ಬುಧವಾರ, ಜುಲೈ 28, 2021
29 °C
ತುರುವೇಕೆರೆ ತಾಲ್ಲೂಕು ಗಿರಿಯನಹಳ್ಳಿ ಕೆಂಪಯ್ಯ ನಿಗೂಢ ಸಾವು ಪ್ರಕರಣ; ಕುಟುಂಬಕ್ಕೆ ರಕ್ಷಣೆ ನೀಡಲು ಆಗ್ರಹ

‘ತನಿಖೆಯಲ್ಲಿ ಪೊಲೀಸ್ ವೈಫಲ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ‘ತುರುವೇಕೆರೆ ತಾಲ್ಲೂಕು ಗಿರಿಯನಹಳ್ಳಿಯ ಪರಿಶಿಷ್ಟ ಜಾತಿಗೆ ಸೇರಿದ ಕೆಂಪಯ್ಯ ನಿಗೂಢವಾಗಿ ಸಾವನ್ನಪ್ಪಿದ್ದು, ಪೊಲೀಸ್ ಇಲಾಖೆ ಸರಿಯಾಗಿ ತನಿಖೆ ನಡೆಸದೆ ವಿಫಲವಾಗಿದೆ’ ಎಂದು ಸತ್ಯಶೋಧನಾ ಸಮಿತಿ ಆರೋಪಿಸಿದೆ.

ಕೆಂಪಯ್ಯ ನಿಗೂಢವಾಗಿ ಸಾವನ್ನಪ್ಪಿದ್ದರೂ ಮರಣೋತ್ತರ ಪರೀಕ್ಷೆಯ ವರದಿಯನ್ನು ಈವರೆಗೂ ಕುಟುಂಬಸ್ಥರಿಗೆ ನೀಡಿಲ್ಲ. ಈ ಪ್ರಕರಣದಲ್ಲಿ ಪೊಲೀಸರು ದೂರುದಾರರ ಮನವಿಯನ್ನು ಪರಿಗಣಿಸಿಲ್ಲ. ತನಿಖೆಯ ಪ್ರಾಥಮಿಕ ಹಂತದ ಕ್ರಮಗಳನ್ನೂ ಕೈಗೊಂಡಿಲ್ಲ. ಅಶಕ್ತ ಕುಟುಂಬದ ರಕ್ಷಣೆಗೆ ಮುಂದಾಗಿಲ್ಲ ಎಂದು ಸಮಿತಿ ನೇತೃತ್ವ ವಹಿಸಿದ್ದ ಹಾಗೂ ಪಿಯುಸಿಎಲ್ ಅಧ್ಯಕ್ಷ ಕೆ.ದೊರೈರಾಜ್ ಪತ್ರಿಕಾಗೋಷ್ಠಿಯಲ್ಲಿ ಬುಧವಾರ ದೂರಿದರು.

‘ಮೃತನ ಕುಟುಂಬಕ್ಕೆ ರಕ್ಷಣೆ ಕೊಡಬೇಕಾದ ಪೊಲೀಸ್ ಇಲಾಖೆ ಕೈಚೆಲ್ಲಿ ಕುಳಿತಿದೆ. ತರುವೇಕೆರೆಯಲ್ಲಿ ದೌರ್ಜನ್ಯಗಳು ನಡೆಯುತ್ತಿದ್ದರೂ ಬಡವರ ಗೋಳು ಕೇಳುವವರೇ ಇಲ್ಲ. ಈ ಕೂಡಲೇ ಮೃತನ ಕುಟುಂಬಕ್ಕೆ ರಕ್ಷಣೆ ನೀಡಬೇಕು. ನಿಗೂಢ ಸಾವಿನ ಪ್ರಕರಣವನ್ನು ಸೂಕ್ತ ತನಿಖೆ ನಡೆಸಬೇಕು. ಬಡಕುಟುಂಬಕ್ಕೆ ನ್ಯಾಯ ಒದಗಿಸಬೇಕು’ ಎಂದು ಆಗ್ರಹಿಸಿದರು.

ಮೃತ ಕೆಂಪಯ್ಯ ಪುತ್ರಿ ಚೈತ್ರ ಮಾತನಾಡಿ, ‘ನಮ್ಮ ತಂದೆಯ ಸಾವಿಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಆ ಮೂಲಕ ನ್ಯಾಯ ದೊರಕಿಸಿಕೊಡಬೇಕು. ನಮಗೆ ಜೀವಬೆದರಿಕೆ ಇದೆ. ಮನೆಯಲ್ಲಿ ಹಣ್ಣುಮಕ್ಕಳೇ ಇರುವುದರಿಂದ ರಕ್ಷಣೆ ನೀಡಬೇಕು’ ಎಂದು ಮನವಿ ಮಾಡಿದರು.

ಹೈಕೋರ್ಟ್ ವಕೀಲ ಎಸ್.ಶಿವಮಣಿಥನ್, ‘ಕೆಂಪಯ್ಯ ಸಾವು ಪ್ರಕರಣದಲ್ಲಿ ಸ್ಥಳ ಮಹಜರು ಮಾಡಿಲ್ಲ. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಾಕ್ಷಿದಾರರನ್ನು ತುಮಕೂರಿಗೆ ಕರೆಸಿಕೊಂಡು ಹೇಳಿಕೆ ಪಡೆದಿದ್ದಾರೆ. ಘಟನೆ ಸ್ಥಳದಲ್ಲಿ ಹೇಳಿಕೆ ಪಡೆದಿಲ್ಲ. ಇದು ಪೊಲೀಸರ ವೈಫಲ್ಯ’ ಎಂದು ಟೀಕಿಸಿದರು.

‘ದಂಡಿನಶಿವರ ಪೊಲೀಸ್ ಠಾಣೆ ಹೆಡ್‌ಕಾನ್‌ಸ್ಟೆಬಲ್ ಗಂಗಣ್ಣ ಘಟನೆ ಸಂಬಂಧ ಸಾಕ್ಷ್ಯ ಸಂಗ್ರಹಿಸಿಲ್ಲ. ಎಫ್‌ಐಆರ್ ದಾಖಲಿಸಿ ತಿಂಗಳು ಕಳೆದರೂ ಆರೋಪಪಟ್ಟಿ ಸಲ್ಲಿಸಿಲ್ಲ. ಆರೋಪಿಗಳು ಸ್ಥಳದಲ್ಲಿದ್ದರೂ ಅವರ ಮೊಬೈಲ್ ಸಿಮ್ ಹಾಗೂ ಇತರ ವಿವರ ಸಂಗ್ರಹಿಸಿಲ್ಲ. ಪೊಲೀಸರೊಂದಿಗೆ ವೈದ್ಯರು ಶಾಮೀಲಾಗಿದ್ದಾರೆ. ಕಂದಾಯ ಇಲಾಖೆಯೂ ಕ್ರಮ ಜರುಗಿಸಿಲ್ಲ. ಪೊಲೀಸ್, ವೈದ್ಯರ ಲೋಪಗಳು ಎದ್ದುಕಾಣುತ್ತವೆ’ ಎಂದು ಆರೋಪಿಸಿದರು.

ಸ್ಲಂ ಜನಾಂದೋಲನ ಕರ್ನಾಟಕ ಸಂಚಾಲಕ ಎ.ನರಸಿಂಹಮೂರ್ತಿ, ಸತ್ಯಶೋಧನಾ ಸಮಿತಿ ಸದಸ್ಯ ಟಿ.ವಿ.ನರಸಿಂಹಪ್ಪ, ಪರ್ಯಾಯ ಕಾನೂನು ವೇದಿಕೆಯ ಬಸವಪ್ರಸಾದ್ ಕುನಾಲೆ, ಪಿಯುಸಿಎಲ್ ಉಪಾಧ್ಯಕ್ಷೆ ದೀಪಿಕ, ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್, ಎನ್.ಕೆ.ಸುಬ್ರಮಣ್ಯ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.