ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬ್ಬು ಬೆಲೆ ನಿಗದಿಗೆ ಆಸ್ಟ್ರೇಲಿಯಾ ಮಾದರಿ

ಅಕ್ಷರ ಗಾತ್ರ

ಕಬ್ಬು ನೈಸರ್ಗಿಕವಾಗಿ ಸಿಹಿಯಾಗಿದ್ದರೂ ರೈತರಿಗೆ, ಸಕ್ಕರೆ ಕಾರ್ಖಾನೆಗಳಿಗೆ ಹಾಗೂ ಸರ್ಕಾರಗಳಿಗೆ ಮಾತ್ರ ಕಹಿಯಾಗಿಯೇ ಮುಂದುವರೆದಿದೆ ಎಂದರೆ ತಪ್ಪಲ್ಲ.

ದೇಶದಲ್ಲಿ ಕಬ್ಬಿನ ಬೆಲೆಯ ನಿಗದಿಗಾಗಿ ಹೋರಾಟಗಳು ಪ್ರತೀವರ್ಷ ನಡೆಯುವುದು ಸರ್ವೆ ಸಾಮಾನ್ಯವಾಗಿದೆ. ಭವಿಷ್ಯದಲ್ಲಿನ ಕಾರ್ಖಾನೆಯ ಉತ್ಪನ್ನಗಳ ಅಸ್ಥಿರವಾದ ಬೆಲೆಗಳ ಆಧಾರದ ಮೇಲೆ ಪ್ರತಿವರ್ಷ ಕೇಂದ್ರ ಸರಕಾರವು ನಿಗದಿಪಡಿಸುತ್ತಿರುವ ಖರೀದಿ ದರಕ್ಕೆ ಮತ್ತು ರಾಜ್ಯ ಸರಕಾರವು ನಿಗದಿಪಡಿಸುತ್ತಿರುವ ಬೆಂಬಲ ಬೆಲೆಗೆ ರೈತರು ಮತ್ತು ಸಕ್ಕರೆ ಕಾರ್ಖಾನೆಗಳು ಒಪ್ಪುತ್ತಿಲ್ಲ. ಹೀಗಾಗಿ ಪ್ರತೀವರ್ಷ ಕಬ್ಬು ಬೆಲೆಯ ನಿಗದಿಗಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ರೈತ ಹಾಗೂ ಸಕ್ಕರೆ ಕಾರ್ಖಾನೆಗಳೊಂದಿಗೆ ಸಂಘರ್ಷ ನಡೆಸುತ್ತಲೇ ಇರುತ್ತವೆ.

ಈ ಸಮಸ್ಯೆಯ ಸರಳ, ಸುಲಭ ಮತ್ತು ಶಾಶ್ವತ ಮಾರ್ಗೋಪಾಯ ಕಂಡುಕೊಳ್ಳಲು ಆರ್ಥಿಕ ತಜ್ಞ ಡಾ. ಸಿ.ರಂಗರಾಜನ್‍ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರವು ಸಮಿತಿಯೊಂದನ್ನು ರಚಿಸಿತ್ತು. ಸಮಿತಿಯು  ಕಬ್ಬು ಬೆಳೆಗಾರರ ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರ ಸಮಸ್ಯೆ, ಖರ್ಚು ಹಾಗು ಆದಾಯದ ಮೂಲಗಳನ್ನು ಅಭ್ಯಾಸ ಮಾಡಿ  2013ರಲ್ಲಿಯೇ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದೆ.

ಈ ವರದಿಯ ಶಿಫಾರಸಿನಂತೆ ಕಬ್ಬು ಬೆಳೆಗಾರರಿಗೆ ಹಾಗೂ ಸಕ್ಕರೆ ಕಾರ್ಖಾನೆ ಮಾಲಿಕರಿಗೆ ಅನುಕ್ರಮವಾಗಿ 30:70 ರ ಅನುಪಾತದಂತೆ ಒಟ್ಟು ಆದಾಯದ ವರಮಾನ ಹಂಚಿಕೆಯನ್ನು ನಿಗದಿಪಡಿಸಲಾಗಿತ್ತು. ಈ ವರದಿಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರವು, ಪ್ರತಿಯೊಂದು ರಾಜ್ಯಗಳಲ್ಲಿ  ರೈತ ಮತ್ತು ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳನ್ನೊಳಗೊಂಡ ಕಬ್ಬು ನಿಯಂತ್ರಣಾ ಮಂಡಳಿ ರಚಿಸಿದೆ. ಇದರಿಂದಾಗಿ ಹಲವಾರು ವರ್ಷಗಳಿಂದ ಸಮಸ್ಯೆಯಾಗಿ ಕಾಡುತ್ತಿದ್ದ  ಕಬ್ಬು ಬೆಲೆ ನಿಗದಿ ಬಿಕ್ಕಟ್ಟನ್ನು ಶಾಶ್ವತವಾಗಿ ದೂರವಾಗಲಿದೆ ಎಂದು ಸರ್ಕಾರಗಳು, ರೈತರು ಮತ್ತು ಸಕ್ಕರೆ ಕಾರ್ಖಾನೆಗಳು ನಿಟ್ಟುಸಿರು ಬಿಟ್ಟಿದ್ದವು.

ನಿಯಮಾನುಸಾರ ಈ ಮಂಡಳಿಯ ಸಭೆಗಳು ಸರ್ಕಾರದ ಮಧ್ಯಸ್ಥಿಕೆಯಲ್ಲಿ ಪ್ರಾರಂಭವಾದವು. ಆದರೆ ಈ ಕಬ್ಬು ನಿಯಂತ್ರಣಾ ಮಂಡಳಿಯ ಸಭೆಯಲ್ಲಿ ಚರ್ಚಿಸಿ ನಿರ್ಧರಿಸಿದ ಬಹುತೇಕ ನಿರ್ಣಯಗಳು ವಿವಾದಕ್ಕೆ ಎಡೆಮಾಡಿಕೊಟ್ಟಿದ್ದವು. ಇದರಿಂದಾಗಿ ರೈತ, ಕಾರ್ಖಾನೆ ಹಾಗೂ ಸರ್ಕಾರಗಳ ಮಧ್ಯೆ ತಲೆದೋರಿದ ಈ ಕಬ್ಬು ಬೆಲೆ ನಿಗದಿಯ ಬಿಕ್ಕಟ್ಟು ದಿನದಿಂದ ದಿನಕ್ಕೆ ಮತ್ತಷ್ಟು ಬಿಗಡಾಯಿಸಲಾರಂಭಿಸಿತು.

ಈ ಕಬ್ಬು ನಿಯಂತ್ರಣಾ ಮಂಡಳಿಯಲ್ಲಿನ ನಿರ್ಣಯಗಳು ಅನುಷ್ಠಾನವಾಗದ ಕಾರಣದಿಂದ ಕೆಲವು ಸದಸ್ಯರು ಯಾವ ಪುರುಷಾರ್ಥಕ್ಕೆ ಮಂಡಳಿಯಲ್ಲಿ ಇರಬೇಕು ಎನ್ನುವ ಕಾರಣ ನೀಡಿ ಮಂಡಳಿಗೆ ರಾಜೀನಾಮೆ ಕೊಟ್ಟರು. ಈ ಎಲ್ಲ ಬೆಳವಣಿಗೆಗಳಿಂದ   ಕಬ್ಬು ಬೆಳೆಗಾರರ ಹೋರಾಟಗಳು ಪ್ರತಿವರ್ಷ ಮುಂದುವರೆಯುತ್ತಿವೆ. ಇದರಿಂದ ಸರಕಾರ ಮತ್ತು ಕಾರ್ಖಾನೆ ಮಾಲೀಕರು ಇಕ್ಕಟ್ಟಿಗೆ ಸಿಲುಕಿದ್ದಾರೆ. ಇದರಿಂದಾಗಿ ಈ ಕಬ್ಬು ಬೆಲೆ ನಿಗದಿಯ ಸುಲಭ ಪರಿಹಾರ ಇನ್ನೂ ಮರೀಚಿಕೆಯಾಗಿಯೇ ಮುಂದುವರೆದಿದೆ.

ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ರೈತರಿಗೆ ಮತ್ತು ಸಕ್ಕರೆ ಕಾರ್ಖಾನೆಗಳಿಗೆ ಯಾವುದೇ ರೀತಿಯ ಅನ್ಯಾಯವಾಗದಂತೆ ಯಾವ ಕ್ರಮ ಕೈಗೊಳ್ಳಬೇಕು ಎನ್ನುವುದು ಕೇಂದ್ರ ಹಾಗು ರಾಜ್ಯ ಸರ್ಕಾರಗಳ ಪಾಲಿಗೆ ಯಕ್ಷಪ್ರಶ್ನೆಯಾಗಿಯೇ ಮುಂದುವರೆದಿದೆ.

ಈ ಸಮಸ್ಯೆಯ ಶಾಶ್ವತ ಪರಿಹಾರಕ್ಕಾಗಿ ಆಸ್ಟ್ರೇಲಿಯಾದಲ್ಲಿ ಪ್ರಚಲಿತದಲ್ಲಿರುವ ಪದ್ಧತಿಯು ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಅಲ್ಲಿಯೂ ಬಲಿಷ್ಠ ರೈತ ಸಂಘಟನೆಗಳಿದ್ದರೂ  ರೈತ, ಸರ್ಕಾರ ಹಾಗೂ ಸಕ್ಕರೆ ಕಾರ್ಖಾನೆಗಳ ಮಧ್ಯೆ ಸಂಘರ್ಷ ನಡೆದಿಲ್ಲ ಎನ್ನುವುದು ಗಮನಿಸಬೇಕಾಗಿರುವ ಸಂಗತಿಯಾಗಿದೆ.

ಆಸ್ಟ್ರೇಲಿಯಾದಲ್ಲಿರುವ ವಿಧಾನ

* ಕಬ್ಬು ಹಾಗೂ ಸಕ್ಕರೆ ಬೆಲೆಯನ್ನು ರೈತರೇ ನಿರ್ಧರಿಸುತ್ತಾರೆ

* ಪ್ರತಿಯೊಬ್ಬ ರೈತರು ಸಕ್ಕರೆ ಕಾರ್ಖಾನೆಗೆ ಪೂರೈಸಿದ ಕಬ್ಬಿನ ಪ್ರಮಾಣ ಮತ್ತು ಗುಣಮಟ್ಟಕ್ಕೆ ಅನುಗುಣವಾಗಿ ಉತ್ಪಾದನೆಯಾದ ಸಕ್ಕರೆಯಲ್ಲಿನ ಎರಡು ಮೂರಾಂಶದಷ್ಟು  (2/3) ಭಾಗವನ್ನು ರೈತರೆ ಪಡೆದುಕೊಂಡು ಮಾರಾಟ ಮಾಡಿ ಹಣ ಪಡೆಯುತ್ತಾರೆ

* ರೈತರಿಂದ ಪೂರೈಕೆಯಾದ ಕಬ್ಬಿನಿಂದ ಉತ್ಪಾದನೆಯಾದ ಸಕ್ಕರೆಯಲ್ಲಿನ  ಒಂದು ಮೂರಾಂಶದಷ್ಟು (1/3) ಭಾಗವನ್ನು ಕಾರ್ಖಾನೆಗಳು ತಮ್ಮಲ್ಲಿಯೇ ಉಳಿಸಿಕೊಂಡು ಮಾರಾಟ ಮಾಡಿ ಹಣ ಪಡೆಯುತ್ತವೆ

* ಆಸ್ಟ್ರೇಲಿಯಾದಲ್ಲಿನ ರೈತ ಸಂಘಟನೆಗಳು ಖಾಸಗಿಯಾಗಿ ಕಬ್ಬು ಸಂಶೋಧನೆ ಹಾಗು ಅಭಿವೃದ್ಧಿ ಘಟಕಗಳನ್ನು ಹೊಂದಿವೆ. ಇಲ್ಲಿ ಸಂಶೋಧಿಸಲಾದ ಅಲ್ಪಾವಧಿ ತಳಿಯ ಕಬ್ಬನ್ನು ಮಾತ್ರ ರೈತರು ಸ್ವ-ಇಚ್ಛೆಯಿಂದ ನಾಟಿ ಮಾಡುತ್ತಾರೆ

* ಅಲ್ಲಿ ಬೃಹತ್ ಪ್ರಮಾಣದ 24 ಸಕ್ಕರೆ ಕಾರ್ಖಾನೆಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ

* ಎಲ್ಲ 24 ಸಕ್ಕರೆ ಕಾರ್ಖಾನೆಗಳಿಗೆ ವಿದೇಶಿಯರೆ ಮಾಲೀಕರಾಗಿದ್ದಾರೆ. ಸ್ಥಳೀಯರಿಗೆ ಸಕ್ಕರೆ ಕಾರ್ಖಾನೆ ಪ್ರಾರಂಭಿಸಲು ಅವಕಾಶವಿಲ್ಲ

* ರೈತರು ಕಬ್ಬು ನಾಟಿಯಿಂದ ಹಿಡಿದು ಕಟಾವಿನ ಹಂತದವರೆಗೆ ಶೇ 90ರಷ್ಟು ಕೆಲಸಗಳಿಗೆ ಯಂತ್ರಗಳನ್ನೇ ಬಳಸುತ್ತಾರೆ

* ಕಟಾವಾದ ಶೇ 90ರಷ್ಟು ಕಬ್ಬು ರೈಲು ಮುಖಾಂತರ ಸಕ್ಕರೆ ಕಾರ್ಖಾನೆಗಳಿಗೆ ಪೂರೈಕೆಯಾಗುತ್ತದೆ

* ರೈತರು ತಮ್ಮ ಕಬ್ಬು ಕಟಾವು ಮತ್ತು ಸಾಗಾಣಿಕೆಗಾಗಿ ಸಕ್ಕರೆ ಕಾರ್ಖಾನೆಗಳ ಮೇಲೆ ಅವಲಂಬಿತರಾಗದೇ ತಾವೇ ನಿರ್ವಹಿಸುತ್ತಾರೆ

* ಇಲ್ಲಿನ ಸರಾಸರಿ ಸಕ್ಕರೆ ಇಳುವರಿ ಶೇ 12ರಷ್ಟು ಇರುತ್ತದೆ

* ಇಲ್ಲಿನ ರೈತರು ಕಬ್ಬು ಬೆಳೆ ನಾಟಿ ಮಾಡಲು ಕಡ್ಡಾಯವಾಗಿ ಹನಿ-ನೀರಾವರಿ ಹೊಂದಿರಬೇಕು

* ಗುಣಮಟ್ಟವಿಲ್ಲದ ಕಬ್ಬನ್ನು ಕಟಾವು ಮಾಡುವುದಿಲ್ಲ. ಪಶು ಆಹಾರಕ್ಕಾಗಿ ಉಪಯೋಗಿಸುತ್ತಾರೆ

* ಕಾರ್ಖಾನೆಗಳಿಗೆ ಸರ್ಕಾರದಿಂದ ಹಂಚಿಕೆಯಾದ ಕ್ಷೇತ್ರದಿಂದ ಮಾತ್ರ ಕಬ್ಬು ಖರೀದಿ. ಎಲ್ಲೆಂದರಲ್ಲಿ ಕಬ್ಬು ಖರೀದಿಸಲು ಅವಕಾಶವಿಲ್ಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT