ಗುರುವಾರ , ನವೆಂಬರ್ 21, 2019
26 °C

ಕ್ಷಮಿಸಿ, ಕೇಬಿ ವಾಕಿಂಗ್ ಹೋಗಿದ್ದಾರೆ

Published:
Updated:

ಕೆ.ಬಿ.ಸಿದ್ದಯ್ಯ ಅವರನ್ನು ಸ್ಮರಿಸಿ ಹಿರಿಯ ರಂಗಕರ್ಮಿ ನಟರಾಜ ಹೊನ್ನವಳ್ಳಿ ಪದ್ಯ

ಕ್ಷಮಿಸಿ
ಕೇಬಿ ವಾಕಿಂಗ್
ಹೋಗಿದ್ದಾರೆ
ಇನ್ನೇನು
ಬರುತ್ತಾರೆ

ಉದ್ದಕೂ ಬಿದ್ದ
ಉಪ್ಪಾರಳ್ಳಿ
ರಸ್ತೆ
ಬಿಕೋ ಅನ್ನಿಸುತ್ತದೆ
ಕೇಬಿಯ
ಕಾಯುತ್ತಿದೆ
ವಾಪಸ್
ಬರುವವರೆಂದು
ಸರ್ಕಲ್‌ ಹೊಟೆಲಲ್ಲಿ
ಟೀ ಕುಡಿದು
'ಬನ್ ತಿಂತಿಯೇನೋ'
ಎಂದು
ಕೇಳುವವರೆಂದು.

ವಾಕಿಂಗ್ ಹೋಗಿದ್ದಾರೆ
ಕೇಬಿ
ಇನ್ನೇನು ಬರುತ್ತಾರೆ

ಟೀಶರ್ಟ್ ಮೇಲೆ
ಕಾಕಾ
ಲುಂಗಿಗೆ ಇನ್ ಶರ್ಟ್
ಮಾಡಿ
ದಪ್ಪ ದಂಡ ಹಿಡಿದು
ಹೊಗಿದ್ದಾರೆ
ಕೇಬಿ
ಇನ್ನೇನು ಬರುತ್ತಾರೆ
ಈದಿನ
ಸ್ವಲ್ಪ ಲೇಟಾಗಬಹುದು
ಅಷ್ಟೇ...

ಅಲ್ಲಮನ ಜೊತೆ ಹೋಗಿದ್ದರೆ
ಮಾತ್ರ
ತಡವಾಗುತ್ತದೆ
ಮುಂದಣ ಹೆಜ್ಜೆಗಳನ್ನು ಅರಿಯದೇ
ಅಲ್ಲಿಂದ ಬರಲಾರರು
ಬರುವಾಗ
ಬಕಾಲ ಮುನಿಯ
ಕಂಡು
ಮಾತಾಡಿಸಿ ದಕ್ಲರ ಜೊತೆ
ಹೋಗಿ
ಗಲ್ಲೇಬಾನಿಯ ಆಳಕ್ಕಿಣುಕಿ
ಅಲ್ಲೇ
ನಿಂತುಬಿಟ್ಟರೋ
ಏನೋ?
ಯಾರಾದರೂ ಎಚ್ಚರಿಸಿ
ಕಳಿಸುವವರೆಗೆ
ನಾವೂ ಕಾಯಬೇಕು

ಇಲ್ಲಾ....
ಇಲ್ಲೆ ಎಲ್ಲೋ ತಿರುವಿನಲ್ಲಿ
ಇದ್ದಾರೆ
ಇನ್ನೇನು ಬರುತ್ತಾರೆ
ವಾಕಿಂಗ್
ಇಂದ ಕೇಬಿ.

–ನಟರಾಜ್‌ ಹೊನ್ನವಳ್ಳಿ, ರಂಗಕರ್ಮಿ

––

ಕುಟುಂಬದ ಸದಸ್ಯನಂತೆ ಇದ್ದ ಬಹುಕಾಲದ ಗೆಳೆಯ ಅಗಲಿರುವುದು ನೋವಿನ ಸಂಗತಿ. ರೈತ ಹಾಗೂ ದಲಿತ ಹೋರಾಟವನ್ನು ಒಟ್ಟಿಗೆ ಕರೆದುಕೊಂಡು ಹೋಗಬೇಕು ಎಂಬುದು ಅವರ ಆಸೆಯಾಗಿತ್ತು. ದಲಿತ ಹೋರಾಟದಲ್ಲಿ ಇದ್ದರೂ ಸಹ ರೈತ, ಕಾರ್ಮಿಕ ಹಾಗೂ ಇತರೆ ಹೋರಾಟಗಳನ್ನು ಬೆಸೆಯಬೇಕು ಎಂಬುದು ಅವರ ಆಸೆಯಾಗಿತ್ತು. ಸಂಕಷ್ಟದ ಕಾಲದಲ್ಲಿ ಸಿದ್ದಯ್ಯ ಅವರನ್ನು ಕಳೆದುಕೊಂಡಿರುವುದು ಬೇಸರದ ಸಂಗತಿ.

– ಪ್ರೊ.ದೊರೈರಾಜು

ಪ್ರತಿಕ್ರಿಯಿಸಿ (+)