ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃತ್ತ ನಿರೀಕ್ಷಕರ ಕಚೇರಿ ಸ್ಥಳಾಂತರಕ್ಕೆ ಒಲವು

ಸಾರ್ವಜನಿಕರು, ಸಿಬ್ಬಂದಿಯಿಂದ ಹೆಚ್ಚಿದ ಒತ್ತಾಯ l ಮೂಲ ಸೌಕರ್ಯಕ್ಕೆ ಆದ್ಯತೆ ನೀಡುವಂತೆ ಬೇಡಿಕೆ
Last Updated 27 ಸೆಪ್ಟೆಂಬರ್ 2021, 3:18 IST
ಅಕ್ಷರ ಗಾತ್ರ

ಪಾವಗಡ: ತಾಲ್ಲೂಕಿನ ತಿರುಮಣಿಯಲ್ಲಿನ ಸರ್ಕಲ್‌ ಇನ್‌ಸ್ಪೆಕ್ಟರ್‌ ಕಚೇರಿಯನ್ನು ಸಾರ್ವಜನಿಕ, ಆಡಳಿತಾತ್ಮಕ ಹಿತದೃಷ್ಟಿಯಿಂದ ಪಟ್ಟಣಕ್ಕೆ ಸ್ಥಳಾಂತರಿಸಬೇಕು ಎಂಬ ಒತ್ತಾಯ ವ್ಯಾಪಕವಾಗಿದೆ.

ಈ ಹಿಂದೆ ಪಟ್ಟಣ ಠಾಣೆ, ಅರಸೀಕೆರೆ ಠಾಣೆಯನ್ನು ಪಾವಗಡ ವೃತ್ತಕ್ಕೆ ಸೇರಿಸಿ, ವೈ.ಎನ್.ಹೊಸಕೋಟೆ, ತಿರುಮಣಿ ಠಾಣೆಗಳನ್ನು ತಿರುಮಣಿ ವೃತ್ತಕ್ಕೆ ಸೇರಿಸಲಾಗಿತ್ತು. ತಿರುಮಣಿ ವೃತ್ತ ಕಚೇರಿ ತಿರುಮಣಿಯಲ್ಲಿತ್ತು.

ಪಟ್ಟಣ ಠಾಣೆಯನ್ನು ಪೊಲೀಸ್‌ ಇನ್‌ಸ್ಪೆಕ್ಟರ್‌ ಕಚೇರಿಯನ್ನಾಗಿ ಉನ್ನತೀಕರಿಸಿ, ಅರಸೀಕೆರೆ ಠಾಣೆಯನ್ನು ತಿರುಮಣಿ ವೃತ್ತಕ್ಕೆ ಸೇರ್ಪಡೆಗೊಳಿಸಿ ಕೆಲ ತಿಂಗಳುಗಳ ಹಿಂದೆ ಆದೇಶ ಹೊರಡಿಸಲಾಗಿದೆ. ನಂತರ ತಿರುಮಣಿ ಸರ್ಕಲ್‌ ಇನ್‌ಸ್ಪೆಕ್ಟರ್‌ ಕಚೇರಿಯನ್ನು ವೈ.ಎನ್.ಹೊಸಕೋಟೆಗೆ ಸ್ಥಳಾಂತರಿಸಲಾಗಿದೆ. ಇದರಿಂದ ನಿಡಗಲ್‌ ಹೋಬಳಿ, ನಾಗಲಮಡಿಕೆ ಹೋಬಳಿ ಗಡಿ ಭಾಗದ ಗ್ರಾಮಗಳಿಂದ ಕೆಲಸ ಕಾರ್ಯ
ಗಳಿಗಾಗಿ ವೈ.ಎನ್.ಹೊಸಕೋಟೆಗೆ ಹೋಗಲು
ದೂರವಾಗುತ್ತಿದೆ ಎಂದು ಸಾರ್ವಜನಿಕರು ಅಳಲು ತೋಡಿಕೊಂಡಿದ್ದಾರೆ.

ಸಾಕಷ್ಟು ದೂರ: ನಾಗಲಮಡಿಕೆ ಹೋಬಳಿ, ನಿಡಗಲ್‌ ಹೋಬಳಿ ಗಡಿಯಿಂದ ಕೆಲಸ ಕಾರ್ಯಗಳಿಗಾಗಿ ವೈ.ಎನ್.ಹೊಸಕೋಟೆಯಲ್ಲಿರುವ ವೃತ್ತ ನಿರೀಕ್ಷಕರ ಕಚೇರಿಗೆ ಸುಮಾರು 65ರಿಂದ 75 ಕಿ.ಮೀ ದೂರ ಕ್ರಮಿಸಬೇಕು. ಹೋಗಿ ಬರಲು 120ರಿಂದ 150 ಕಿ.ಮೀ ಪ್ರಯಾಣಿಸಬೇಕು.

ಸಾರ್ವಜನಿಕರಷ್ಟೇ ಅಲ್ಲದೆ ಅರಸೀಕೆರೆ, ತಿರುಮಣಿ ಠಾಣೆಯ ಅಧಿಕಾರಿ, ಸಿಬ್ಬಂದಿ ಆಡಳಿತಾತ್ಮಕ ಕೆಲಸ ಕಾರ್ಯಗಳಿಗಾಗಿ ಇಷ್ಟು ದೂರ ಪ್ರಯಾಣಿಸಬೇಕಿದೆ. ವೃತ್ತ ನಿರೀಕ್ಷಕರು ಠಾಣೆಗಳಿಗೆ ಭೇಟಿ ನೀಡಲು ಹೆಚ್ಚಿನ ಸಮಯ, ಇಂಧನ ವ್ಯಯಿಸಬೇಕಾದ ಅನಿವಾರ್ಯತೆ ಇದೆ.

ಯಾವುದಾದರೂ ಪ್ರಕರಣ ವಿಚಾರಣೆಗೆ, ಘಟನೆ ನಡೆದ ಸ್ಥಳಕ್ಕೆ ಸಕಾಲದಲ್ಲಿ ಭೇಟಿ ನೀಡಲು ವೃತ್ತ ನಿರೀಕ್ಷಕರಿಗೆ ಕಷ್ಟವಾಗುತ್ತಿದೆ. ಇವೆಲ್ಲ ಅಂಶಗಳು ಸಾರ್ವಜನಿಕರ ಮೇಲೆ ಪರಿಣಾಮ ಬೀರುತ್ತವೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಅರಸೀಕೆರೆ, ಮಂಗಳವಾಡ, ಕೆ.ಟಿ.ಹಳ್ಳಿ, ನಾಗಲಮಡಿಕೆ, ತಿರುಮಣಿ, ವಡ್ರೇವು, ವೆಂಕಟಮ್ಮನಹಳ್ಳಿ ಸೇರಿದಂತೆ ಅರಸೀಕೆರೆ, ತಿರುಮಣಿ ಠಾಣಾ ವ್ಯಾಪ್ತಿಯ ಗ್ರಾಮಗಳಿಂದ ವೃತ್ತ ನಿರೀಕ್ಷಕರ ಕಚೇರಿ ಇರುವ ವೈ.ಎನ್.ಹೊಸಕೋಟೆಗೆ ನೇರವಾಗಿ ಬಸ್‌ ಸೌಲಭ್ಯ ಇಲ್ಲ.

ಪಟ್ಟಣಕ್ಕೆ ಬಂದು ಪಟ್ಟಣದಿಂದ ವೈ.ಎನ್.ಹೊಸಕೋಟೆಗೆ ಹೋಗಬೇಕು. ಇದೇ ಮಾರ್ಗದಲ್ಲಿ ತಮ್ಮ ಗ್ರಾಮಗಳಿಗೆ ಮರಳಬೇಕು. ನಾಗಲಮಡಿಕೆ ಹೋಬಳಿ, ನಿಡಗಲ್‌ ಹೋಬಳಿ ಮಾರ್ಗದಲ್ಲಿ ಹೆಚ್ಚಿನ ಬಸ್‌ಗಳು ಸಂಚರಿಸುತ್ತಿಲ್ಲ. ಪಟ್ಟಣಕ್ಕೆ ಬಂದು ಇಲ್ಲಿಂದ ವೈ.ಎನ್.ಹೊಸಕೋಟೆಗೆ ಹೋಗಲು ಹೆಚ್ಚಿನ ಕಾಲಾವಕಾಶ ಬೇಕು. ಸಂಜೆಯ ನಂತರ ವೈ.ಎನ್.ಹೊಸಕೋಟೆಯಿಂದ ಪಟ್ಟಣಕ್ಕೆ ಬಸ್‌ ಸಂಚರಿಸುವುದಿಲ್ಲ.

ಸುಸಜ್ಜಿತ ಕಟ್ಟಡವಿಲ್ಲ: ವೈ.ಎನ್.ಹೊಸಕೋಟೆ ಪೊಲೀಸ್‌ ಠಾಣೆ ಹಿಂಭಾಗದ ಕಿರಿದಾದ ಕೊಠಡಿಯಲ್ಲಿ ತಾತ್ಕಾಲಿಕವಾಗಿ ವೃತ್ತ ನಿರೀಕ್ಷಕರ ಕೊಠಡಿ ಮಾಡಿಕೊಳ್ಳಲಾಗಿದೆ. ಇದು ವೃತ್ತ ನಿರೀಕ್ಷಕರ ಕಚೇರಿಗೆ ಸೂಕ್ತವಾಗಿಲ್ಲ. ಶಿಥಿಲಾವಸ್ಥೆಯಲ್ಲಿರುವ ಕಟ್ಟಡ ಯಾವಾಗ ಬೀಳುತ್ತದೊ ಎಂಬ ಆತಂಕದಲ್ಲಿ ಸಿಬ್ಬಂದಿ ಕಾರ್ಯ ನಿರ್ವಹಿಸಬೇಕಿದೆ. ಕಚೇರಿಗೆ
ಬರುವ ಸಾರ್ವಜನಿಕರಿಗೆ ಮೂಲ ಸೌಕರ್ಯಗಳಿಲ್ಲ.

ಪಟ್ಟಣಕ್ಕೆ ವೃತ್ತ ಕಚೇರಿ ಸ್ಥಳಾಂತರಿಸುವಂತೆ ಆಗ್ರಹ: ತಿರುಮಣಿ, ಅರಸೀಕೆರೆ, ವೈ.ಎನ್.ಹೊಸಕೋಟೆ ಪೊಲೀಸ್‌ ಠಾಣಾ ವ್ಯಾಪ್ತಿಯ ಸಾರ್ವಜನಿಕರು ತಮ್ಮ ದೈನಂದಿನ ವ್ಯವಹಾರಗಳಿಗಾಗಿ ತಾಲ್ಲೂಕು ಕೇಂದ್ರಸ್ಥಾನವಾಗಿರುವ ಪಟ್ಟಣಕ್ಕೆ ಬಂದು ಹೋಗುತ್ತಾರೆ. 3 ಪೊಲೀಸ್‌ ಠಾಣೆಗಳು ಪಟ್ಟಣದಿಂದ 30 ಕಿ.ಮೀ ದೂರದಲ್ಲಿವೆ. ಪೊಲೀಸ್‌ ಠಾಣೆಗಳ ಗಡಿ ಗ್ರಾಮಗಳು ಪಟ್ಟಣದಿಂದ 50 ಕಿ.ಮೀ ವ್ಯಾಪ್ತಿಯಲ್ಲಿವೆ. ತಹಶೀಲ್ದಾರ್‌ ಕಚೇರಿ ಸೇರಿದಂತೆ ತಾಲ್ಲೂಕು ಮಟ್ಟದ ವಿವಿಧ ಇಲಾಖಾ ಕಚೇರಿಗಳು ಪಟ್ಟಣದಲ್ಲಿರುವುದರಿಂದ ಸಭೆ, ಸಮಾರಂಭಗಳಲ್ಲಿ ಅಧಿಕಾರಿಗಳು ಭಾಗವಹಿಸಲು ಅನುಕೂಲವಾಗುತ್ತದೆ. ಪಟ್ಟಣಕ್ಕೆ ಕಚೇರಿ ಸ್ಥಳಾಂತರಿಸಿದರೆ, ಸರ್ಕಾರದ ಹಣ, ಸಾರ್ವಜನಿಕರು, ಅಧಿಕಾರಿ, ಸಿಬ್ಬಂದಿಯ ಅಮೂಲ್ಯ ಸಮಯ ಉಳಿತಾಯವಾಗುತ್ತದೆ ಎಂಬ ಒತ್ತಾಯ ಸಾರ್ವಜನಿಕರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT