ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

22 ಎಂಜಿನಿಯರಿಂಗ್‌ ಪದವೀಧರರು ಕಾರಾಗೃಹ ವೀಕ್ಷಕರು

1ನೇ ತಂಡದ ಕಾರಾಗೃಹ ವೀಕ್ಷಕ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ
Last Updated 18 ಜೂನ್ 2019, 20:28 IST
ಅಕ್ಷರ ಗಾತ್ರ

ತುಮಕೂರು: 22 ಎಂಜಿನಿಯರಿಂಗ್‌ ಪದವೀಧರರು, 24 ನಿವೃತ್ತ ಸೈನಿಕರು, 59 ಎಂ.ಎ ಪದವೀಧರರು, ಇಬ್ಬರು ಬಿ.ಎ ಪದವೀಧರರು ಕಾರಾಗೃಹ ವೀಕ್ಷಕರಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದರು.

ನಗರದ ಜಿಲ್ಲಾ ಕವಾಯತು ಮೈದಾನದಲ್ಲಿ, ತಾತ್ಕಾಲಿಕ ಪೊಲೀಸ್‌ ತರಬೇತಿ ಶಾಲೆಯ 1ನೇ ತಂಡದ ಕಾರಾಗೃಹ ವೀಕ್ಷಕ (ಜೈಲ್‌ ವಾರ್ಡರ್‌) ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ಇದಕ್ಕೆ ಸಾಕ್ಷಿಯಾಯಿತು.

ರಾಜ್ಯದ ನಾನಾ ಭಾಗದಿಂದ ಆಯ್ಕೆಯಾದ 115 ಅಭ್ಯರ್ಥಿಗಳು, 9 ತಿಂಗಳ ತರಬೇತಿ ಮುಗಿಸಿ ಕರ್ತವ್ಯಕ್ಕೆ ಹಾಜರಾಗುವ ಹುಮ್ಮಸ್ಸಿನಲ್ಲಿ ಅತ್ಯಂತ ಶಿಸ್ತಿನಿಂದ ಪಥಸಂಚಲನದಲ್ಲಿ ಹೆಜ್ಜೆ ಹಾಕಿದರು.

ನಂತರ ಮಾತನಾಡಿದ ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕ ಮತ್ತು ಕಾರಾಗೃಹ ಮಹಾನಿರೀಕ್ಷಕ ಎನ್‌.ಎಸ್‌.ಮೇಘರಿಕ್‌, ‘ಯಾವುದೇ ದೇಶದಲ್ಲಿ ಕಾರಾಗೃಹ ವ್ಯವಸ್ಥೆ ಸರಿ ಇಲ್ಲದಿದ್ದರೆ, ಅಲ್ಲಿ ನ್ಯಾಯಾಂಗವೂ ವಿಫಲವಾಗುತ್ತದೆ. ಆದ್ದರಿಂದ ಕಾರಾಗೃಹ ಎಂಬುದು ಅಪರಾಧಿಯ ಮನವರಿಕೆಯ ಜಾಗ’ ಎಂದರು.

‘ನಿರ್ಲಕ್ಷಿತ ಇಲಾಖೆ ಎಂದೇ ಹಣೆಪಟ್ಟಿ ಕಟ್ಟಿಕೊಂಡಿದ್ದ ನಾವು, ಈ ಎರಡು ವರ್ಷಗಳಲ್ಲಿ ಅಭಿವೃದ್ಧಿಯತ್ತ ಹೆಜ್ಜೆ ಹಾಕುತ್ತಿದ್ದೇವೆ. 5 ಕೇಂದ್ರ ಕಾರಗೃಹಗಳ ಸ್ಥಾಪನೆ, ಕರ್ನಾಟಕ ಕಾರಾಗೃಹ ಅಭಿವೃದ್ಧಿ ಮಂಡಳಿ ಸ್ಥಾಪನೆ, 6ನೇ ವೇತನ ಆಯೋಗ ಸ್ಥಾಪಿಸಲಾಗುತ್ತಿದೆ’ ಎಂದು ತಿಳಿಸಿದರು.

ನಂತರ ತರಬೇತಿಯ ಅವಧಿಯಲ್ಲಿ ಉತ್ತಮ ಪ್ರದರ್ಶನ ತೋರಿದ ಪ್ರಶಿಕ್ಷಣಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.

ಒಳಾಂಗಣ ವಿಭಾಗದಲ್ಲಿ ಮೈಸೂರಿನ ಸಿ.ಬಸವರಾಜು, ಹೊರಾಂಗಣ ವಿಭಾಗದಲ್ಲಿ ಬೆಳಗಾವಿಯ ಮಹೇಶ್‌ ಭಜಂತ್ರಿ ಪ್ರಶಸ್ತಿ ಪಡೆದರು. ಫೈರಿಂಗ್‌ ವಿಭಾಗದಲ್ಲಿ ಅಥಣಿಯ ಸುಖದೇವ್‌ ಘನವಟ್ಟಿ, ಅಥಣಿ (ಪ್ರಥಮ), ಹರಪನಹಳ್ಳಿಯ ಜಿ.ಸಿ.ಕಾರ್ತಿಕ್ (ದ್ವಿತೀಯ). ಐಜಿ ಕಪ್‌ ವಿಭಾಗದಲ್ಲಿ ಅಥಣಿಯ ಅರುಣ್‌ ಎಸ್‌.ಪಡತಾರೆ ಬಹುಮಾನ ಪಡೆದರು. ಸವದತ್ತಿಯ ಶ್ರೀಶೈಲ ಬೆನಕಟ್ಟಿ ಸರ್ಮೋತ್ತಮ ಪ್ರಶಸ್ತಿ ಪುರಸ್ಕೃತರಾದರು.

ಪಥ ಸಂಚಲನ ಮುಗಿಯುತ್ತಿದಂತೆ ದೂರದ ಊರುಗಳಿಂದ ಬಂದಿದ್ದ ಪ್ರಶಿಕ್ಷಣಾರ್ಥಿಗಳ ಪೋಷಕರು ಮತ್ತು ಕುಟುಂಬದವರು ತಮ್ಮ ಮಕ್ಕಳ ಜೊತೆ ಭಾವಚಿತ್ರ ತೆಗೆಸಿಕೊಂಡರು. ಬಹುಮಾನ ಪಡೆದ ಗೆಳೆಯನನ್ನು ಅಭಿನಂದಿಸಲು ಸ್ನೇಹಿತರು ಮುಗಿಬಿದ್ದರು. ಸಾರ್ವಜನಿಕರು ತಮ್ಮ ಮೊಬೈಲ್‌ನಲ್ಲಿ ಪಥ ಸಂಚಲನದ ದೃಶ್ಯಗಳನ್ನು ಸೆರೆಹಿಡಿದರು.

ಕೇಂದ್ರ ವಲಯ ಪೊಲೀಸ್‌ ಮಹಾ ನಿರೀಕ್ಷಕ ಕೆ.ವಿ.ಶರತ್‌ಚಂದ್ರ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ವಂಶಿಕೃಷ್ಣ, ತರಬೇತಿ ಶಾಲೆಯ ಪ್ರಾಂಶುಪಾಲರು ಹಾಗೂ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ವಿ.ಜೆ.ಶೋಭಾರಾಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT