ಹೊರಗೆ ಪ.ಪಂ; ಒಳಗೆ ಗ್ರಾ.ಪಂ: ಹುಳಿಯಾರು ಸ್ಥಳೀಯ ಆಡಳಿತದ ಪ್ರಸ್ತುತ ಸ್ಥಿತಿ

ಹುಳಿಯಾರು: ಹೊರಗೆ ಪಟ್ಟಣ ಪಂಚಾಯಿತಿ, ಒಳಗೆ ಗ್ರಾಮ ಪಂಚಾಯಿತಿ. ಇದು ಹುಳಿಯಾರು ಸ್ಥಳೀಯ ಆಡಳಿತದ ಪ್ರಸ್ತುತ ಸ್ಥಿತಿ. ಇದು ಈಗ ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿದೆ. ಗ್ರಾಮ ಪಂಚಾಯಿತಿಯಿಂದ ಮೇಲ್ದರ್ಜಗೇರಿ ಹಲವು ತಿಂಗಳು ಕಳೆದಿವೆ. ಈಗಾಗಲೇ ಪಟ್ಟಣ ಪಂಚಾಯಿತಿಗೆ ಅಧಿಕಾರಿಗಳನ್ನು ನೇಮಕ ಮಾಡಿ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ. ಆದೇಶದಂತೆ ಗ್ರಾಮ ಪಂಚಾಯಿತಿ ಕಚೇರಿಯ ನಾಮಫಲಕವನ್ನು ಪಟ್ಟಣ ಪಂಚಾಯಿತಿ ಎಂದು ಬರೆಸಲಾಗಿದೆ.
ಆದರೆ, ಹೆಸರಿಗೆ ಮಾತ್ರ ಪಟ್ಟಣ ಪಂಚಾಯಿತಿ. ಆಡಳಿತ ಮಾತ್ರ ಗ್ರಾಮ ಪಂಚಾಯಿತಿಯ ಪಿಡಿಒ ಅಡಿಯಲ್ಲೇ ಇದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ಮುನ್ನವೇ ಪ್ರಭಾರ ಆಯುಕ್ತರ ನಿರ್ದೇಶನದಂತೆ 16 ವಾರ್ಡ್ಗಳನ್ನಾಗಿ ವಿಂಗಡಿಸಲಾಗಿತ್ತು. ಆದರೆ, ವಾರ್ಡ್ವಾರು ಮತಪಟ್ಟಿ ತಯಾರಿಸದ ಕಾರಣ ಚುನಾವಣೆ ನಡೆಯಲಿಲ್ಲ ಎಂಬ ಗುಸು ಗುಸು ಸಹ ಕೇಳಿ ಬಂದಿತ್ತು.
‘ಪಟ್ಟಣದಲ್ಲಿ ಎಲ್ಲ ವಾರ್ಡ್ಗಳಲ್ಲೂ ನೀರಿನ ಸಮಸ್ಯೆ, ಬೀದಿ ದೀಪ ಸಮಸ್ಯೆ, ಕಸ ವಿಲೇವಾರಿ ಸಮಸ್ಯೆ ಎದುರಾಗಿದೆ. ಪಟ್ಟಣ ಪಂಚಾಯಿತಿಯೋ ಅಥವಾ ಗ್ರಾಮ ಪಂಚಾಯಿತಿಯ ಆಡಳಿತವೋ ಎಂಬ ಜಿಜ್ಞಾಸೆಯಲ್ಲಿ ಜನರು ಇದ್ದಾರೆ. ಕಚೇರಿಗೆ ಹೋದರೆ ಒಬ್ಬರ ಮೇಲೋಬ್ಬರು ದೂರು ಹೇಳುತ್ತ ಕಾಲ ನೂಕುತ್ತಿದ್ದಾರೆ’ ಎಂದು ಬಸವೇಶ್ವರ ನಗರ ನಿವಾಸಿ ಆರ್.ಶಂಕರೇಶ್ ದೂರುವರು.
ಇಂತಹ ಅವ್ಯವಸ್ಥೆಯಿಂದ ಜನರು ಮೂರು ತಿಂಗಳಿನಿಂದ ಕಷ್ಟ ಅನುಭವಿಸುವಂತಾಗಿದೆ ಎಂದು ಆರೋಪಿಸುವರು.
ಹುಳಿಯಾರು ಪಟ್ಟಣ ಪಂಚಾಯಿತಿಗೆ ನೇಮಕಗೊಂಡಿರುವ ಅಧಿಕಾರಿಗಳು ಕರ್ತವ್ಯದ ಹಾಜರಾತಿ ಪುಸ್ತಕಕ್ಕೆ ಸಹಿ ಹಾಕುವ ಪ್ರಕ್ರಿಯೆ ಮಾತ್ರ ಚಾಲನೆಯಲ್ಲಿದೆ. ಆದರೆ, ಇಂದಿಗೂ ಸಹ ಇ-ಸ್ವತ್ತುಗಳ ಪ್ರಕ್ರಿಯೆಗೆ ಪ್ರಭಾರ ಪಿಡಿಒ ತೂಕ್ಯಾನಾಯ್ಕ್ ಅವರೇ ಸಹಿ ಹಾಕುತ್ತಿದ್ದಾರೆ. ಸಂಬಂಧಪಟ್ಟ ಮೇಲಧಿಕಾರಿಗಳು ಇತ್ತ ಗಮನಹರಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.