಾಶ

ಡಿ.ಎಂ.ಕುರ್ಕೆ ಪ್ರಶಾಂತ್ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಲಾಕ್‌ಡೌನ್ ಕಾರಣದಿಂದ ಬಾಕಿ ಉಳಿದಿರುವ ದ್ವಿತೀಯ ಪಿಯುಸಿ ಇಂಗ್ಲಿಷ್ ವಿಷಯ ಪರೀಕ್ಷೆಯು ಜೂನ್ 18ರಂದು ನಡೆಯಲಿದೆ. ಹೊರ ಜಿಲ್ಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 678 ವಿದ್ಯಾರ್ಥಿಗಳು ಜಿಲ್ಲೆಯಲ್ಲಿ ಪರೀಕ್ಷೆ ಬರೆಯಲು ಹೆಸರು ನೋಂದಾಯಿಸಿಕೊಂಡಿದ್ದಾರೆ. ಅಲ್ಲದೆ ಜಿಲ್ಲೆಯ 326 ವಿದ್ಯಾರ್ಥಿಗಳು ಹೊರ ಜಿಲ್ಲೆಗಳಲ್ಲಿ ಪರೀಕ್ಷೆ ಬರೆಯಲಿದ್ದಾರೆ.

ದ್ವಿತೀಯ ‍ಪಿಯುಸಿ ಪರೀಕ್ಷೆ ನಡೆಯುತ್ತಿದ್ದ ವೇಳೆಯೇ ಲಾಕ್‌ಡೌನ್ ಘೋಷಣೆ ಆಯಿತು. ಆಗ ಇಂಗ್ಲಿಷ್ ವಿಷಯ ಬಾಕಿ ಉಳಿಯಿತು. ವಿದ್ಯಾರ್ಥಿಗಳು ಮನೆಗಳತ್ತ ಮುಖ ಮಾಡಿದರು. ಹೀಗೆ ಮನೆಗಳಿಗೆ ಬಂದಿರುವ ವಿದ್ಯಾರ್ಥಿಗಳು ತಮಗೆ ಹತ್ತಿರವಿರುವ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲು ಪದವಿ ಪೂರ್ವ ಶಿಕ್ಷಣ ಇಲಾಖೆ ಅವಕಾಶ ಮಾಡಿಕೊಟ್ಟಿದೆ.

ದಕ್ಷಿಣ ಕನ್ನಡ, ಮಂಗಳೂರು, ಬೆಂಗಳೂರು ಹೀಗೆ ರಾಜ್ಯದ ನಾನಾ ಕಡೆಗಳಲ್ಲಿ ಜಿಲ್ಲೆಯ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ. ಲಾಕ್‌ಡೌನ್ ಸಂದರ್ಭದಲ್ಲಿ ಮನೆಗಳಿಗೆ ಮರಳಿದ್ದಾರೆ. ಇಂತಹವರು ಜಿಲ್ಲೆಯ ಪರೀಕ್ಷಾ ಕೇಂದ್ರಗಳಲ್ಲಿಯೇ ಪರೀಕ್ಷೆ ಬರೆಯಲು ಮುಂದಾಗಿದ್ದಾರೆ. ಅಲ್ಲದೆ ಹೊರ ಜಿಲ್ಲೆಗಳಿಂದ ಬಂದು ಕಲ್ಪತರು ನಾಡಿನಲ್ಲಿ ವ್ಯಾಸಂಗ ಮಾಡುತ್ತಿರುವವರು ಸಹ ತಮ್ಮ ಸ್ವಗ್ರಾಮಗಳಿಗೆ ಮರಳಿದ್ದಾರೆ. ಅಂತಹವರು ಸಮೀಪದ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲು ಮನಸ್ಸು ಮಾಡಿದ್ದಾರೆ.

ಇಂತಹ ವಿದ್ಯಾರ್ಥಿಗಳು ಈಗಾಗಲೇ ತಮ್ಮ ಕಾಲೇಜಿನ ಪ್ರಾಂಶುಪಾಲರಿಗೆ ನಾವು ಇಂತಹ ಕೇಂದ್ರದಲ್ಲಿ ಪರೀಕ್ಷೆ ಬರೆಯುತ್ತೇವೆ ಎಂದು ಅರ್ಜಿ ಸಹ ಸಲ್ಲಿಸಿದ್ದರು. ಈ ಅರ್ಜಿಗಳನ್ನು ರಾಜ್ಯ ಪದವಿ ಪೂರ್ವ ಶಿಕ್ಷಣ ಮಂಡಳಿಗೆ ಕಳುಹಿಸಿಕೊಡಲಾಗಿತ್ತು. ಅಲ್ಲಿಂದಲೇ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಗಳು ನಿಗದಿಯಾಗಿವೆ.

ತುಮಕೂರಿನಲ್ಲಿ 12, ಕೊರಟಗೆರೆಯಲ್ಲಿ 1, ತಿಪಟೂರು, ಶಿರಾ, ಪಾವಗಡ, ಕುಣಿಗಲ್, ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ತಲಾ 3, ಗುಬ್ಬಿ, ತುರುವೇಕೆರೆ, ಮಧುಗಿರಿ ತಾಲ್ಲೂಕಿನಲ್ಲಿ ತಲಾ 2 ಪರೀಕ್ಷಾ ಕೇಂದ್ರಗಳು ಕಾರ್ಯನಿರ್ವಹಿಸಲಿವೆ.

ನಗರದ ಬೆರೆಳೆಣಿಕೆಯ ಪರೀಕ್ಷಾ ಕೇಂದ್ರಗಳಲ್ಲಿ ಡೆಸ್ಕ್‌ಗಳನ್ನು ಸ್ವಚ್ಛಗೊಳಿಸಲಾಗಿದೆ. ಉಳಿದಂತೆ ನೋಂದಣಿ ಸಂಖ್ಯೆ ನಮೂದು ಇತ್ಯಾದಿ ಕೆಲಸಗಳು ಜೂನ್ 16ರಿಂದ ನಡೆಯುತ್ತವೆ ಎಂದು ಇಲಾಖೆ ಮೂಲಗಳು ಮಾಹಿತಿ ನೀಡುತ್ತವೆ. ಪರೀಕ್ಷಾ ಕೊಠಡಿಗಳಿಗೆ ಔಷಧಿ ಸಿಂಪಡಿಸುವಂತೆ ಸ್ಥಳೀಯ ಆಡಳಿತ, ಆರೋಗ್ಯ ಇಲಾಖೆಗೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.

ಪ್ರತಿ ವಿದ್ಯಾರ್ಥಿಯನ್ನು ದೂರವಾಣಿ ಮೂಲಕ ಸಂಪರ್ಕಿಸಿ ಪರೀಕ್ಷಾ ದಿನಾಂಕ, ಸಮಯ ತಿಳಿಸಬೇಕು. ಪರೀಕ್ಷಾ ಕೇಂದ್ರಕ್ಕೆ 1 ಗಂಟೆ ಮುಂಚಿತವಾಗಿ ಹಾಜರಿರಬೇಕು. ಮಾಸ್ಕ್ ಧರಿಸಬೇಕು, ಅಂತರ ಕಾಯ್ದುಕೊಳ್ಳಬೇಕು. ವಿದ್ಯಾರ್ಥಿಗಳು ಮನೆಯಿಂದಲೇ ನೀರಿನ ಬಾಟಲಿ ತರಬೇಕು– ಹೀಗೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಜಿಲ್ಲಾ ಪದವಿ ಪೂರ್ವ ಇಲಾಖೆ ನಿರ್ದೇಶಕರು ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರು ಹಾಗೂ ಕಾಲೇಜುಗಳ ಪ್ರಾಂಶುಪಾಲರಿಗೆ ನಿರ್ದೇಶನ ನೀಡಿದ್ದಾರೆ.

ವಿದ್ಯಾರ್ಥಿಗಳ ನಡುವೆ ಅಂತರ ಕಾಯ್ದುಕೊಳ್ಳಬೇಕಾದ ಕಾರಣ ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಸರಾಸರಿ 8ರಿಂದ 10 ಕೊಠಡಿಗಳು ಹೆಚ್ಚುವರಿಯಾಗಿ ಅಗತ್ಯ ಇದೆ. ಎರಡು ಕೊಠಡಿಗಳನ್ನು ಹೆಚ್ಚುವರಿಯಾಗಿ ಮೀಸಲಿಡಬೇಕು. ಈ ವಿಚಾರವಾಗಿ ಈಗಾಗಲೇ ಕ್ರಮ ವಹಿಸಲಾಗಿದೆ ಎಂದು ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡುವರು.

ಬಸ್ ವ್ಯವಸ್ಥೆ

ಪ್ರತಿ ತಾಲ್ಲೂಕಿಗೆ ಎರಡರಂತೆ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಈಗಾಗಲೇ ರೂಟ್ ಮ್ಯಾಪ್‌ ಅನ್ನು ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆ ನೀಡಿದೆ. ಜತೆಗೆ ತುಮಕೂರು ಹೊರವಲಯದ ಹಳ್ಳಿಗಳಿಗೂ ಬಸ್ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ವಿದ್ಯಾರ್ಥಿಗಳು ಪರೀಕ್ಷಾ ಪ್ರವೇಶ ಪತ್ರ (ಆಲ್ ಟಿಕೆಟ್) ತೋರಿಸಿ ಉಚಿತವಾಗಿ ಪ್ರಯಾಣಿಸಬಹುದು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು