ಮಂಗಳವಾರ, ಅಕ್ಟೋಬರ್ 15, 2019
29 °C
ಓಡಿ ಹೋದ ಪ್ರಕರಣಗಳೇ ಹೆಚ್ಚು, ನಾಲ್ಕು ಪ್ರಕರಣಗಳಲ್ಲಿ ಶಿಕ್ಷೆ

ತುಮಕೂರು: ಪೋಕ್ಸೊ ಅಡಿ ಮೂರು ವರ್ಷದಲ್ಲಿ 175 ಪ್ರಕರಣ

Published:
Updated:
Prajavani

ತುಮಕೂರು: ಕಳೆದ ಎರಡೂ ಮುಕ್ಕಾಲು ವರ್ಷಗಳಲ್ಲಿ ಜಿಲ್ಲೆಯಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ (ಪೋಕ್ಸೊ)ಯಡಿ 175 ಪ್ರಕರಣಗಳು ದಾಖಲಾಗಿವೆ.

ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳು ನಡೆದ ಪ್ರಕರಣಗಳು ಕೆಲವಾದರೆ, ಬಹುತೇಕ ಪ್ರಕರಣಗಳು ‘ಓಡಿ ಹೋದ’ ಕಾರಣಕ್ಕೆ ಪೋಕ್ಸೊ ಅಡಿ ಪ್ರಕರಣ ದಾಖಲಾಗಿವೆ. 18 ವರ್ಷದ ಒಳಗಿನ ಮಕ್ಕಳು ಪ್ರೀತಿ–ಪ್ರೇಮದ ಕಾರಣಕ್ಕೆ ಓಡಿ ಹೋದರೆ ಆ ದೂರುಗಳು ಪೋಕ್ಸೊ ಅಡಿ ದಾಖಲಾಗುತ್ತವೆ. ಇಂತಹವೇ ಗರಿಷ್ಠ ಸಂಖ್ಯೆಯಲ್ಲಿವೆ.

ಮತ್ತೊಂದು ಗಮನಿಸಿಬೇಕಾದ ಅಂಶ ಅಂದರೆ ಬಹುತೇಕ ಪ್ರಕರಣಗಳಲ್ಲಿ ಮಕ್ಕಳು ತಮ್ಮ ಸಂಬಂಧಿಕರು ಇಲ್ಲವೆ ಪರಿಚಿತರಿಂದಲೇ ದೌರ್ಜನ್ಯಕ್ಕೆ ತುತ್ತಾಗುತ್ತಿದ್ದಾರೆ.

2017ನೇ ಸಾಲಿನಲ್ಲಿ ಪೋಕ್ಸೊ ಕಾಯ್ದೆಯಡಿ ಜಿಲ್ಲೆಯಲ್ಲಿ 73 ಪ್ರಕರಣಗಳು ದಾಖಲಾಗಿವೆ. ಇವರಲ್ಲಿ ನಾಲ್ಕು ಮಂದಿಗೆ ಶಿಕ್ಷೆಯೂ ಆಗಿದೆ. 2018ರಲ್ಲಿ 53 ಮತ್ತು 2019ರ ಸೆಪ್ಟೆಂಬರ್ 30ಕ್ಕೆ 49 ಪ್ರಕರಣಗಳು ದಾಖಲಾಗಿವೆ. ಈ ವರ್ಷಗಳಲ್ಲಿ ಯಾವುದೇ ಆರೋಪಿಗೂ ಶಿಕ್ಷೆ ಆಗಿಲ್ಲ.

ಇನ್ನು ಆಘಾತಕಾರಿ ಅಂಶವೆಂದರೆ ತುಮಕೂರು ತಾಲ್ಲೂಕಿನಲ್ಲಿಯೇ ಈ ಮೂರು ವರ್ಷಗಳಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ತುಮಕೂರು ತಾಲ್ಲೂಕಿನ ಬಹುತೇಕ ಹಳ್ಳಿಗಳು ಶಿಕ್ಷಣದಿಂದ ದೂರವೇನೂ ಉಳಿದಿಲ್ಲ. ಆದರೂ ಇಂತಹ ಬೆಳವಣಿಗೆಗಳು ಹೆಚ್ಚುತ್ತಿರುವುದು ಕಳವಳಕಾರಿ.

2017ರಲ್ಲಿ ತುಮಕೂರು ತಾಲ್ಲೂಕಿನಲ್ಲಿ 2, ಶಿರಾ ಮತ್ತು ಕೊರಟಗೆರೆ ತಾಲ್ಲೂಕಿನಲ್ಲಿ ತಲಾ 1 ಪ್ರಕರಣದಲ್ಲಿ ಆರೋಪಿಗಳಿಗೆ ಶಿಕ್ಷೆ ಆಗಿದೆ. ಉಳಿದವು ನ್ಯಾಯಾಲಯದ ವಿಚಾರಣೆಯಲ್ಲಿವೆ.

‘ಪೋಕ್ಸೊದಡಿ ನಾನಾ ರೀತಿಯ ಪ್ರಕರಣಗಳು ದಾಖಲಾಗುತ್ತವೆ. ಮಕ್ಕಳು ಓಡಿ ಹೋದರೆ ಈ ಮೊದಲು ಪೋಷಕರು ಮರ್ಯಾದೆಗೆ ಹೆದರಿ ದೂರು ಕೊಡುತ್ತಿರಲಿಲ್ಲ. ಆದರೆ ಪೊಲೀಸ್ ಮತ್ತು ನಮ್ಮ ಇಲಾಖೆ ಜನರಲ್ಲಿ ಅರಿವು ಮೂಡಿಸಿದ ಫಲವಾಗಿ ಪೋಷಕರು ದೂರು ನೀಡಲು ಮುಂದೆ ಬರುತ್ತಿದ್ದಾರೆ’ ಎಂದು ಮಾಹಿತಿ ನೀಡುವರು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವಾಸಂತಿ ಉಪ್ಪಾರ್.

‘ಹೆಣ್ಣು ಮಕ್ಕಳು ಕಾಣಿಯಾದಾಗ ಈ ಹಿಂದೆ ದೂರು ಕೊಡುತ್ತಿರಲಿಲ್ಲ. ಆ ಮಕ್ಕಳು ದುಷ್ಟರ ಕೈಯಲ್ಲಿ ಸಿಕ್ಕಿದರೆ ಅವರನ್ನು ಕೆಟ್ಟ ಕೆಲಸಕ್ಕೆ ಬಳಸಿಕೊಳ್ಳುವರು. ಇದೆಲ್ಲವನ್ನೂ ಜನರಿಗೆ ಮನವರಿಕೆ ಮಾಡಿಕೊಟ್ಟೆವು. ಈಗ ಜನರಲ್ಲಿ ಧೈರ್ಯ ಬಂದಿದೆ. ಮಕ್ಕಳು ಕಾಣಿಯಾದ ತಕ್ಷಣ ಅಪಹರಣ ಪ್ರಕರಣದಡಿ ದೂರು ನೀಡುವರು. ಓಡಿ ಹೋದ ಶೇ 90ರಷ್ಟು ಪ್ರಕರಣಗಳಲ್ಲಿ ಹುಡುಗ ಮೇಜರ್ ಇರುತ್ತಾನೆ. ಬಾಲಕಿಯ ವೈದ್ಯಕೀಯ ಪರೀಕ್ಷೆ ನಡೆಸಿದ ನಂತರ ಪೋಕ್ಸೊ ಪ್ರಕರಣ ದಾಖಲಾಗುತ್ತದೆ’ ಎಂದರು.

 ಶಾಲೆ ಬಿಟ್ಟ ಮಕ್ಕಳು ಮನೆಯಲ್ಲಿ ಒಬ್ಬರೇ ಇದ್ದಾಗ ಅವರನ್ನು ಹೆಸರಿಸಿ ಇಲ್ಲ ಒತ್ತಾಯವಾಗಿ ಅವರ ಮೇಲೆ ದೌರ್ಜನ್ಯ ಮಾಡಿದ ಪ್ರಕರಣಗಳು ಇವೆ’ ಎಂದು ಹೇಳಿದರು.

ಪರಿಚಿತರಿಂದಲೇ ದುಷ್ಕೃತ್ಯ
ಪೋಕ್ಸೊ ಪ್ರಕರಣದಲ್ಲಿ ತನಿಖೆ ನಡೆಸಿ 60 ದಿನಗಳ ಒಳಗೆ ಪೊಲೀಸರು ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಬೇಕು. ಈ ಬಹುತೇಕ ಪ್ರಕರಣದಲ್ಲಿ ಅಕ್ಕಪಕ್ಕದ ಮನೆಯವರು, ಸಂಬಂಧಿಕರೇ ಆರೋಪಿಗಳಾಗಿರುತ್ತಾರೆ. ಮಕ್ಕಳು ಸಾಮಾನ್ಯವಾಗಿ ಅಪರಿಚಿತರು ಕರೆದರೆ ಹೋಗುವುದು ತೀರಾ ಕಡಿಮೆ. ಪರಿಚಿತರಿಂದಲೇ ಇಂತಹ ದುಷ್ಕೃತ್ಯಗಳು ನಡೆಯುತ್ತಿವೆ ಎಂದು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಟಿ.ಜೆ.ಉದೇಶ್.

18 ವರ್ಷದ ಒಳಗಿನವರು ತಪ್ಪಿಸಿಕೊಂಡರೆ ಪೋಕ್ಸೊದಡಿ ಅಪಹರಣ ಎಂದೇ ಪ್ರಕರಣ ದಾಖಲಿಸಲಾಗುತ್ತದೆ. ಕೆಲವು ಮಕ್ಕಳು ಪ್ರೀತಿ–ಪ್ರೇಮದ ಕಾರಣಕ್ಕೆ ಪ್ರಿಯಕರನ ಜತೆ ಓಡಿ ಹೋಗಿ ಆ ಸಂದರ್ಭದಲ್ಲಿ ದೈಹಿಕ ಸಂಪರ್ಕ ನಡೆದಿದ್ದರೆ ಆ ಪ್ರಕರಣವೂ ಪೋಕ್ಸೊದಡಿ ಬರುತ್ತದೆ. ಪ್ರೀತಿಯ ಕಾರಣಕ್ಕೆ ಮಕ್ಕಳು ಮನೆ ಬಿಡುವುದು ಬೇಸಿಗೆ ಅವಧಿಯಲ್ಲಿಯೇ ಹೆಚ್ಚು. ಈ ಪ್ರಕರಣಗಳ ಅಂಕಿ ಅಂಶಗಳನ್ನು ತುಲನೆ ಮಾಡಿದರೆ ಇದು ತಿಳಿಯುತ್ತದೆ ಎಂದು ವಿವರಿಸಿದರು.

Post Comments (+)