ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧ ದೇಶಗಳ ರಾಜತಾಂತ್ರಿಕರಿಂದ ಸೋಲಾರ್ ಪಾರ್ಕ್ ವೀಕ್ಷಣೆ

ಸೋಲಾ ಉಪಕೇಂದ್ರ 4ರಲ್ಲಿ ಭೇಟಿಯ ಸವಿನೆನಪಿಗಾಗಿ ಸಸಿಗಳನ್ನು ನೆಟ್ಟ ರಾಯಭಾರಿಗಳು
Last Updated 21 ಮೇ 2019, 19:42 IST
ಅಕ್ಷರ ಗಾತ್ರ

ಪಾವಗಡ: ಇಂಟರ್‌ನ್ಯಾಷನಲ್ ಸೋಲಾರ್ ಅಲಯನ್ಸ್ (ಐಎಸ್‌ಎ) ಸಂಸ್ಥೆಯ 40ಕ್ಕೂ ಹೆಚ್ಚು ಸದಸ್ಯ ದೇಶಗಳರಾಜತಾಂತ್ರಿಕರ ತಂಡ ಮಂಗಳವಾರ ತಾಲ್ಲೂಕಿನ ಸೋಲಾರ್ ಪಾರ್ಕ್ ವೀಕ್ಷಿಸಿತು.

ಮೊದಲಿಗೆ ತಿರುಮಣಿ ಬಳಿ ಸೋಲಾರ್ ಪಾರ್ಕ್ ನೀಲನಕ್ಷೆಯನ್ನುಮಾಡೆಲ್ ರೂಮ್‌ನಲ್ಲಿ ತಂಡದ ಸದಸ್ಯರು ವೀಕ್ಷಿಸಿದರು.

ಐಎಸ್ಎ ಸದಸ್ಯ ದೇಶಗಳಿಂದ ಬಂದಿದ್ದ ತಂಡದ ಸದಸ್ಯರು ಕ್ಯಾತಗಾನಚೆರ್ಲು ಬಳಿಯ ಸೋಲಾ ಉಪಕೇಂದ್ರ 4ರಲ್ಲಿ ಭೇಟಿಯ ಸವಿನೆನಪಿಗಾಗಿ ಸಸಿಗಳನ್ನು ನೆಟ್ಟರು.

ಬಿರು ಬಿಸಿಲಿನಲ್ಲಿಯೇ ವಿದೇಶಿ ಗಣ್ಯರ ತಂಡ ಪೊರ್ಟಮ್, ರೀನ್ಯೂ ಪವರ್, ಪಿಜಿಸಿಎಲ್ ಕೇಂದ್ರಕ್ಕೆ ಭೇಟಿ ನೀಡಿ ಸೋಲಾರ್ ವಿದ್ಯುತ್ ತಯಾರಿಕೆಯ ಕುರಿತು ಮಾಹಿತಿ ಪಡೆಯಿತು.

ರೈತರ ಜಮೀನು ಖರೀದಿಸದೆ 1ಎಕರೆಗೆ ವಾರ್ಷಿಕ ₹21 ಸಾವಿರ ಬಾಡಿಗೆಗೆಪಡೆಯಲಾಗಿದೆ. 28 ವರ್ಷಗಳ ಕರಾರಿನ ಆಧಾರದಲ್ಲಿ ಜಮೀನುಪಡೆದುಕೊಳ್ಳಲಾಗಿದೆ. 2 ಸಾವಿರ ಮೆಗಾ ವಾಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಪಾರ್ಕ್‌ಗೆ ಇದೆ ಎಂದು ಅಧಿಕಾರಿಗಳು ತಂಡಕ್ಕೆ ವಿವರಿಸಿದರು.

ಯೂನಿಯನ್ ಆಫ್ ಕೊಮಾರಸ್ ಕನ್ಸಲ್ ಕೆ.ಎಲ್. ಗಂಜು ಮಾತನಾಡಿ, ಪ್ರಪಂಚದ ಅತಿದೊಡ್ಡ ಸೋಲಾರ್ ಪಾರ್ಕ್ ಸ್ಥಾಪಿಸಿರುವುದು ರಾಜ್ಯದ ಬಹುದೊಡ್ಡ ಸಾಧನೆ. ಇಲ್ಲಿ ಸ್ಥಾಪನೆಯಾಗಿರುವ ಕಂಪನಿಗಳು ಉತ್ತಮ ಸೇವೆಯನ್ನು ದೇಶಕ್ಕೆ ನೀಡಲಿ ಎಂದು ತಿಳಿಸಿದರು.

ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಶಿಖಾ ಮಾತನಾಡಿ, 2 ಸಾವಿರ ಮೆಗಾವಾಟ್ ಸಾಮರ್ಥ್ಯದಸೋಲಾರ್ ವಿದ್ಯುತ್ ಉತ್ಪಾದನೆ ಘಟಕವನ್ನು ಸ್ಥಾಪಿಸಿರುವುದು ಸರ್ಕಾರದ ಮಹತ್ವದ ಸಾಧನೆಯಾಗಿದೆ. ಬೆಸ್ಕಾಂ ಸೋಲಾರ್ ವಿದ್ಯುತ್ ಖರೀದಿಸುವ ಅತಿದೊಡ್ಡ ಗ್ರಾಹಕ ಸಂಸ್ಥೆಯಾಗಿದೆ ಎಂದು ತಿಳಿಸಿದರು.

ಫಾನಾ, ಮಲೇಷ್ಯಾ, ಮಾರಿಷಸ್, ಉಗಾಂಡಾ, ಬ್ರೆಜಿಲ್, ಜಾಂಬಿಯ ಸೇರಿದಂತೆ ಇಂಟರ್‌ನ್ಯಾಷನಲ್ ಸೋಲಾರ್ ಅಲೈಯನ್ಸ್ ಸಂಸ್ಥೆಯ ಸದಸ್ಯ ದೇಶಗಳ ರಾಯಭಾರಿಗಳು, ಹೈಕಮಿಷನರ್‌ಗಳು ತಂಡದಲ್ಲಿ ಇದ್ದರು.

ಕುತೂಹಲ

ಬರ, ನಕ್ಸಲ್ ಪೀಡಿತ ಪ್ರದೇಶ ಎಂಬ ವಿಚಾರಗಳಿಗೆ ಹೆಸರಾಗಿದ್ದ ತಾಲ್ಲೂಕಿಗೆ ಪ್ರಥಮಬಾರಿಗೆ 40ಕ್ಕೂ ಹೆಚ್ಚು ದೇಶಗಳ
ರಾಯಭಾರಿಗಳು ಬಂದಿದ್ದು ಜನರಲ್ಲಿ ಸಾಕಷ್ಟು ಕುತೂಹಲ ಮೂಡಿಸಿತು. ತಿರುಮಣಿ ಬಳಿವಿದೇಶಿ ರಾಯಭಾರಿಗಳನ್ನು ವೀಕ್ಷಿಸಲು ಗ್ರಾಮಸ್ಥರು ನೆರೆದಿದ್ದರು. ಭದ್ರತೆಯ ನಡುವೆಯೂ ವಿದೇಶಿ ರಾಯಭಾರಿಗಳ ಚಿತ್ರ ತೆಗೆದುಕೊಳ್ಳಲು ಸ್ಥಳೀಯರು ಯತ್ನಿಸಿದರು.

ಹಿಂದೆಂದೂ ಕಂಡರಿಯದ ಭದ್ರತೆ

ಪಟ್ಟಣದಿಂದ ತಿರುಮಣಿ, ಆಂಧ್ರದ ಗಡಿ ವರೆಗೂ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಸ್ಥಳೀಯರಿಗೆ ಮಾಹಿತಿ ನೀಡದೆ ಕೊನೆ ಕ್ಷಣದವರೆಗೆ ವಿದೇಶಿ ಗಣ್ಯರ ಭೇಟಿಯ ವಿಚಾರವನ್ನು ಗುಪ್ತವಾಗಿರಿಸಲಾಗಿತ್ತು. ಪಟ್ಟಣದ ರೆಸಾರ್ಟ್ ಒಂದರಲ್ಲಿ ತಂಡಕ್ಕೆ ಊಟದ ವ್ಯವಸ್ಥೆ ಮಾಡಲಾಗಿತ್ತು. ರಾಯಭಾರಿಗಳ ಊಟ ಮುಗಿದು ಹೊರಡುವವರೆಗೂ ಸಂಪೂರ್ಣ ರೆಸಾರ್ಟ್ ಪೊಲೀಸರ
ಭದ್ರತೆಯಲ್ಲಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT