ತಿಪಟೂರು: ಉಂಡೆ ಕೊಬ್ಬರಿ ಕ್ವಿಂಟಲ್‌ಗೆ ₹25 ಸಾವಿರ ನೀಡುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಅರಸೀಕೆರೆಯಿಂದ ವಿಧಾನಸೌಧದವರೆಗೆ ನಡೆಯುತ್ತಿರುವ ಪ್ರತಿಭಟನಾ ಮೆರವಣಿಗೆ ಬುಧವಾರ ತಿಪಟೂರು ಮೂಲಕ ಹಾದು ಹೋಯಿತು.
ನಗರದ ಸಿಂಗ್ರಿ ನಂಜಪ್ಪ ವೃತ್ತದಲ್ಲಿ ಪ್ರತಿಭಟನೆಕಾರರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ರೈತರಿಗೆ ಅವಮಾನವಾಗುವಂತೆ ಕೊಬ್ಬರಿ ಬೆಲೆ ನಿಗದಿ ಮಾಡುತ್ತಿದ್ದರೂ ರೈತರು ಸುಮ್ಮನಿರುವುದು ಆಶ್ಚರ್ಯ ಮೂಡಿಸಿದೆ. ಕಾವೇರಿ ನೀರಿನ ವಿಚಾರ ಬಂದಾಗ ರಾಜ್ಯದಲ್ಲಿ ಎಲ್ಲರೂ ಬೀದಿಗಿಳಿದು ಮಾತನಾಡುತ್ತಾರೆ. ಅದರಂತೆಯೇ ಕೊಬ್ಬರಿ ಬೆಲೆ ವಿಚಾರದಲ್ಲಿ ಮಾತನಾಡದಿರುವುದು ಬೇಸರ ಮೂಡಿಸಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚುನಾವಣೆ ಪೂರ್ವದಲ್ಲಿ ಕ್ವಿಂಟಲ್ ಕೊಬ್ಬರಿಗೆ ₹15 ಸಾವಿರ ನಿಗದಿ ಮಾಡುವ ಭರವಸೆ ನೀಡಿದ್ದರು. ಆದರೆ ಸರ್ಕಾರ ರಚನೆ ನಂತರ ಭರವಸೆ ಹುಸಿಯಾಗಿದೆ ಎಂದರು.
ಜೆಡಿಎಸ್ ಮುಖಂಡ ಕೆ.ಟಿ.ಶಾಂತಕುಮಾರ್ ಮಾತನಾಡಿ, ರೈತರು ಹಿಂದಿನಿಂದಲೂ ಹೋರಾಟದ ಮೂಲಕವೇ ಎಲ್ಲವನ್ನು ಪಡೆದುಕೊಂಡು ಬರುತ್ತಿದ್ದಾರೆ. ಕೊಬ್ಬರಿ ಬೆಲೆಗೆ ಹಲವು ಬಾರಿ ಪ್ರತಿಭಟನೆ ನಡೆಯುತ್ತಾ ಬಂದಿವೆ. ಆದರೂ ಸರ್ಕಾರಗಳಿಗೆ ರೈತರ ಬಗ್ಗೆ ಕಾಳಜಿ ಇಲ್ಲದಂತಾಗಿದೆ. ಕೇಂದ್ರ ಸರ್ಕಾರ ನಾಫೆಡ್ ಮೂಲಕ ಕೊಬ್ಬರಿ ಖರೀದಿ ಮಾಡಿದ ಕೊಬ್ಬರಿಗೆ ರಾಜ್ಯಸರ್ಕಾರ ಪ್ರೋತ್ಸಾಹ ಬೆಲೆ ನೀಡುವ ಯೋಜನೆ ಹುಸಿಯಾಗಿದೆ. ಕೊಬ್ಬರಿಗೆ ₹25 ಸಾವಿರ ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು. ಬೆಲೆ ಏರಿಕೆ ಮಾಡದಿದ್ದರೆ ವಿಧಾನಸೌಧ ಮುತ್ತಿಗೆ ಹಾಕಲಾಗುವುದು ಎಂದು ಹೇಳಿದರು.
ತಹಶೀಲ್ದಾರ್ ಪವನ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು. ಕೆಂಕೆರೆ ಸತೀಶ್, ಧನಂಜಯ ಆರಾಧ್ಯ, ತಾಳಕೆರೆ ನಾಗೇಂದ್ರ, ಬಸ್ತಿಹಳ್ಳಿ ರಾಜಣ್ಣ, ಪ್ರಕಾಶ್ ತುರುವೇಕೆರೆ, ಸಂಪಿಗೆ ಕೀರ್ತಿ, ಮಲ್ಲಿಕಾರ್ಜುನ ಚಿಕ್ಕನಾಯಕನಹಳ್ಳಿ, ಎಡೆಹಳ್ಳಿ ಶಿವಲಿಂಗಯ್ಯ, ತಿಮ್ಲಾಪುರ ಉಮಾಶಂಕರ್, ಭೈರಾಪುರ ಸ್ವಾಮಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.