ಅಭಿವೃದ್ಧಿ ವಿಳಂಬವಾದರೆ ಪಶ್ಚಾತಾಪ ಪಡಬೇಕಾದೀತು

7
ಕೃಷಿ ಇಲಾಖೆ ಜಿಲ್ಲಾ ಉಪನಿರ್ದೇಶಕಿ ರೂಪಾ ಎಚ್ಚರಿಕೆ

ಅಭಿವೃದ್ಧಿ ವಿಳಂಬವಾದರೆ ಪಶ್ಚಾತಾಪ ಪಡಬೇಕಾದೀತು

Published:
Updated:

ಕೊರಟಗೆರೆ: ‘ಸ್ಥಳೀಯ ಸಮಸ್ಯೆಗಳ ಬಗ್ಗೆ ಉಪಮುಖ್ಯಮಂತ್ರಿ ಪ್ರತಿದಿನ ಮಾಹಿತಿ ಪಡೆಯುತ್ತಿದ್ದು, ಗ್ರಾಮೀಣ ಭಾಗದಲ್ಲಿ ಅಭಿವೃದ್ಧಿ ಕುಂಠಿತವಾದರೆ ನೀವೇ ಹೊಣೆ ಹೊರಬೇಕಾಗುತ್ತದೆ’ ಎಂದು ಕೃಷಿ ಇಲಾಖೆ ಜಿಲ್ಲಾ ಉಪನಿರ್ದೇಶಕಿ ರೂಪಾ ಪಿಡಿಒಗಳಿಗೆ ಎಚ್ಚರಿಕೆ ನೀಡಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ‘ಬಯಲು ಬಹಿರ್ದೆಸೆ ಮುಕ್ತ ಕೊರಟಗೆರೆ’ ಸಭೆಯಲ್ಲಿ ಅವರು ಮಾತನಾಡಿದರು.

‘ಇದು ಉಪಮುಖ್ಯಮಂತ್ರಿ ಸ್ವಕ್ಷೇತ್ರವಾದ್ದರಿಂದ ಅಭಿವೃದ್ಧಿ ಕೆಲಸಗಳ ಬಗ್ಗೆ ಮಾಹಿತಿ ನೀಡಬೇಕಾಗಿದೆ. ಒಂದು ವೇಳೆ ಕೆಲಸ ಕಾರ್ಯಗಳು ಕುಂಠಿತವಾದರೆ ಅವರು ಮಾತಿಗೆ ಬದಲಾಗಿ ಪೆನ್ನಿಗೆ ಕೆಲಸ ನೀಡುತ್ತಾರೆ. ಆಗ ಎಲ್ಲರೂ ಪಶ್ಚಾತಾಪ ಪಡಬೇಕಾಗುತ್ತದೆ. ಹಾಗಾಗಿ ಈ ಕ್ಷೇತ್ರದ ಗ್ರಾಮೀಣ ಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಿಡಿಒಗಳು ಅತಿ ಎಚ್ಚರಿಕೆಯಿಂದ ಕೆಲಸ ನಿರ್ವಹಿಸಬೇಕು’ ಎಂದರು.

ಕೈಮಗ್ಗ ಮತ್ತು ಜವಳಿ ಉಪನಿರ್ದೇಶಕ ವಿರೂಪಾಕ್ಷ ಮಾತನಾಡಿ, ‘ಆ. 15ರಂದು ತುಮಕೂರು ಜಿಲ್ಲೆಯನ್ನು ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯೆಂದು ಘೋಷಣೆ ಮಾಡಲು ತೀರ್ಮಾನಿಸಲಾಗಿದೆ. ಕೊರಟಗೆರೆ ತಾಲ್ಲೂಕಿನ 24 ಗ್ರಾಮ ಪಂಚಾಯಿತಿಗಳಲ್ಲಿ ಇನ್ನೂ 2,796 ಶೌಚಾಲಯ ನಿರ್ಮಾಣ ಆಗಬೇಕಿದೆ. ಪಿಡಿಒಗಳು ಈ ಬಗ್ಗೆ ಹೆಚ್ಚಿನ ಆಸಕ್ತಿ ತೋರಿ ಆ. 15ರ ಒಳಗಾಗಿ ಬಾಕಿ ಇರುವ ಶೌಚಾಲಯ ನಿರ್ಮಾಣಕ್ಕೆ ಕ್ರಮ ವಹಿಸಬೇಕು’ ಎಂದರು.

ತಾಲ್ಲೂಕಿನ ಹುಲಿಕುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಓಬಳದೇವರಹಳ್ಳಿ, ದೇವರಹಳ್ಳಿ ಗ್ರಾಮಗಳಿಗೆ ಆರು ತಿಂಗಳಿಂದ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷ ತೋರುತ್ತಿದ್ದಾರೆ ಎಂದು ಗ್ರಾಮಸ್ಥರು ಸಭೆಯಲ್ಲಿ ತರಾಟೆಗೆ ತೆಗೆದುಕೊಂಡರು.

ಸಭೆಯಲ್ಲಿ ಎಡಿಎ ನಾಗರಾಜು, ಜಗದೀಶ್, ಕೃಷಿ ಅಧಿಕಾರಿ ನೂರ್ ಆಜಂ, ಎಒ ತಿಪ್ಪೇಸ್ವಾಮಿ, ಪಿಡಿಒಗಳಾದ ಸುನಿಲ್‌ಕುಮಾರ್, ರಾಘವೇಂದ್ರ, ರಾಮಚಂದ್ರರಾವ್, ಕುಮಾರಸ್ವಾಮಿ, ಲಕ್ಷ್ಮಿಕಾಂತ, ರಂಗನರಸಯ್ಯ, ರಂಗಸ್ವಾಮಿ, ರಾಜು, ಯಶೋದಾ, ಪ್ರತಿಭಾ, ಅಶ್ವತ್ಥಪ್ಪ ಇದ್ದರು.

ಪಿಡಿಒ ನಿರ್ಲಕ್ಷ್ಯದಿಂದಾಗಿ ತಾಲ್ಲೂಕಿನ ತೋವಿನಕೆರೆ ಗ್ರಾ.ಪಂ.ನಲ್ಲಿ 100, ಕುರಂಕೋಟೆ ಗ್ರಾ.ಪಂ.ನಲ್ಲಿ 130 ಶೌಚಾಲಯ ಬಾಕಿ ಉಳಿದಿವೆ. ಈ ಬಗ್ಗೆ ಸಿಇಒ ಗಮನಕ್ಕೆ ತರಲಾಗಿದೆ. ಶೌಚಾಲಯ ನಿರ್ಮಾಣಕ್ಕೆ ಹೆಚ್ಚುವರಿ ಪಿಡಿಒ ನೇಮಕಕ್ಕೆ ಸೂಚಿಸಲಾಗಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಶಿಕ್ಷಣ ಇಲಾಖೆ ಹಾಗೂ ಅಂಗನವಾಡಿ ಕಾರ್ಯಕರ್ತರು ಶೌಚಾಲಯ ನಿರ್ಮಾಣಕ್ಕೆ ಹೆಚ್ಚಿನ ಸಹಕಾರ ನೀಡಬೇಕಾಗಿದೆ
- ಮೋಹನ್ ಕುಮಾರ್, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !