ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಪತ್ರೆಯಿಂದ ದೂರವೇ ಉಳಿದ ಜನತೆ

Last Updated 31 ಮೇ 2021, 2:29 IST
ಅಕ್ಷರ ಗಾತ್ರ

ತುಮಕೂರು: ಈಗ ಕೊರೊನಾ ಸೋಂಕಿತರನ್ನು ಬಿಟ್ಟರೆ ಸಾಮಾನ್ಯ ರೋಗಿಗಳು ಚಿಕಿತ್ಸೆ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ತುರ್ತು ಚಿಕಿತ್ಸೆ ಅಗತ್ಯವಿದ್ದವರೂ ಬಳಲುವಂತಾಗಿದ್ದು, ಮುಂದೆ ನೋಡೋಣ ಎಂದು ಮನೆಗಳಲ್ಲೇ ಕಾಲ ತಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಕ್ಯಾನ್ಸರ್ ರೋಗಿಗಳು, ದಿನನಿತ್ಯ ಡಯಾಲಿಸಿಸ್ ಅಗತ್ಯ ಇದ್ದವರು ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದುಕೊಳ್ಳಲು ಪರದಾಡುತ್ತಿದ್ದಾರೆ. ಹೃದಯ ಸಂಬಂಧಿ ಸಮಸ್ಯೆ ಕಾಣಿಸಿಕೊಂಡರೆ ತಕ್ಷಣಕ್ಕೆ ಚಿಕಿತ್ಸೆ ಸಿಗುತ್ತಿಲ್ಲ. ನಗರದಲ್ಲಿ ಇರುವ ಖಾಸಗಿ ಆಸ್ಪತ್ರೆಗಳನ್ನು ಬಿಟ್ಟರೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ಹೃದ್ರೋಗಿಗಳು ಬೆಂಗಳೂರಿನತ್ತ ಮುಖ ಮಾಡಬೇಕಿದೆ. ಅಲ್ಲೂ ಅಷ್ಟು ಸುಲಭವಾಗಿ ಚಿಕಿತ್ಸೆ ಸಿಗುತ್ತಿಲ್ಲ.

ಜಿಲ್ಲಾ ಸಾರ್ವಜನಿಕ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ದಿನನಿತ್ಯ ಡಯಾಲಿಸಿಸ್‌ಗೆ ಸಾಕಷ್ಟು ರೋಗಿಗಳು ಬರುತ್ತಿದ್ದರು. ಈಗ ಈ ಸಂಖ್ಯೆ ಕಡಿಮೆಯಾಗಿದೆ. ದಿನಬಿಟ್ಟು ದಿನ, ಇಲ್ಲವೆ ಕೆಲವು ದಿನಗಳ ನಂತರ ಬಂದು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕೋವಿಡ್ ಮೊದಲ ಅಲೆಯ ಸಮಯದಲ್ಲಿ ಜಿಲ್ಲಾ ಆಸ್ಪತ್ರೆಯಿಂದ ಸಾಮಾನ್ಯ ರೋಗಿಗಳನ್ನು ಶ್ರೀದೇವಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಜಿಲ್ಲಾ ಆಸ್ಪತ್ರೆಯನ್ನು ಕೋವಿಡ್ ಚಿಕಿತ್ಸೆಗೆ ಮೀಸಲಿರಿಸಲಾಗಿತ್ತು. ಎರಡನೇ ಅಲೆಯ ಸಮಯದಲ್ಲಿ ಶ್ರೀದೇವಿ ಆಸ್ಪತ್ರೆಯನ್ನೂ ಕೋವಿಡ್ ಚಿಕಿತ್ಸೆಗೆ ಜಿಲ್ಲಾ ಆಡಳಿತ ಬಳಸಿಕೊಂಡಿದ್ದು, ಜಿಲ್ಲಾ ಆಸ್ಪತ್ರೆಯಲ್ಲೂ ಕೋವಿಡ್‌ಗೆ ಚಿಕಿತ್ಸೆ ನೀಡಲಾಗುತ್ತಿದೆ. ಸಾಮಾನ್ಯರೋಗಿಗಳಿಗೂ ಇಲ್ಲೇ ಚಿಕಿತ್ಸೆ ಕೊಡಲಾಗುತ್ತಿದೆ.

ಜಿಲ್ಲಾ ಆಸ್ಪತ್ರೆ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲೂ ಕೋವಿಡ್ ಹಾಗೂ ಸಾಮಾನ್ಯ ರೋಗಿಗಳಿಗೆ ಪ್ರತ್ಯೇಕ ವಾರ್ಡ್‌ಗಳಿದ್ದರೂ ಕೊರೊನಾ ಸೋಂಕಿತರು ಅಧಿಕ ಸಂಖ್ಯೆಯಲ್ಲಿ ಇರುವುದರಿಂದ ಜನರು ಬರಲು ಭಯಪಡುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲೂ ಇದೇ ಪರಿಸ್ಥಿತಿ ಇದೆ. ಏನೂ ಆಗುವುದಿಲ್ಲ. ಹೆದರಬೇಡಿ ಚಿಕಿತ್ಸೆಗೆ ಬನ್ನಿ ಎಂದು ವೈದ್ಯರು ಹೇಳುತ್ತಿದ್ದರೂ ರೋಗಿಗಳು
ಬರುತ್ತಿಲ್ಲ.

ಜ್ವರ, ಕೆಮ್ಮು, ನೆಗಡಿ, ಮೈಕೈ ನೋವಿನಿಂದ ಬಳಲಿದವರು ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಬರುತ್ತಿಲ್ಲ. ಈ ಲಕ್ಷಣಗಳು ಕಂಡುಬಂದರೆ ಕೋವಿಡ್ ಖಚಿತ ಎಂಬ ಭಾವನೆ ಇದೆ. ಇಂತಹ ಲಕ್ಷಣ ಇದ್ದ ಹಲವರಿಗೆ ಕೊರೊನಾ ಸೋಂಕು ಇಲ್ಲದೆಯೂ ಇರಬಹುದು. ಆದರೆ ಆತಂಕದಿಂದ ಪರೀಕ್ಷಿಸಿಕೊಳ್ಳಲು, ಚಿಕಿತ್ಸೆ ಪಡೆಯಲು ಬರುತ್ತಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಹೆರಿಗೆ ದೊಡ್ಡ ಸಮಸ್ಯೆಯಾಗಿದೆ. ನಗರ ಪ್ರದೇಶದಲ್ಲೇ ಗರ್ಭಿಣಿಯರನ್ನು ಆಸ್ಪತ್ರೆಗೆ ಕರೆತರಲು ಹಿಂದೇಟು ಹಾಕುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಇಂತಹ ವಾತಾವರಣ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಇದೆ. ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲ್ಲೂಕು ಆಸ್ಪತ್ರೆಗೆ ಹೆರಿಗೆಗೆ ಕರೆದುಕೊಂಡು ಬರುತ್ತಿದ್ದವರು ಮನೆಗಳಲ್ಲೇ ಹೆರಿಗೆ ಮಾಡಿಸುತ್ತಿದ್ದಾರೆ. ಹಣ ಕೊಡುತ್ತೇವೆ, ಮನೆಗೆ ಬಂದು ಹೆರಿಗೆ ಮಾಡಿಸುವಂತೆ ವೈದ್ಯರು, ನರ್ಸ್‌ಗಳಿಗೆ ದುಂಬಾಲು ಬೀಳುತ್ತಿದ್ದಾರೆ ಎಂದು ಹೆಸರು ಹೇಳಲು ಬಯಸದ ವೈದ್ಯರೊಬ್ಬರು ತಿಳಿಸಿದರು.

ಶಸ್ತ್ರ ಚಿಕಿತ್ಸೆ ಮುಂದಕ್ಕೆ: ಶಸ್ತ್ರ ಚಿಕಿತ್ಸೆ ಅಗತ್ಯ ಇದ್ದವರು ಸದ್ಯಕ್ಕೆ ಮುಂದೂಡುತ್ತಿದ್ದಾರೆ. ಅನಿವಾರ್ಯ ಪರಿಸ್ಥಿತಿಯಲ್ಲಿ ಇದ್ದವರು ಮಾತ್ರ ಬರುತ್ತಿದ್ದಾರೆ. ಕೊರೊನಾ ಸೋಂಕು ಕಡಿಮೆಯಾಗಿ ಪರಿಸ್ಥಿತಿ ತಿಳಿಯಾದ ನಂತರ ಚಿಕಿತ್ಸೆ ಮಾಡಿಸಿಕೊಂಡರಾಯಿತು ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಸ್ವಲ್ಪ ತಡವಾಗಿ ಚಿಕಿತ್ಸೆ ಮಾಡುವಂತಿದ್ದರೆ ಸದ್ಯಕ್ಕೆ ಬರಬೇಡಿ ಎಂದು ವೈದ್ಯರೇ ಸಲಹೆ ಮಾಡುತ್ತಿದ್ದಾರೆ.

ಕೊಳಚೆ ಪ್ರದೇಶದಲ್ಲಿ ನೀಡುತ್ತಿರುವ ಕೋವಿಡ್‌ ಲಸಿಕೆ ಮೇಲ್ವರ್ಗ, ಮಧ್ಯಮ ವರ್ಗದ ಜನರ ಪಾಲಾಗುತ್ತಿದೆ ಎಂದು ಸ್ಲಂ ಜನಾಂದೋಲನ– ಕರ್ನಾಟಕ ಸಂಘಟನೆ ಸಂಚಾಲಕ ಎ.ನರಸಿಂಹಮೂರ್ತಿ ಆರೋಪಿಸಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT