ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಬಾಲನ್ ವರ್ಗಕ್ಕೆ ಚಿತಾವಣೆ?

ನಗರದಲ್ಲಿ ಕೈಗೊಂಡ ಸುಧಾರಣಾ ಕ್ರಮಗಳಿಂದ ಜನ ಮೆಚ್ಚುಗೆ ಪಡೆದ ಅಧಿಕಾರಿ
Last Updated 21 ಮೇ 2019, 20:01 IST
ಅಕ್ಷರ ಗಾತ್ರ

ತುಮಕೂರು: ಮಹಾನಗರ ಪಾಲಿಕೆ ಆಯುಕ್ತ ಟಿ.ಭೂಬಾಲನ್ ಅವರನ್ನು ಚುನಾವಣೆಯ ನೀತಿ ಸಂಹಿತೆ ತೆರವಾದ ನಂತರ ವರ್ಗಾವಣೆ ಮಾಡಲಾಗುತ್ತದೆ ಎನ್ನುವ ಗುಸು ಗುಸು ಸುದ್ದಿ ನಗರದಲ್ಲಿ ಮತ್ತು ಪಾಲಿಕೆ ಆವರಣದಲ್ಲಿ ವ್ಯಾಪಕವಾಗಿ ಕೇಳಿ ಬರುತ್ತಿದೆ.

ಭೂಬಾಲನ್ ಪಾಲಿಕೆ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ದಿನದಿಂದ ದಿಟ್ಟ ಕ್ರಮಗಳ ಮೂಲಕ ನಗರದ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಪಾಲಿಕೆಯ ಆದಾಯ ಸೋರಿಕೆ ತಡೆಗಟ್ಟಿದ್ದಾರೆ. ನಗರದಲ್ಲಿನ 21 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಪಾಲಿಕೆಯ ಸುಪರ್ದಿಗೆ ಪಡೆಯುವ ಮೂಲಕ ದಿಟ್ಟ ಕ್ರಮ ಕೈಗೊಂಡಿದ್ದರು. ಈ ಘಟಕಗಳಿಂದ ಸಂಗ್ರಹವಾಗುವ ಹಣವು ಪಾಲಿಕೆಗೆ ಸೇರದೆ ಕೆಲವೇ ಮಂದಿ ಪ್ರಭಾವಿಗಳ ಪಾಲಾಗುತ್ತಿತ್ತು.

ಒಂದು ವಾರ್ಡ್‌ನ ಪೌರಕಾರ್ಮಿಕರನ್ನು ಮತ್ತೊಂದು ವಾರ್ಡ್‌ಗೆ ನೇಮಿಸುವ ನಿರ್ಧಾರಕ್ಕೂ ಬಂದಿದ್ದರು. ಇದಕ್ಕೆ ಕೆಲ ವಾರ್ಡ್ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರು. ಹೀಗೆ ವಿವಿಧ ರೀತಿಯಲ್ಲಿ ಆಡಳಿತದಲ್ಲಿ ಬಿಗುವನ್ನು ತರುತ್ತಿದ್ದರು. ನಗರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಅವರು ಕೈಗೊಳ್ಳುತ್ತಿದ್ದ ಕಠಿಣ ನಿರ್ಧಾರಗಳನ್ನು ಅರಗಿಸಿಕೊಳ್ಳುವುದು ಕೆಲವು ಸದಸ್ಯರಿಗೆ ಕಷ್ಟವಾಗಿದೆ. ಅವರನ್ನು ವರ್ಗಾವಣೆ ಮಾಡಬೇಕು ಎಂದು ಸಚಿವರೊಬ್ಬರ ಮೂಲಕ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ ಎನ್ನುವ ಮಾತುಗಳು ಪಾಲಿಕೆ ಆವರಣದಲ್ಲಿ ವ್ಯಾಪಕವಾಗಿವೆ.

ಕೆಲವು ಕಾರ್ಪೊರೇಟರ್‌ಗಳಿಗೆ ಭೂಬಾಲನ್ ನುಂಗಲಾರದ ತುತ್ತಾಗಿದ್ದಾರೆ. ಅವರ ದಿಟ್ಟ ಕ್ರಮಗಳಿಂದ ಕಂಗಾಲಾಗಿದ್ದಾರೆ. ಆ ಕಾರಣಕ್ಕೆ ವರ್ಗಾವಣೆಗೆ ತಮ್ಮ ಪ್ರಭಾವ ಬಳಸುತ್ತಿದ್ದಾರೆ ಎನಿಸುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಪರಮೇಶ್ವರ ಅಭ್ಯರ್ಥಿ: ‘ನನಗೂ ವರ್ಗಾವಣೆಯ ವದಂತಿಗಳು ಬರುತ್ತಿವೆ. ಆದರೆ ಯಾವುದೇ ಕಾರಣಕ್ಕೂ ವರ್ಗಾವಣೆ ಮಾಡಬಾರದು ಎಂದು ನಾವು ಒತ್ತಾಯಿಸುತ್ತೇವೆ. ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರೇ ಭೂಬಾಲನ್ ಅವರನ್ನು ಇಲ್ಲಿಗೆ ಕರೆ ತಂದಿದ್ದಾರೆ. ಆಯುಕ್ತರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ವರ್ಗಾವಣೆ ಮಾಡಲು ಮುಂದಾದರೆ ಸಾಹೇಬರ (ಪರಮೇಶ್ವರ) ಜೊತೆ ನಾವು ಮಾತನಾಡುತ್ತೇವೆ. ಇಲ್ಲಿಯೇ ಉಳಿಸಿಕೊಳ್ಳುತ್ತೇವೆ’ ಎನ್ನುವರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ.

ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಹಲವು ತಿಂಗಳ ಹಿಂದೆ ನಗರದಲ್ಲಿ ನಡೆಸಿದ ಸಭೆಯ ವೇಳೆ ಭೂಬಾಲನ್ ಕಾರ್ಯಕ್ಕೆ ಮಾಧ್ಯಮದವರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ದೀರ್ಘ ಕಾಲ ಇವರನ್ನು ಇಲ್ಲಿಯೇ ಉಳಿಸಿ. ನಗರದ ಸುಧಾರಣೆ ಸಾಧ್ಯ ಎಂದಿದ್ದರು. ಆಗ ಸಚಿವರು ‘ಜನ ಮೆಚ್ಚುವ ಅಧಿಕಾರಿಯನ್ನು ವರ್ಗಾವಣೆ ಮಾಡುವುದಿಲ್ಲ’ ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT