ಶೇಂಗ ಬೆಳೆ ರಕ್ಷಣೆಗೆ ‘ರೈನ್‌ಗನ್’

7
ಕೆ.ರಾಂಪುರ ಬಳಿ ರೈತರಿಗೆ ಪ್ರಾತ್ಯಕ್ಷಿಕೆ

ಶೇಂಗ ಬೆಳೆ ರಕ್ಷಣೆಗೆ ‘ರೈನ್‌ಗನ್’

Published:
Updated:
Deccan Herald

ಪಾವಗಡ: ತಾಲ್ಲೂಕಿನ ಕೆ.ರಾಂಪುರ ಬಳಿಯ ಜಮೀನಿನಲ್ಲಿ ಬುಧವಾರ ಶೇಂಗ ಗಿಡಗಳಿಗೆ ನೀರು ಹರಿಸುವ ಆಧುನಿಕ ತಂತ್ರಜ್ಞಾನದ ಪ್ರಾತ್ಯಕ್ಷಿಕೆ ಏರ್ಪಡಿಸಲಾಗಿತ್ತು.

ಮಳೆ ಅಭಾವದಿಂದ ತಾಲ್ಲೂಕಿನಲ್ಲಿ ಶೇಂಗ ಬೆಳೆ ಒಣಗುತ್ತಿತ್ತು. ಬೆಳೆ ರಕ್ಷಿಸಿಕೊಳ್ಳಲು ಅಗತ್ಯವಿರುವ ತಂತ್ರಜ್ಞಾನವನ್ನು ಆಂಧ್ರದ ಅನಂತಪುರದಲ್ಲಿ ಬಳಸುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ ಅಧಿಕಾರಿಗಳು, ತಂತ್ರಜ್ಞಾನದ ಸಾಧಕ, ಬಾಧಕಗಳ ಬಗ್ಗೆ ತಾಲ್ಲೂಕಿನ ರೈತರಲ್ಲಿ ಅರಿವು ಮೂಡಿಸಿದರು.

ರೈತ ನರಸಿಂಹಮೂರ್ತಿ ಅವರ ಜಮೀನಿನಲ್ಲಿ ಟ್ಯಾಂಕರ್, ಆಧುನಿಕ ರೈನ್ ಗನ್ ಮೂಲಕ ಶೇಂಗ ಬೆಳೆಗೆ ನೀರು ಹಾಯಿಸಲಾಯಿತು.

‘ಕೂಲಿ ಕಾರ್ಮಿಕರ ಸಹಾಯವಿಲ್ಲದೆ ಕಡಿಮೆ ಸಮಯದಲ್ಲಿ ನೀರು ಹರಿಯಿಸಬಹುದು. ಸ್ಪ್ರಿಂಕ್ಲರ್ ಬದಲಿಸಲು ಕಾರ್ಮಿಕರ ಸಹಾಯ ಪಡೆಯಬೇಕಾಗುತ್ತದೆ. ಆದರೆ, ರೈನ್ ಗನ್ ಯಂತ್ರ ಸ್ವಯಂ ಚಾಲಿತವಾಗಿ ಸುಮಾರು 250 ಮೀಟರ್ ದೂರದವರೆಗೆ ನೀರು ಹಾಯಿಸುತ್ತದೆ’ ಎಂದು ಅಗ್ರಿ ರೈನ್ ವ್ಯವಸ್ಥಾಪಕಿ ಟಿ.ಎಂ.ಸಿ. ಕುಮಾರಿ ತಿಳಿಸಿದರು.

ಜಂಟಿ ಕೃಷಿ ನಿರ್ದೇಶಕ ಜಯಸ್ವಾಮಿ ಮಾತನಾಡಿ, ‘ಆಗಸ್ಟ್ ವೇಳೆಗೆ ಶೇ 80ರಷ್ಟು ಬಿತ್ತನೆಯಾಗಬೇಕಿತ್ತು. ಜಿಲ್ಲೆಯಲ್ಲಿ ಮಳೆ ಅಭಾವದಿಂದ ಕೇವಲ ಶೇ 30ರಷ್ಟು ಪ್ರದೇಶದಲ್ಲಿ ಶೇಂಗ ಬಿತ್ತನೆಯಾಗಿದೆ. ಬಿತ್ತನೆಯಾದ ಶೇಂಗಾ ಬೆಳೆ ಮಳೆ ಅಭಾವದಿಂದ ಸೊರಗುತ್ತಿದೆ. ಬೆಳೆ ರಕ್ಷಿಸಲು ಪರ್ಯಾಯ ಮಾರ್ಗೋಪಾಯವಾಗಿ ರೈನ್ ಗನ್ ಬಳಕೆಯ ಸಾಧ್ಯತೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ’ ಎಂದರು.

‘ಆಂಧ್ರದ ಅನಂತಪುರ ಜಿಲ್ಲೆಯಲ್ಲಿ ರೈನ್ ಗನ್ ತಂತ್ರಜ್ಞಾನವನ್ನು ಈಗಾಗಲೇ ಬಳಸಲಾಗುತ್ತಿದೆ. ಆಂಧ್ರದಲ್ಲಿ ಎಕರೆಗೆ ₹ 750 ನಿಗದಿಮಾಡಲಾಗಿದೆ. 10 ಎಂ.ಎಂ. ಮಳೆ ಬಿದ್ದಾಗ ಸಿಗುವಷ್ಟು ತೇವಾಂಶ, ರೈನ್ ಗನ್ ಬಳಕೆಯಿಂದಲೂ ಬೆಳೆಗೆ ಸಿಗಲಿದೆ. 1 ಗಂಟೆಗೆ ಅರ್ಧ ಎಕರೆಗೆ ನೀರು ಹಾಯಿಸಬಹುದು’ ಎಂದು ಮಾಹಿತಿ ನೀಡಿದರು.

ರೈತ ನರಸಿಂಹಮೂರ್ತಿ ಮಾತನಾಡಿ, ‘ಮಳೆ ಇಲ್ಲದೆ ರೈತರು ಬಿತ್ತನೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ರೈನ್ ಗನ್ ತಂತ್ರಜ್ಞಾನದಿಂದ ಉಪಯೋಗವಾಗಲಿದೆ. ಆದರೆ ಬಾಡಿಗೆ ವೆಚ್ಚ ಭರಿಸಲು ರೈತರಿಗೆ ಸಾಧ್ಯವಾಗುವುದಿಲ್ಲ. ಸರ್ಕಾರ ರಿಯಾಯಿತಿ ದರದಲ್ಲಿ ನೀರು ಹಾಯಿಸಲು ಮುಂದೆ ಬರಬೇಕು’ ಎಂದರು.

ಸಹಾಯಕ ಕೃಷಿ ನಿರ್ದೇಶಕ ಹನುಮಂತರಾಜು, ಸಹಾಯಕ ಕೃಷಿ ಅಧಿಕಾರಿ ಪಿ.ಎನ್. ಜಗನ್ನಾಥ್, ಚಿತ್ರದುರ್ಗ ಕೃಷಿ ಉಪ ನಿರ್ದೇಶಕ ಶಿವಕುಮಾರ್, ಚಳ್ಳಕೆರೆ ಕೃಷಿ ಉಪ ನಿರ್ದೇಶಕಿ ಸುಜಾತಾ, ನೀಲಮ್ಮನಹಳ್ಳಿ ಬಾಬು ಉಪಸ್ಥಿತರಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !